Advertisement
-ನಿಮ್ಮ ಬಾಲ್ಯ ಹೇಗಿತ್ತು?ಅಪ್ಪ ಅಮ್ಮ ಇಬ್ಬರೂ ರಂಗಭೂಮಿ, ಸಿನಿಮಾದಲ್ಲಿ ಸಾಕಷ್ಟು ಬ್ಯುಸಿ ಇರುತ್ತಿದ್ದರು. ಮನೆಯಲ್ಲಿ ನಾವು ನಾಲ್ಕು ಮಂದಿ ಮಕ್ಕಳು. ಎಷ್ಟೋ ಸಲ ನಾವು ನಾಟಕಗಳ ರಿಹರ್ಸಲ್ ನಡೆಯುವಾಗ ಸ್ಟೇಜ್ ಬಳಿ ಕುರ್ಚಿಗಳ ಮೇಲೇ ನಿದ್ದೆ ಹೋಗುತ್ತಿದ್ದೆವು. ಮನೆಯಲ್ಲೂ ನಾಟಕ ತಾಲೀಮು ಕುರಿತು ಚರ್ಚೆ ನಡೆಯುತ್ತಿತ್ತು. ನಾವು ಕುಳಿತು ನೋಡುತ್ತಿದ್ದೆವು, ಚರ್ಚೆ ಮಾಡುತ್ತಿದ್ದೆವು. ಅಪ್ಪ- ಅಮ್ಮ ಪ್ರಗತಿಪರ ಯೋಚನೆ ಹೊಂದಿದ್ದವರು. ನಮ್ಮನ್ನು ಗಂಡು ಮಕ್ಕಳಿಗೆ ಕಡಿಮೆ ಇಲ್ಲದಂತೆ ಬೆಳೆಸಿದರು. ನಾನು ಡಿಗ್ರಿ ಮುಗಿಸಿ, ಜೆಎನ್‌ಯುನಲ್ಲಿ ಅಡ್ವಟೈìಸಿಂಗ್‌ನಲ್ಲಿ ಪದವಿ ಪಡೆದೆ. ವೃತ್ತಿಯಾಗಿಯೂ ಅದೇ ಕ್ಷೇತ್ರವನ್ನು ಆಯ್ದುಕೊಂಡೆ. ಎಲ್ಲದಕ್ಕೂ ನಮ್ಮ ಪೋಷಕರು ಬೆಂಬಲ ಕೊಟ್ಟಿದ್ದಾರೆ. ಮದುವೆ ಸಮಯ ಬಂದಾಗಲೂ ಸಂಗಾತಿ ಆಯ್ಕೆಯ ನಿರ್ಧಾರವನ್ನೂ ಸಂಪೂರ್ಣವಾಗಿ ನನಗೇ ಬಿಟ್ಟಿದ್ದರು.
ಅಪ್ಪ ಅಮ್ಮ ರಂಗಭೂಮಿಯಲ್ಲಿ ಬ್ಯುಸಿ ಇದ್ದಾಗ ಅಜ್ಜಿ, ತಾತ, ಅಕ್ಕ ಯಾರಾದರೂ ನಮ್ಮ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಆದರೆ, ನಮ್ಮ ಮಕ್ಕಳು ನಮ್ಮಂತೆ ಅವಿಭಕ್ತ ಕುಟುಂಬದಲ್ಲಿ ಬೆಳೆಯಲಿಲ್ಲ. ಪೋಷಕರಿಬ್ಬರೂ ಹೊರಗೆ ಹೋಗಿ ಉದ್ಯೋಗ ಮಾಡುವಾಗ ಮಕ್ಕಳ ಮೇಲೆ ಸಹಜವಾಗಿ ಹೆಚ್ಚು ಒತ್ತಡವಿರುತ್ತದೆ. ನಮಗೂ ಅವರಿಗೆ ಕ್ವಾಲಿಟಿ ಟೈಮ್ ಕೊಡಲು ಕಷ್ಟವಾಗುತ್ತಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಸ್ವಾವಲಂಬಿಗಳಾಗುತ್ತಾರೆ. ಅದೂ ಒಂದು ರೀತಿಯಲ್ಲಿ ಒಳ್ಳೆಯದೇ… ಚಿಕ್ಕ ವಯಸ್ಸಿನಲ್ಲೇ ಅವರಿಗೆ ಕಷ್ಟ ಏನೆಂದು ತಿಳಿಯುತ್ತದೆ. ಅವರ ಜವಾಬ್ದಾರಿಗಳೇನೆಂದು ಅರ್ಥ ಆಗುತ್ತದೆ. ಮಕ್ಕಳು ಇನ್ನಷ್ಟು ಇಂಡಿಪೆಂಡೆಂಟ್ ಆಗಿ ಬೆಳೆಯುತ್ತಾರೆ. ಅವರಿಗೆ ತುಸು ಹೆಚ್ಚೇ ಕಾನ್ಫಿಡೆನ್ಸ್ ಇರುತ್ತದೆ. -ನಟನೆಯನ್ನು ಪೂರ್ಣಾವಧಿ ವೃತ್ತಿಯನ್ನಾಗಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು ಯಾವಾಗ?
ನಾನು ಮೊದಲಿನಿಂದಲೂ ರಂಗಭೂಮಿ ಜೊತೆ ಸಂಪರ್ಕ ಇರಿಸಿಕೊಂಡಿದ್ದೆ. ಕೆಲಸದ ಮಧ್ಯೆ ಬಿಡುವು ತೆಗೆದುಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ವೃತ್ತಿಯಲ್ಲಿರುವಾಗಲೇ “ಮತದಾನ’ ಮತ್ತು “ತಾಯಿ ಸಾಹೇಬ’ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಮುಂದೆ ಅಣ್ಣ ಪ್ರಕಾಶ್ ಬೆಳವಾಡಿ “ಗರ್ವ’ ಧಾರಾವಾಹಿ ಆರಂಭಿಸಿದ. ನನಗೆ ಅಭಿನಯಿಸಲು ಕೇಳಿದ. ಕೆಲಸದ ಮಧ್ಯೆ ಅಷ್ಟು ಸಮಯ ನನಗೆ ನೀಡಲಾಗುವುದಿಲ್ಲ ಎಂದು ಹೇಳಿಬಿಟ್ಟೆ. ಅದೇ ಸಮಯದಲ್ಲಿ ಟಿ.ಎನ್. ಸೀತಾರಾಂ “ಮನ್ವಂತರ’ದಲ್ಲಿ “ಭಾರತಿ’ ಪಾತ್ರಕ್ಕೆ ಆಫರ್ ನೀಡಿದರು. ಆಗಲೂ ನಾನು ಬೇಡ ಅಂದೆ. ಆಗ ಸೀತಾರಾಂ “ನಿಮ್ಮ ಪ್ರತಿಭೆಯನ್ನು ಈಗಲಾದರೂ ಬಳಸಿಕೊಳ್ಳಿ’ ಎಂದು ಹುರಿದುಂಬಿಸಿದರು. ಮನೆಯಲ್ಲೂ ಎಲ್ಲರೂ ಅದನ್ನೇ ಹೇಳಿದರು. ನಿಜಕ್ಕೂ ಭಾರತಿ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ ನಾನು ಎಲ್ಲೇ ಹೋದರೂ ಜನ ಭಾರತಿ ಪಾತ್ರದ ಬಗ್ಗೆ ಕೇಳುತ್ತಿದ್ದರು.
Related Articles
ಮನೆಯಲ್ಲಿ ಎಲ್ಲರಿಗೂ ನಾಟಕ, ಸಿನಿಮಾ, ಕಲೆಗಳಲ್ಲಿ ಆಸಕ್ತಿಯಿದೆ. ಮನೆಯಲ್ಲಿ ಸದಾ ಏನಾದರೊಂದು ಚರ್ಚೆ ನಡೆಸುತ್ತಲೇ ಇರುತ್ತೇವೆ. ನಾವು ನೋಡಿದ ನಾಟಕ, ಸಿನಿಮಾಗಳ ಬಗ್ಗೆ ವಿಮರ್ಶೆ ಮಾಡುತ್ತಿರುತ್ತೇವೆ. ಮಗಳು ಸಂಯುಕ್ತಾ ಪ್ರತಿಭಾವಂತೆ. ಕಲೆಯಲ್ಲಿ ತುಂಬಾ ಆಸಕ್ತಿ ಅವಳಿಗೆ. ಚಿಕ್ಕವಯಸ್ಸಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾಳೆ. ಬಿ. ಜಯಶ್ರೀ ಅವರ ಸ್ಪಂದನ ತಂಡದಲ್ಲಿ ಇದ್ದಳು. ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾಳೆ. ಮಗ ಶಂತನು, ಬೇಸಿಕ್ ಸೈನ್ಸ್ ಓದುತ್ತಿದ್ದಾನೆ. ಇಸ್ರೋದಲ್ಲಿ ಈಗಷ್ಟೆ ಇಂಟರ್ನ್ಶಿಪ್ ಮುಗಿಸಿದ್ದಾನೆ. ಮಕ್ಕಳಿಬ್ಬರೂ ವರ್ಲ್ಡ್ ಸಿನಿಮಾಗಳನ್ನು ನೋಡುತ್ತಾರೆ. ಅವರ ಅಭಿರುಚಿ ನಮ್ಮ ಅಭಿರುಚಿಗಿಂತ ಭಿನ್ನ. ಯಾವ ಸಿನಿಮಾ ನೋಡಿದರೂ ಅದನ್ನು ಪ್ರಖರವಾಗಿ ವಿಮರ್ಶೆಗೆ ಒಳಪಡಿಸುತ್ತಾರೆ. “ನಿಮ್ಮಿಬ್ಬರಿಗೆ ಎಲ್ಲವೂ ಇಷ್ಟವಾಗುತ್ತದೆ’ ಎಂದು ನನ್ನನ್ನೂ, ಪತಿಯನ್ನೂ ಗೇಲಿ ಮಾಡ್ತಾರೆ.
Advertisement
-ಸೆಲೆಬ್ರಿಟಿಯಾಗಿ ಸರಳತೆಯನ್ನು ಹೇಗೆ ಕಾಯ್ದುಕೊಳ್ಳುತ್ತೀರಿ?ಅದೆಲ್ಲಾ ಪೋಷಕರಿಂದ ಬಂದ ಬಳುವಳಿ. ಅದೇನೋ ಗೊತ್ತಿಲ್ಲ, ರಂಗಭೂಮಿಯಿಂದ ಬಂದವರಿಗೆ ಸರಳತೆ ಮೈಗೂಡಿರುತ್ತದೆ. ನನ್ನ ಸಹ ನಟ ನಟಿಯರು ಸೆಟ್‌ಗೆ ತಮ್ಮ ಸಹಾಯಕರನ್ನು ಕರೆದುಕೊಂಡು ಬರುತ್ತಾರೆ. ನಾನು ಇದುವರೆಗೂ ಸಹಾಯಕರನ್ನು ಇರಿಸಿಕೊಂಡಿಲ್ಲ. ಎಲ್ಲಾ ಕೆಲಸಗಳನ್ನು ನಾನೇ ನಿರ್ವಹಿಸಿಕೊಳ್ಳುತ್ತೇನೆ. ಉಡುಗೆ ತೊಡುಗೆಯೂ ಅಷ್ಟೇ… ನಾನು ತೊಡುವ ಬಟ್ಟೆಗಳಲ್ಲಿ ಹೆಚ್ಚಿನವು ಅಮ್ಮ ಮತ್ತು ಸಂಬಂಧಿಗಳು ಉಡುಗೊರೆಯಾಗಿ ಕೊಟ್ಟಿರುವವು. ಅಜ್ಜಿ ಹೇಳುತ್ತಿದ್ದರು “ಹೆಚ್ಚು ಬಟ್ಟೆ ಇಟ್ಟುಕೊಳ್ಳಬಾರದು ಕಣೇ.. ದರಿದ್ರ ಅದು…’ ಅಂತ. ಅದು ಮೂಢನಂಬಿಕೆಯೇ ಇರಬಹುದು ಆದರೆ ನಾನದನ್ನು ಈಗಲೂ ಪಾಲಿಸುತ್ತೇನೆ. ನನ್ನ ಬಳಿ ಬಟ್ಟೆ ಹೆಚ್ಚಾಗಿದೆ ಎನಿಸಿದ ಕೂಡಲೇ ಯಾರಿಗಾದರೂ ಕೊಟ್ಟುಬಿಡುತ್ತೇನೆ. ನಮ್ಮಮ್ಮ ಉತ್ಸಾಹದ ಚಿಲುಮೆ
ನಾನು ನೋಡಿರುವವರಲ್ಲಿ ಪರಿಪೂರ್ಣ ವ್ಯಕ್ತಿ ನಮ್ಮಮ್ಮ. 81 ವರ್ಷ ವಯಸ್ಸು ಅವರಿಗೆ. ಈಗಲೂ ಒಂದು ಕ್ಷಣವೂ ಸುಮ್ಮನೆ ಕೂರುವುದಿಲ್ಲ. ಕ್ಯಾಮೆರಾ ಮುಂದೆ ಚುರುಕಾಗಿ ನಟಿಸುತ್ತಾರೆ, ನಾಟಕ ಬರೆದು ನಿರ್ದೇಶನ ಮಾಡುತ್ತಾರೆ. ಕೆಲ ಸಮಯದ ಹಿಂದಷ್ಟೆ ಪುಸ್ತಕ ಬರೆದು ಹೊರತಂದರು. ಅಪ್ಪ ಅರ್ಧ ಬರೆದ ಅವರ ಆತ್ಮಚರಿತ್ರೆಯನ್ನು ತಾವೇ ಪೂರ್ಣಗೊಳಿಸಿ ಅದನ್ನು ಜ. 6ರಂದು ಬಿಡುಗಡೆ ಮಾಡಿದರು. ಇಷ್ಟೆಲ್ಲ ಚಟುವಟಿಕೆಗಳ ಮಧ್ಯ ಪ್ರಪಂಚದ ಆಗುಹೋಗುಗಳ ಬಗ್ಗೆಯೂ ಖಚಿತ ಮಾಹಿತಿ ಅವರಿಗಿರುತ್ತದೆ. ರಾಜಕೀಯ ನಿಲುವುಗಳನ್ನು ಕ್ಷಣಮಾತ್ರಕ್ಕೆ ತೆಗೆದುಕೊಳ್ಳುತ್ತಾರೆ. ಎಲ್ಲಾ ಹಬ್ಬಹರಿದಿನಗಳನ್ನು ಸಾಂಗೋಪಾಂಗವಾಗಿ ನೆರವೇರಿಸುತ್ತಾರೆ. ಈಗಲೂ ನಾವು ಎಲ್ಲಾ ಹಬ್ಬಗಳಿಗೂ ಅಮ್ಮನ ಮನೆಗೇ ಹೋಗುವುದು. ನಾವು ನಾಲ್ಕು ಮಂದಿ ಮಕ್ಕಳನ್ನು ಅಮ್ಮ ಹೇಗೆ ಸಾಕಿದ್ದಳ್ಳೋ ಅದೇ ರೀತಿ ನಮ್ಮೆಲ್ಲರ ಮಕ್ಕಳು ಅಂದರೆ, 8 ಮೊಮ್ಮಕ್ಕಳನ್ನೂ ಹಾಗೆಯೇ ಸಾಕಿದ್ದಾರೆ. ನನಗೆ ಕೆಲಸ ಇದೆ ಮಕ್ಕಳನ್ನು ನಿನ್ನ ಬಳಿ ಬಿಟ್ಟು ಹೋಗುತ್ತೇನೆ ಎಂದರೆ, ಅಮ್ಮ ಎಷ್ಟೇ ಬ್ಯುಸಿ ಇದ್ದರೂ, “ಹೌದಾ, ಇಲ್ಲೇ ಬಿಡು, ನೀನೇನೂ ಯೋಚನೆ ಮಾಡಬೇಡ’ ಎನ್ನುತ್ತಾರೆ. ಇಲ್ಲಿ ಯಾರೂ ಯಾರಿಗೂ ಸ್ವಾತಂತ್ರ್ಯ ನೀಡಬೇಕಿಲ್ಲ
ನನ್ನ ಮತ್ತು ನನ್ನ ಗಂಡನದು ಎಲ್ಲಾ ವಿಚಾರದಲ್ಲೂ ಸಮಾನ ಆಸಕ್ತಿ ಮತ್ತು ಅಭಿರುಚಿ. ಮನೆಯ ಎಲ್ಲಾ ಜವಾಬ್ದಾರಿಗಳನ್ನೂ ನಾವು ಹಂಚಿಕೊಳ್ಳುತ್ತೇವೆ. ನಾನು ಕಾರ್ಪೊರೆಟ್ ಉದ್ಯೋಗದಲ್ಲಿ ಇದ್ದಾಗಲೂ ಅವರು ನನಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತಿದ್ದರು. ನಾನು ಉದ್ಯೋಗ ಬಿಟ್ಟು ರಂಗಭೂಮಿ, ಸಿನಿಮಾ, ಧಾರಾವಾಹಿಯಲ್ಲಿ ತೊಡಗಿದಾಗಲೂ ಅವರು ನನಗೆ ಅದೇ ಸಹಕಾರ, ಪ್ರೋತ್ಸಾಹ ನೀಡಿದರು. ಕೆಲವರು ನಿಮ್ಮ ಗಂಡ ನಿಮಗೆ ಇಷ್ಟೆಲ್ಲಾ ಸ್ವಾತಂತ್ರ್ಯ ಕೊಟ್ಟಿದ್ದಾರೆ ಎಂದು ಕೇಳುವುದಿದೆ. ನನಗೆ ಆ ಪ್ರಶ್ನೆ ತೀರಾ ಉತ್ಪ್ರೇಕ್ಷೆಯ ಮತ್ತು ಮೂರ್ಖತನದ ಪ್ರಶ್ನೆ ಎಂದು ತೋರುತ್ತದೆ. ನಾವೆಲ್ಲರೂ ಹುಟ್ಟಿನಿಂದಲೇ ಸ್ವತಂತ್ರರು. ನಮ್ಮ ಆಸಕ್ತಿಯ ಕೆಲಸ ಮಾಡುವ, ನಮ್ಮ ಇಷ್ಟದಂತೆ ಬದುಕುವ ಸ್ವಾತಂತ್ರ್ಯ ಎಲ್ಲರಿಗೂ ಹುಟ್ಟಿನಿಂದಲೇ ಬಂದಿರುತ್ತದೆ. ಇಲ್ಲಿ ಯಾರೂ ಯಾರಿಗೂ ಸ್ವಾತಂತ್ರ್ಯ ನೀಡಬೇಕಿಲ್ಲ ಎಂಬ ಅರಿವು ಕೂಡಾ ಎಷ್ಟೋ ಜನಕ್ಕೆ ಇರುವುದಿಲ್ಲ. “ಯಾರೋ ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡಿದ್ದಾರೆ’ ಎಂದರೆ ಅದು ಚಿಂತಿಸುವ, ಚರ್ಚಿಸುವ ವಿಷಯವಾಗಬೇಕು. ಅದು ಬಿಟ್ಟು ಸ್ವಾತಂತ್ರ್ಯ ಕೊಟ್ಟಿದ್ದಾರೆ ಎನ್ನುವುದೆಲ್ಲ ದೊಡ್ಡ ಸುಳ್ಳು. ಮಗಳಿಗೆ, ಶೂಟಿಂಗ್ ನಡೆಯುವಾಗ ಜ್ಯೂಸ್ ಕೊಟ್ಟಿಲ್ಲ
ನಾವು ಹೇಗೆ ಬೆಳೆದೆವೋ ಅದೇ ರೀತಿ ಮಕ್ಕಳನ್ನೂ ಸ್ವತಂತ್ರವಾಗಿ ಬೆಳೆಸಿದ್ದೇವೆ. ಸಂಯುಕ್ತಾ, ರಂಗಭೂಮಿಯಲ್ಲಿ ಕೆಲಸ ಮಾಡುವಾಗಲೇ ಇರಲಿ ಅಥವಾ ಸಿನಿಮಾಗಳಲ್ಲಿ ಕೆಲಸ ಮಾಡುವಾಗಲೇ ಆಗಲಿ, ನಾನು ಸೆಟ್ ಹೋಗಿ ಕುಳಿತು ಅವಳ ಬೇಕು ಬೇಡಗಳನ್ನು ನೋಡಿಕೊಂಡಿದ್ದೇ ಇಲ್ಲ. ಅವಳ ಮೊದಲ ಚಿತ್ರ “ಲೈಫು ಇಷ್ಟೇನೆ’ ಶೂಟಿಂಗ್‌ನ ಮೊದಲ ದಿನ ಹೋಗಿ ಕುಳಿತಿದ್ದೆ. ನಾನು ಹಾಗೆ ಒಂದು ಕಡೆ ಸುಮ್ಮನೆ ಕುಳಿತಿರುವುದು ಅವಳಿಗೇ ಇಷ್ಟವಾಗಲಿಲ್ಲ. “ನೀನು ಮನೆಗೆ ಹೋಗಮ್ಮ, ನಾನು ಮ್ಯಾನೇಜ್ ಮಾಡ್ಕೊತೀನಿ. ನೀನೇಕೆ ಸುಮ್ಮನೆ ಟೈಮ್ ವೇಸ್ಟ್ ಮಾಡ್ಕೊತೀಯ’ ಅಂತ ಕಳಿಸಿದಳು. ಅದೇ ಕೊನೆ. ನಾನು ಮತ್ತೆ ಅವಳ ಜೊತೆ ಶೂಟಿಂಗ್ ಹೋಗಲಿಲ್ಲ. ಆದರೆ, ನಾನೇ ನೋಡುತ್ತಿರುತ್ತೇನೆ ಬಹುತೇಕ ನಟಿಯರ ಜೊತೆ ಅವರ ತಾಯಂದಿರು ಶೂಟಿಂಗ್‌ಗೆ ಬಂದು ತಮ್ಮ ಮಕ್ಕಳಿಗೆ ಹೊತ್ತು ಹೊತ್ತಿಗೆ ಜ್ಯೂಸ್ ಕೊಡುವುದು, ತಿಂಡಿ ತಿನ್ನಿಸುವುದೆಲ್ಲಾ ಮಾಡುತ್ತಿರುತ್ತಾರೆ. ಪಾಪ ನನ್ನ ಮಗಳಿಗೆ ನಾನಿದನ್ನೆಲ್ಲ ಮಾಡಿಯೇ ಇಲ್ಲವಲ್ಲ ಅಂತ ಬೇಜಾರಾಗುತ್ತದೆ. ಅದೇ ಹೊತ್ತಿಗೆ ಮಗಳು, ಮಗ ಇಬ್ಬರೂ ಎಂಥ ಪರಿಸ್ಥಿತಿಯನ್ನಾದರೂ ನಿಭಾಯಿಸಬಲ್ಲರು ಎಂಬ ವಿಶ್ವಾಸ ಮೂಡಿ, ಹೆಮ್ಮೆಯೆನಿಸುತ್ತದೆ. ಚೇತನ್ ಜೆ.ಕೆ.