ಯಕ್ಷಗಾನ ಕಲಾವಿದನಾಗಿ, ಮೇಳದ ಸಂಚಾಲಕರಾಗಿ, ಅನೇಕ ಕಲಾವಿದರ ಬದುಕನ್ನು ಕಟ್ಟಿಕೊಟ್ಟ ಧೀಮಂತ ಕೀರ್ತಿಶೇಷ ಬೋಳೂರು ದೋಗ್ರ ಪೂಜಾರಿಯವರ 39ನೇ ಸಂಸ್ಮರಣೆ ಹಾಗೂ ಖ್ಯಾತ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿಯವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗರೋಡಿ ಸರ್ವಮಂಗಳೆ ಸಭಾ ಭವನದಲ್ಲಿ ನಡೆಯಿತು. ಆ ಪ್ರಯುಕ್ತ ಖ್ಯಾತ ಕಲಾವಿದರಿಂದ ಸುಧನ್ವ ಮೋಕ್ಷ ಪ್ರಸಂಗ ತಾಳಮದ್ದಳೆ ರೂಪದಲ್ಲಿ ಪ್ರದರ್ಶಿಸಲ್ಪಟ್ಟಿತು.
ಗಟ್ಟಿ ಹಿಮ್ಮೇಳದೊಂದಿಗೆ ಮಾತಿನ ಮಂಟಪ ಆರಂಭವಾಗಿತ್ತು. ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು ಪ್ರಸಂಗದ ಓಘಕ್ಕೆ ಉತ್ತಮ ಆರಂಭ ನೀಡಿದರು. ಅವರಿಗೆ ಯುವ ಮದ್ಲೆಗಾರರಾದ ಚೈತನ್ಯಕೃಷ್ಣ ಪದ್ಯಾಣ ಮತ್ತು ಶ್ರೀಧರ ವಿಟ್ಲ ಸಹಕರಿಸಿದರು. ಮಧುಸೂದನ ಅಲೆವೂರಾಯರ ಚಕ್ರತಾಳವಿತ್ತು.
ಆಗ ಸುಧನ್ವನು ಎಂಬ ಹಾಡಿನೊಂದಿಗೆ ಆರಂಭವಾದ ತಾಳಮದ್ದಳೆಯಲ್ಲಿ ಜಬ್ಟಾರ್ ಸಮೋರವರು ಸುಧನ್ವನ ಪಾತ್ರವನ್ನು ನಿರ್ವಹಿಸಿ ಕಥೆಯ ಪ್ರಧಾನ ಬಿಂದುವಾದರು. ಪೀಠಿಕೆಯಲ್ಲಿಯೇ ವೀರ ಸುಧನ್ವನನ್ನು ಬಹಳ ಸುಂದರವಾಗಿಯೇ ಚಿತ್ರಿಸಿದರು. ನಂತರ ಪ್ರಭಾವತಿಯ ಪ್ರವೇಶದ ಪದ್ಯವನ್ನು ಹಿಮ್ಮೇಳದ ಎಲ್ಲಾ ಸಾಧ್ಯತೆಗಳನ್ನೂ ಮೀರಿ ಹಾಡಿ ರವಿಚಂದ್ರರು ಚಪ್ಪಾಳೆ ಗಿಟ್ಟಿಸಿದರು. ವರ್ಕಾಡಿ ರವಿ ಅಲೆವೂರಾಯರು ಹಾಡಿಗೆ ತಕ್ಕಂತೆ ಅರ್ಥ ಹೇಳಿ ದೈವಭಕ್ತಿ-ಪತಿಭಕ್ತಿಯನ್ನು ಪ್ರಸ್ತುತ ಪಡಿಸಿದರು. ಗಂಡನ ಬರುವಿಕೆಯನ್ನು ಕಂಡು ಹಿಗ್ಗಿ ಹೀರೇಕಾಯಿಯಾದ ಪ್ರಭಾವತಿ ಗಂಡನನ್ನು ಸ್ವಾಗತಿಸಿ, ಎಲ್ಲಿಗೋ ಗಮಿಸುವ ಧಾವಂತವನ್ನು ಪ್ರಶ್ನಿಸುತ್ತಾಳೆ. ನಳಿನಾಕ್ಷಿಯಾದ ಪ್ರಭಾವತಿಗೆ ಸವಿಸ್ತಾರವಾಗಿ ಜಬ್ಟಾರ್ ವಿವರಿಸುತ್ತಾರೆ. ಕಳವಳಗೊಂಡ ಪ್ರಭಾವತಿಗೆ ಸಮಾಧಾನ ಹೇಳುತ್ತಾನೆ. ಅಲ್ಲಿಗೇ ಸುಮ್ಮನಾಗದ ಪ್ರಭಾವತಿ ಶ್ರೀಕೃಷ್ಣನ ಬಗ್ಗೆ ಆಡುತ್ತಾಳೆ. ಆ ಕೃಷ್ಣಾರ್ಜುನರಲ್ಲೂ ಸೆಣಸಿ ಗೆಲ್ಲುತ್ತೇನೆ. ಉಳಿದಂತೆ ಕೃಷ್ಣಾರ್ಪಣ ಎನ್ನುತ್ತಾನೆ. ಆಗ ಆಕೆ ಋಣತ್ರಯಗಳ ಬಗ್ಗೆ ಹೇಳಿ ತಾನು ಋತುಸ್ವಾತೆಯಾಗಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಕೃಷಿ ಮಾಡಿ ಸಾಗಿ ಎನ್ನುತ್ತಾಳೆ. ಮಡದಿಯ ಅಭಿಪ್ರಾಯದ ಬಗ್ಗೆ ತರ್ಕಿಸಿ ಸುಧನ್ವ ಅಲ್ಲೇ ಉಳಿದು ಬಿಡುತ್ತಾನೆ. ಅಂತೂ ಪತಿ ಪತ್ನಿಯರ ಸಲ್ಲಾಪ, ಶಂಕೆ, ಧೈರ್ಯ ಹೇಳುವುದು ಎಲ್ಲವೂ ಅತ್ಯುತ್ತಮವಾಗಿಯೇ ಮೂಡಿ ಬಂತು. ತಾಳಮದ್ದಳೆಯ ರಂಗನ್ನು ಪ್ರೇಕ್ಷಕರಿಗೆ ಹಚ್ಚಿತು.
ನಂತರದ ಭಾಗದಲ್ಲಿ ಸುಧನ್ವಾರ್ಜುನರ ಮುಖಾಮುಖಿ. ಹಿರಿಯ ಕಲಾವಿದ ಡಾ| ಎಂ.ಪ್ರಭಾಕರ ಜೋಷಿಯವರು ಅರ್ಜುನನಾಗಿ ತಮ್ಮ ಎಂದಿನ ಧಾಟಿಯಲ್ಲಾ ಅರ್ಜುನನನ್ನು ಬಿಂಬಿಸಿದರು. ಸುಧನ್ವಾರ್ಜುನರ ಸಂಭಾಷಣೆ ಚೆನ್ನಾಗಿ ಮೂಡಿಬಂತು. ವಾದ-ಪ್ರತಿವಾದ, ಮಂಡನೆ-ಖಂಡನೆ ಮಾಡುತ್ತಾ ತಮ್ಮ ಪಾತ್ರಗಳನ್ನು ಬೆಳೆಸಿ ಆ ಪಾತ್ರಗಳ ಮುಖವಾಣಿಯಾದರು. ಈರ್ವರೂ ವಾಗ್ಮಿಗಳೇ. ಒಬ್ಬರನ್ನೊಬ್ಬರು ಎದುರಿಸುತ್ತಾ ವಿರೋಧಿಗಳು ‘ಇವರು ನಿಜಾರ್ಥದ ವಿರೋಧಿಗಳೇ’ ಎಂಬ ಭಾವ ಮೂಡಿಸಿ ಮಾತಿನಲ್ಲಾ ಬೆಳಗಿದರು. ನಂತರದಲ್ಲಿ ಇವರ ಮಧ್ಯೆ ಇನ್ನೋರ್ವ ಕಲಾವಿದ ಸರ್ಪಂಗಳ ಈಶ್ವರ ಭಟ್ರೂ ಶ್ರೀ ಕೃಷ್ಣನಾಗಿ ಪ್ರವೇಶಿಸಿ ಕಥೆಗೆ ಇನ್ನೂ ಮೆರುಗು ನೀಡಿದರು. ಅರ್ಜುನನಿಗೆ ಸಲಹೆ ನೀಡುತ್ತಾ ಶ್ರಿ ಕೃಷ್ಣ ಜೋಷಿಯವರ ಮಧ್ಯೆ ಸ್ವಾರಸ್ಯಕರ ಸಂಭಾಷಣೆಯೇ ನಡೆಯಿತು. ಮೂರು ಹುಲಿಗಳು ಸಮನ್ವತೆಯನ್ನು ಕಾಯ್ದುಕೊಳ್ಳತ್ತಾ ತಾಳಮದ್ದಲೆ ಕಳೆಗಟ್ಟುವಂತೆ ಮಾಡಿತು. ಜಬ್ಟಾರರು ಅವರ ಛಾಪನ್ನು ಮೂಡಿಸಿದರೆ ಹಿರಿಯ ಅರ್ಥವಾದಿಗಳಾದ ಜೋಷಿಯವರು ಹಾಗೂ ಸರ್ಪಂಗಳರವರು ಕಥಾ ಹಂದರವನ್ನು ಸುಂದರವಾಗಿ ಕಟ್ಟಿಕೊಟ್ಟು ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಮೂವರೂ ಪೈಪೋಟಿಯಿಂದ ‘ಸುಧನ್ವ ಮೋಕ್ಷ’ವನ್ನು ಕಳೆಗಟ್ಟಿಸಿದರು.
ಹೇಮಂತ್ ಗರೋಡಿ