Advertisement

ರೈತರಿಗೆ ಸೂಕ್ತ ಪರಿಹಾರಕ್ಕೆ ಶಾಸಕರ ಸೂಚನೆ

02:56 PM Oct 15, 2022 | Team Udayavani |

ಧಾರವಾಡ: ಸತತ ಮಳೆಯಿಂದಾಗಿ ತಾಲೂಕಿನಾದ್ಯಂತ ಸೋಯಾಬಿನ್‌, ಹೆಸರು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಅಧಿಕಾರಿಗಳು ಕೂಡಲೇ ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

Advertisement

ಮಳೆಯಿಂದ ತಾಲೂಕಿನಲ್ಲಿ ಉಂಟಾದ ಬೆಳೆಹಾನಿ ಕುರಿತಂತೆ ಡಿಸಿ ಕಚೇರಿಯಲ್ಲಿ ಕೈಗೊಂಡ ಸಭೆಯಲ್ಲಿ ಅವರು ಮಾತನಾಡಿದರು.

ತೀವ್ರ ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳು ಹಾಗೂ ತಾಲೂಕಿನ ರೈತರ ಹೊಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಹಳಷ್ಟು ಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ಡಿಸಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಬೆಳೆ ಮತ್ತು ಮನೆಗಳ ಹಾನಿಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ, ಪರಿಹಾರ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗುವಂತೆ ಕ್ರಮವಹಿಸಬೇಕು. ಮನೆ ಮತ್ತು ಬೆಳೆ ಹಾನಿಯ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ಮತ್ತು ಮನೆಗಳ ಹಾನಿಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಧಾರವಾಡ ಉಪವಿಭಾಗಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಈ ಕಾರ್ಯಗಳ ಮೇಲೆ ನಿರಂತರ ನಿಗಾವಹಿಸಿ ನಿಯಮಾನುಸಾರವಾಗಿ ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ ಅತೀ ಮಳೆಯಿಂದಾಗಿ ಉಂಟಾಗಿರುವ ಹಾನಿಗಳ ಕುರಿತು ಬೆಳೆ ಸಮೀಕ್ಷೆ ಮತ್ತು ಮನೆ ಸಮೀಕ್ಷೆ, ರಸ್ತೆ ಸಮೀಕ್ಷೆಗಳ ಕುರಿತು ಅಧಿಕಾರಿಗಳ ತಂಡ ರಚಿಸಿ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಕ್ರಮ ವಹಿಸಲಾಗಿದೆ. ತಾಲೂಕಾ ಮಟ್ಟದಲ್ಲಿರುವ ಎಲ್ಲ ತಹಶೀಲ್ದಾರರು ಮನೆ ಅಥವಾ ಬೆಳೆ ಹಾನಿ ಕುರಿತು ರೈತರು ಅಥವಾ ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣ ಖುದ್ದು ಭೇಟಿ ನೀಡಿ ಪರಿಹರಿಸಲು ಸೂಚಿಸಲಾಗಿದೆ. ಪರಿಹಾರ ಜಮೆ ಮಾಡುವಲ್ಲಿ ಅತ್ಯಂತ ಕರಾರುವಕ್ಕಾಗಿ ಕೆಲಸ ಮಾಡುವಂತೆ ಎಲ್ಲ ಹಂತದ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ನಿರ್ದೇಶನ ನೀಡಲಾಗುತ್ತಿದೆ. ಇಷ್ಟಾಗಿಯೂ ಯಾವುದೇ ಲೋಪ ಕಂಡುಬಂದಲ್ಲಿ ಅಥವಾ ಸಾರ್ವಜನಿಕ ದೂರುಗಳು ತನಿಖೆಯಲ್ಲಿ ಸತ್ಯಾಸತ್ಯತೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಂಚಾಯಾತ್‌ ರಾಜ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎನ್‌. ಗೌಡರ್‌, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಡಾ| ಮುರಳೀಧರರಾವ್‌, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ| ಉಮೇಶ ಕೊಂಡಿ, ತಹಶೀಲ್ದಾರ್‌ ಸಂತೋಷ ಹಿರೇಮಠ ಇನ್ನಿತರರಿದ್ದರು. ಜಿಲ್ಲೆಗೂ ಕಾಲಿಟ ಚರ್ಮಗಂಟು ರೋಗ ಧಾರವಾಡ ತಾಲೂಕಿನ ವಿವಿಧೆಡೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ವರದಿಯಾಗಿದೆ.

ಅದರಲ್ಲೂ ವಿಶೇಷವಾಗಿ ಮಾರಡಗಿ, ಹೆಬ್ಬಳ್ಳಿ, ಚಂದನಮಟ್ಟಿ ಗ್ರಾಮದಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ರೈತರ ಜೀವಾಳ ಆಗಿರುವ ಜಾನುವಾರುಗಳನ್ನು ತುರ್ತು ಕ್ರಮವಹಿಸಿ ರಕ್ಷಣೆ ಮಾಡಬೇಕಿದೆ. ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಎಲ್ಲ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಅಮೃತ ದೇಸಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next