ಬಾಗಲಕೋಟೆ: “ಕಬ್ಬು ಬಾಕಿ ಹಣ ಕೊಡುವಂತೆ ಸರ್ಕಾರ ವಿಧಿಸಿದ್ದ ಗಡುವು ಮುಗಿದರೂ ರಾಜ್ಯದ 36 ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಬಾಕಿ ಕೊಟ್ಟಿಲ್ಲ. ಅಂತಹ ಕಾರ್ಖಾನೆಗಳ ಸಕ್ಕರೆ ಗೋದಾಮು ಸೀಜ್ ಮಾಡಲು ಆದೇಶಿಸಿದ್ದು, ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಕೊಡಿಸಲಾಗುವುದು’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ., “ರಾಜ್ಯದಲ್ಲಿ ಒಟ್ಟು 67 ಸಕ್ಕರೆ ಕಾರ್ಖಾನೆಗಳಿದ್ದು, 31 ಕಾರ್ಖಾನೆಗಳು ಶೇ.100 ಎಫ್‌ಆರ್‌ಪಿ ಅನ್ವಯ ಪೂರ್ಣ ಬಾಕಿ ಕೊಟ್ಟಿವೆ. 31 ಕಾರ್ಖಾನೆಗಳು ಶೇ.75ಕ್ಕಿಂತ ಹೆಚ್ಚು ಹಣ ನೀಡಿವೆ. 5 ಕಾರ್ಖಾನೆಗಳು ಶೇ.75ಕ್ಕಿಂತ ಕಡಿಮೆ ಬಾಕಿ ಕೊಟ್ಟಿವೆ. ಹೀಗಾಗಿ 36 ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ, ರೈತರ ಬಾಕಿ ಕೊಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ’ ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ಮಧ್ಯೆ ಸಮಸ್ಯೆ ನಿರಂತರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನಲ್ಲಿ ಬುಧವಾರ(ಜು.3) ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ. ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚ (ಎಚ್‌ಎನ್‌ಟಿ) ಕಡಿತ ಮಾಡುವ ಕುರಿತು ಹಲವು ದೂರುಗಳಿದ್ದು, ಇದಕ್ಕೆ ಸ್ಪಷ್ಟ ನಿಯಮಾವಳಿ ರೂಪಿಸಲಾಗುವುದು. ಅದಕ್ಕೂ ಮುಂಚೆ ಕಬ್ಬು ಬೆಳೆಗಾರರಿಂದ ಸಲಹೆ ಪಡೆದಿದ್ದೇನೆ ಎಂದರು.
ಮಹಾರಾಷ್ಟ್ರಕ್ಕೆ ತಂಡ: ರಾಜ್ಯದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರ ಮಾದರಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ನಿಗದಿ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರಕ್ಕೆ ಒಂದು ತಂಡ ಕಳುಹಿಸಲಾಗುವುದು. ಆ ತಂಡ ನೀಡುವ ವರದಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸದ್ಯ ಕಬ್ಬು ಕಟಾವಿಗಿಂತ ಸಾಗಣೆ ವೆಚ್ಚವೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗಳು ಹಾಕುತ್ತಿವೆ. ಒಂದೊಂದು ಕಾರ್ಖಾನೆ ಒಂದು ರೀತಿಯ ದರ ನಿಗದಿ ಮಾಡಿವೆ. ಆಯಾ ಕಾರ್ಖಾನೆಗಳಿಗೆ ಕಬ್ಬು ಪ್ರದೇಶ ನಿಗದಿ ಇದ್ದರೂ, ಹೆಚ್ಚಿನ ಸಾಗಾಟ ವೆಚ್ಚ ಹಾಕುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಕೇಂದ್ರಕ್ಕೆ ನಿಯೋಗ: ರಾಜ್ಯದ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ಕೆಲವು ಬೇಡಿಕೆ ಈಡೇರಿಕೆಗೆ ರಾಜ್ಯದ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ತೆಗೆದುಕೊಂಡು ಹೋಗಲು ಚಿಂತನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಕಾರ್ಖಾನೆಯವರು, ಸಕ್ಕರೆ ರಫ್ತು ಸಹಾಯಧನ ಬಂದ ಬಳಿಕ ಬಾಕಿ ಕೊಡುತ್ತೇವೆ ಎಂದು ಮುಚ್ಚಳಿಕೆ ಪತ್ರ ಕೊಡುತ್ತಿದ್ದಾರೆ. ಕೆಲವು ಕಾರ್ಖಾನೆಗಳು ಉಳಿಸಿಕೊಂಡ ಬಾಕಿಗಿಂತ ರಫ್ತು ಸಹಾಯಧನವೇ ಹೆಚ್ಚಿಗೆ ಬರಬೇಕಿದೆ.
ಕೇಂದ್ರ ಸರ್ಕಾರ ಕೂಡಲೇ ರಫ್ತು ಸಹಾಯಧನ ಬಿಡುಗಡೆ ಮಾಡಬೇಕು ಎಂದರು. ಬ್ರೆಜಿಲ್ ದೇಶದ ಮಾದರಿ ನಮ್ಮ ದೇಶದಲ್ಲೂ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ನೆರವಿಗೆ ಬರಲು ಪೆಟ್ರೋಲ್‌ನಲ್ಲಿ ಇಥೆನಾಲ್ ಬಳಕೆಗೆ ಅವಕಾಶ ಕೊಡಬೇಕು. ಇದರಿಂದ ಕಾರ್ಖಾನೆಗಳಿಗೂ ಲಾಭವಾಗುವ ಜತೆಗೆ ಸಕ್ಕರೆ ಉದ್ಯಮವೂ ಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ನಿಯೋಗ ಹೋದಾಗ ಲಿಖೀತ ರೂಪದ ಮನವರಿಕೆ ಮಾಡಲಾಗುವುದು ಎಂದರು.