ನರಸಿಂಹರಾಜು ಅವರ ಮಗಳು ಸುಧಾ ನರಸಿಂಹರಾಜು ಹಲವು ವರ್ಷಗಳ ನಂತರ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಸದ್ದಿಲ್ಲದೇ ಆ ಚಿತ್ರ ಬಿಡುಗಡೆಯೂ ಆಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಸಿದ್ದಿ ಸೀರೆ’. ವಿಶೇಷವೆಂದರೆ, ಈ ಚಿತ್ರ ವಿದೇಶಿ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಒಂದಲ್ಲ,ಎರಡಲ್ಲ ಬರೋಬ್ಬರಿ ಒಂಬತ್ತು ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಕನ್ನಡದ ಬಹುತೇಕ ಹೊಸಬರ ಚಿತ್ರಗಳು ದೇಶ ಸೇರಿದಂತೆ ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆ ಪಡೆಯುತ್ತಿವೆ. ಆ ಸಾಲಿಗೆ ಹೊಸಬರ “ಸಿದ್ದಿ ಸೀರೆ’ಯೂ ಸೇರಿದೆ. ಈ ಚಿತ್ರವನ್ನು ಬ್ರಹ್ಮಾನಂದರೆಡ್ಡಿ ಹಾಗು ಕೆ.ಎನ್.ಕೃಷ್ಣ ಮೂರ್ತಿ ನಿರ್ದೇಶಿಸಿದ್ದಾರೆ. ಟೆಕ್ಕಿ ನವೀನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ದಲಿತ ಮಹಿಳೆಯೊಬ್ಬಳ ಸೀರೆ ಕಥೆ.
ಆಕೆ ತನಗೆ ಸದ್ಗತಿ ದೊರಕಿಸುವ ಒಂದು ಸೀರೆಗಾಗಿ ಹೋರಾಟ ಮಾಡುವುದು ಚಿತ್ರದ ಹೈಲೈಟ್. 1990ರ ದಶಕದಲ್ಲಿ ಚಾಮರಾಜನಗರ ಬಳಿ ಇರುವ ಮಿರ್ಲೆ ಎಂಬ ಗ್ರಾಮದಲ್ಲಿ ನಡೆದಂತ ಸತ್ಯಘಟನೆ ಆಧರಿಸಿ, ಈ ಚಿತ್ರ ಮಾಡಲಾಗಿದೆ. ಆಗೆಲ್ಲಾ ಹಿರಿಯ ಮಹಿಳೆ ಸಾವನ್ನಪ್ಪಿದರೆ ಆಕೆಯ ಮೇಲೆ ಸೀರೆ ಹೊದಿಸಲಾಗುತ್ತಿತ್ತು. ಗುಣಮಟ್ಟದ ಸೀರೆ ಹೊದಿಸಿಕೊಂಡರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಆ ಮಹಿಳೆಯದು.
ಆದರೆ, ಆಕೆ ಬಡವಿ. ಸೀರೆ ಕೊಳ್ಳಲು ಸಾಧ್ಯವಾಗಲ್ಲ. ಅದಕ್ಕಾಗಿ ಹೇಗೆಲ್ಲಾ ಪರದಾಡುತ್ತಾಳೆ. ಆಕೆಯ ಸೀರೆ ವಿಷಯ ಎಷ್ಟೆಲ್ಲಾ ರಾಜಕೀಯ ತಿರುವು ಪಡೆದು, ಆ ಊರಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ ಎಂಬುದು ಕಥಾಹಂದರ. ಇಲ್ಲಿ ಸುಧಾನರಸಿಂಹರಾಜು ಸಿದ್ದಿ ಪಾತ್ರದಲ್ಲಿ ನಟಿಸಿದ್ದಾರೆ. ತುಂಬ ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡರೂ ಅದೊಂದು ಹೊಸಬಗೆಯ ಪಾತ್ರ ಎಂಬುದು ಅವರ ಮಾತು. ಆ ಪಾತ್ರಕ್ಕೆ ಮೇಕಪ್ ಇಲ್ಲದೆ, ಗಲೀಜು ಬಟ್ಟೆ ಹಾಕಿಕೊಂಡೇ ನಟಿಸಿದ್ದು ವಿಶೇಷವಂತೆ.
ಅದೊಂದು ಚಾಲೆಂಜ್ ಪಾತ್ರ ಎನ್ನುವ ಸುಧಾ ನರಸಿಂಹರಾಜು, ಇಡೀ ಚಿತ್ರ ನೋಡುಗರಿಗೆ ಹೊಸತನ ಕಟ್ಟಿಕೊಡುತ್ತದೆ ಎನ್ನುತ್ತಾರೆ ಅವರು. ಇನ್ನು, ಚಿತ್ರದಲ್ಲಿ ಸಿದ್ದಿ ಪುತ್ರಿಯಾಗಿ ಮಹಾಲಕ್ಷೀ ಬಜಾರಿಯಾಗಿ ಕಾಣಿಸಿಕೊಂಡರೆ, ಕವಿತಾ ಶೆಟ್ಟಿ ಪಕ್ಕದ ಮನೆ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ. ಸ್ವರ್ಣ ಚಂದ್ರ ಸಹೋದರನ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ರವಿಶಂಕರ್ ಮಿರ್ಲೆ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಜೈ ಕೃಪಲಾನಿ ಛಾಯಾಗ್ರಹಣ ಮಾಡಿದ್ದಾರೆ.