ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಯಾದರೆ ಅವರಿಗೆ ಎಲ್ಲ ಗೌರವಗಳೊಂದಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅರುಣ್ ಪುತ್ತಿಲ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರು, ಸಂಘಟನ ಕಾರ್ಯದರ್ಶಿಗಳು ಮತ್ತು ಹಿರಿಯರು ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಅವರೆಲ್ಲರೂ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತವಾದ ಆಹ್ವಾನ ನೀಡಿದ್ದಾರೆ ಎಂಬುದನ್ನು ಸ್ವತಃ ರಾಜ್ಯಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಕಾಲಹರಣ ಮಾಡಿಲ್ಲ. ಕೇವಲ ಪುತ್ತಿಲ ಮಾತ್ರವಲ್ಲ ಪಕ್ಷದ ತಣ್ತೀ, ಸಿದ್ಧಾಂತ ಒಪ್ಪಿ ಬರುವ ಎಲ್ಲರಿಗೂ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ ಇದೆ. ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರ ಕರೆ ಮೇರೆಗೆ ಬಿಜೆಪಿ ಸೇರ್ಪಡೆಗೊಳ್ಳುವವರಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದರು.
ಅರುಣ್ ಪುತ್ತಿಲ ಈ ಹಿಂದೆ ಬಿಜೆಪಿಯಲ್ಲಿದ್ದರು. ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ ಬಳಿಕ ಸಹಜವಾಗಿಯೇ ಪಕ್ಷದಿಂದ ದೂರವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ವೇಳೆ ಅರುಣ್ ಪುತ್ತಿಲ ಅವರು ಪಕ್ಷದಲ್ಲಿ ಜಿಲ್ಲೆ ಅಥವಾ ಮಂಡಲದ ಅಧ್ಯಕ್ಷ ಸ್ಥಾನದ ಅಪೇಕ್ಷೆ ಇರಿಸಿದ್ದಾರೆ. ಆದರೆ ಬಿಜೆಪಿ ಸೇರ್ಪಡೆ ವೇಳೆ ಯಾವುದೇ ಷರತ್ತು, ಒತ್ತಡ ಇರಿಸುವ ಕ್ರಮವಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆಯಾಗಬೇಕು. ಆ ಬಳಿಕ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ನಿರ್ಣಯ ಮಾಡಲಾಗುತ್ತದೆ. ಹಾಗೆಯೇ ಅರುಣ್ ಪುತ್ತಿಲರಿಗೂ ಬಿಜೆಪಿ ಸೇರ್ಪಡೆ ಅನಂತರ ಅವರಿಗೆ ಸಲ್ಲಬೇಕಾದ ಎಲ್ಲ ಗೌರವಗಳೊಂದಿಗೆ ಸ್ಥಾನಮಾನ ನೀಡಲಾಗುವುದು. ಈಗಲೂ ಪುತ್ತಿಲ ಜತೆ ಬಿಜೆಪಿ ಸಂಪರ್ಕದಲ್ಲಿದ್ದು, ಶೀಘ್ರವೇ ಅವರು ಬಿಜೆಪಿ ಸೇರುವ ವಿಶ್ವಾಸ ಇದೆ ಎಂದರು.
ಒಂದು ವೇಳೆ ಬಿಜೆಪಿಯ ಮುಕ್ತ ಆಹ್ವಾನ ತಿರಸ್ಕರಿಸಿದರೆ ಮುಂದೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಚುನಾವಣೆ ಮೂಲಕವೇ ಪಕ್ಷೇತರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ ಎಂದರು.
ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ವಿದ್ಯಾ ಗೌರಿ, ಪುರುಷೋತ್ತಮ, ಗಿರೀಶ್, ಪ್ರಭಾರಿಗಳಾದ ಪ್ರೇಮಾನಂದ ಶೆಟ್ಟಿ, ಸುನಿಲ್, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಮನೋಹರ ಶೆಟ್ಟಿ, ವಕ್ತಾರ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.