Advertisement

ವಿಲನ್‌ ವೇದಿಕೆಯಿಂದ …ಸುದೀಪ್‌, ಶಿವಣ್ಣ ಫ‌ನ್‌ ಟಾಕ್‌

11:25 AM Aug 21, 2018 | |

ಅಂತೂ ಇಂತೂ “ದಿ ವಿಲನ್‌’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಭಾನುವಾರ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಅಂಬರೀಶ್‌ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ತೆಲುಗು ನಟ ಶ್ರೀಕಾಂತ್‌, ಶಿವರಾಜಕುಮಾರ್‌, ಸುದೀಪ್‌, ನಿರ್ಮಾಪಕ ಸಿ.ಆರ್‌.ಮನೋಹರ್‌, ನಿರ್ದೇಶಕ ಪ್ರೇಮ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮತ್ತು ಚಿತ್ರತಂಡ ವರ್ಣರಂಜಿತ ವೇದಿಕೆಗೆ ಸಾಕ್ಷಿಯಾದರು. ಈ ಸಮಾರಂಭದಲ್ಲಿ ನಗುವಿತ್ತು, ತಮಾಷೆ ಇತ್ತು, ಪ್ರೀತಿ ತುಂಬಿತ್ತು, ಒಗ್ಗಟ್ಟಿನ ಮಂತ್ರವೂ ಇತ್ತು. ಅಲ್ಲಿ ನಡೆದ ಮಾತುಕತೆಯ ಸಂಕ್ತಿಪ್ತ ವಿವರವಿದು.

Advertisement

ನನ್ಮಗಳ ಮದ್ವೆವರೆಗೂ ಕಾಯ್ತಿದ್ದಾರೇನೋ: “ದಿ ವಿಲನ್‌’ ಚಿತ್ರದ ಬಿಡುಗಡೆ ಯಾವಾಗ ಎಂಬ ಕುತೂಹಲ ಶಿವರಾಜಕುಮಾರ್‌ ಮತ್ತು ಸುದೀಪ್‌ ಇಬ್ಬರ ಅಭಿಮಾನಿಗಳಲ್ಲೂ ಇದೆ. ಬರೀ ಅವರಷ್ಟೇ ಅಲ್ಲ, ಖುದ್ದು ಸುದೀಪ್‌ಗೆ ಚಿತ್ರ ಯಾವಾಗ ಬಿಡುಗಡೆ ಎಂಬ ಪ್ರಶ್ನೆ ಇದೆ. ಈ ಕುರಿತು ನೇರವಾಗಿಯೇ ಕೇಳಿದ ಅವರು, “ಶಿವಣ್ಣನ ಮಗಳು ಮದ್ವೆ ಆಯ್ತು, ಅವರೀಗ ಅಜ್ಜ ಆಗೋ ಸಮಯ ಬಂದ್ರೂ ಸಿನ್ಮಾ ರಿಲೀಸ್‌ ಮಾಡ್ತಾ ಇಲ್ಲ. ಇನ್ನೂ ನನ್ಮಗಳ ಮದ್ವೆವರೆಗೂ ಪ್ರೇಮ್‌ ಕಾಯ್ತಿದ್ದಾರೇನೋ ಗೊತ್ತಿಲ್ಲ. ನನ್ನ ಎರಡು ಬೆರಳು ಇಟ್ಟುಕೊಂಡೇ ಒಂದು ಟೀಸರ್‌ ರಿಲೀಸ್‌ ಮಾಡಿ ಸುದ್ದಿ ಮಾಡಿದರು ಪ್ರೇಮ್‌.

ಅದೇನೋ ದೊಡ್ಡ ಸೌಂಡ್‌ ಮಾಡು¤. ಅದರ ಕಷ್ಟ ಎಷ್ಟು ಅಂತ ನಿರ್ಮಾಪಕರಿಗಷ್ಟೇ ಗೊತ್ತು. ಇನ್ನು ಎಲ್ಲರೂ ಚಿತ್ರದ ಕಥೆ ಏನು ಅಂತ ಕೇಳ್ತಿದ್ದಾರೆ. ಪ್ರೇಮ್‌ ಕಥೆ ಹೇಳ್ಳೋಕೆ ಒಂದು ವರ್ಷ ಮಾಡಿದ್ರು. ಆಮೇಲೆ ಇನ್ನೊಂದು ವರ್ಷ ಕ್ಲೈಮ್ಯಾಕ್ಸ್‌ ಹೇಳಿದ್ರು. ಅದಾದ ಮೇಲೆ ಇನ್ನೊಂದು ವರ್ಷ ಪ್ರೊಡ್ಯುಸರ್‌ ಫಿಕ್ಸ್‌ ಮಾಡಿದ್ರು. ಆಮೇಲೆ ಗೊತ್ತಾಯ್ತು ನಾನು ಶಿವಣ್ಣ ನಟಿಸ್ತಾ ಇದೀವಿ ಅಂತ. ಆಮೇಲೆ ಇಬ್ಬರೂ ಕಥೆ ಕೇಳಿಲ್ಲ. ಇದೇ “ದಿ ವಿಲನ್‌’ ಕಥೆ’ ಎನ್ನುತ್ತಾರೆ ಸುದೀಪ್‌.

ಪ್ರೇಮ್‌ ಬಿಲ್ಡಪ್‌ ಮಾಡೋದ್ರಲ್ಲಿ ತಪ್ಪೇನಿದೆ?: ಪ್ರೇಮ್‌ ಸಿಕ್ಕಾಪಟ್ಟೆ ಗಿಮಿಕ್‌ ಮಾಡುತ್ತಾರೆ ಎಂಬ ಮಾತಿಗೆ, ಪ್ರತಿಕ್ರಿಯಿಸಿದ ಸುದೀಪ್‌, “ಪ್ರೇಮ್‌ ಬಗ್ಗೆ ಹೇಳುವುದಾದರೆ, ಅವರಿಗೆ ಬಿಲ್ಡಪ್‌, ಗಿಮಿಕ್‌ ಅಂತ ಹೆಸರಿದೆ. ಇಷ್ಟಕ್ಕೂ ಅದರ‌ಲ್ಲಿ ತಪ್ಪೇನಿದೆ? ಅವರ ಸಿನಿಮಾನಾ ಅವರು ಪ್ರಮೋಟ್‌ ಮಾಡುವುದರಲ್ಲಿ ತಪ್ಪೇನು? ಅವರಲ್ಲಿ ಪ್ಯಾಷನ್‌ ಇದೆ. ಕೈಲಾಗದವರು ಹೀಗೆಲ್ಲ ಮಾತಾಡ್ತಾರೆ. ಅವರಲ್ಲಿ ಪ್ಯಾಷನ್‌ ಇಲ್ಲ ಅಂದಿದ್ದರೆ, ಅವರ ಜೊತೆಗೆ ಶಿವಣ್ಣ  ಮೂರು ಸಿನಿಮಾ ಮಾಡ್ತಾ ಇರಲಿಲ್ಲ.

ಪ್ರೇಮ್‌ದೂ ಒಂದು ಬದುಕಿದೆ ಅಲ್ವಾ? ಈ ಚಿತ್ರ ಸಿಲ್ವರ್‌ ಜ್ಯೂಬಿಲಿ ಹೋಗಲಿ, ಬಿಡಲಿ, ನೂರು ದಿನ ಓಡಲಿ, ಓಡದೇ ಇರಲಿ. ಆದರೆ, ಪ್ರೇಮ್‌ ಮೇಲಿರುವ ನನ್ನ ಅಭಿಪ್ರಾಯ ಬದಲಾಗುವುದಿಲ್ಲ. ಪ್ರೇಮ್‌ ಒಬ್ಬ ವೆರಿ ಗುಡ್‌ ವರ್ಕರ್‌. ನಾವೂ ಬದುಕಲ್ಲಿ ಸಣ್ಣ-ಪುಟ್ಟ ಪೆಟ್ಟು ತಿಂದಿದ್ದೇವೆ. ಏಳು-ಬೀಳು ಕಂಡಿದ್ದೇವೆ. ಅವಕಾಶ ಸಿಕ್ಕಾಗ ಚೆನ್ನಾಗಿ ಬಳಸಿಕೊಳ್ಳಬೇಕಷ್ಟೇ. “ದಿ ವಿಲನ್‌’ ಮಾಡಿದ್ದು ಖುಷಿ ಇದೆ’ ಎಂದು ಖುಷಿಯಿಂದ ಪ್ರೇಮ್‌ ಬಗ್ಗೆ ಹೇಳುತ್ತಾರೆ ಸುದೀಪ್‌.

Advertisement

ಶಿವಣ್ಣ ಲಂಡನ್‌ನಲ್ಲಿ ಎಂಜಾಯ್‌ ಮಾಡಿದ್ದು ನನ್ನೊಟ್ಟಿಗಲ್ಲ!: ಇನ್ನು ಶಿವರಾಜಕುಮಾರ್‌ ಅವರ ಜೊತೆಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಸುದೀಪ್‌, “ಶಿವಣ್ಣ ಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ. ಅವರೊಬ್ಬ ಸಿಂಪಲ್‌ ಮ್ಯಾನ್‌. ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಒಳ್ಳೇತನವಿದೆ. ಲಂಡನ್‌ನಲ್ಲಿ ಶೂಟಿಂಗ್‌ ವೇಳೆ ತುಂಬಾ ಎಂಜಾಯ್‌ ಮಾಡಿದ್ವಿ ಅಂತ ಆಗ ಶಿವಣ್ಣ ಹೇಳ್ತಾ ಇದ್ದರು. ನಿಜ, ಆದರೆ ಅವರು ಎಂಜಾಯ್‌ ಮಾಡಿದ್ದು ನನ್ನೊಟ್ಟಿಗಲ್ಲ. ಗೀತಕ್ಕನ ಜೊತೆ.

ಅಣ್ಣಾ, ಶೂಟಿಂಗ್‌ ಪ್ಯಾಕಪ್‌ ಆಗ್ತಾ ಇದ್ದಂತೆ ಹೋಗಿಬಿಡೋರು’ ಎಂದರು ಸುದೀಪ್‌. ಅವರ ಮಾತುಗಳನ್ನು ಮಧ್ಯದಲ್ಲೇ ತುಂಡರಿಸಿದ ಶಿವರಾಜಕುಮಾರ್‌, “ನೂರು ವರ್ಷವಾದರೂ ಗೀತಾ ಯಂಗ್‌ ಲವ್ವರ್‌’ ಎಂದು ಉತ್ತರ ಕೊಟ್ಟರು. ಅದಕ್ಕೆ ಪ್ರತಿಕ್ರಯಿಸಿದ ಸುದೀಪ್‌, “ಅದು ಹಂಡ್ರೆಡ್‌ ಪರ್ಸೆಂಟ್‌ ನಿಜ ಅಣ್ಣ. ಆದರೆ, ನೀವು ನನ್ನೊಟ್ಟಿಗೆ ಇರಲಿಲ್ಲವಲ್ಲಾ’ ಎಂದರು. ಇದಕ್ಕೆ ಮತ್ತೆ ಪ್ರತಿಕ್ರಯಿಸಿದ ಶಿವರಾಜಕುಮಾರ್‌, “ಡೋಂಟ್‌ ವರಿ, ಮುಂದಿನ ಬಾರಿ ಇಬ್ಬರೂ ಲಂಡನ್‌ ಟ್ರಿಪ್‌ ಹೋಗೋಣ’ ಎಂದರು ಶಿವರಾಜಕುಮಾರ್‌.

ಲುಕ್‌ ಆ್ಯಂಡ್‌ ಗೋ … ದಟ್ಸ್‌ ಇಟ್‌: ಆ್ಯಮಿ ಜಾಕ್ಸನ್‌ ಜೊತೆಗೆ ಪ್ರೇಮ್‌ ಹೇಗೆ ಮತ್ತು ಏನು ಮಾತಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ಕುರಿತು ಮಾತನಾಡಿದ ಸುದೀಪ್‌, “ಪ್ರೇಮ್‌, ಆ್ಯಮಿ ಜಾಕ್ಸನ್‌ ಅವರನ್ನ ಕರೆಯುತ್ತಿದ್ದದ್ದೇ ಏಮಿ ಜಾಕ್ಸನ್‌ ಅಂತ. ಪ್ರೇಮ್‌ ಜೀ ಅಂತ ಆ್ಯಮಿ ಕರೆದಾಗ, ಶಾಟ್ಸ್‌ ಹಾಕಿಕೊಂಡಿರುತ್ತಿದ್ದ ಪ್ರೇಮ್‌ ಓಡಿ ಬಂದು, “ಯೆಸ್‌ ಅಮ್ಮಿ, ವಾಟ್‌ …’ ಅಂತ ತನ್ನದೇ ಶೈಲಿಯ ಇಂಗ್ಲೀಷ್‌ನಲ್ಲಿ ಮಾತಾಡುತ್ತಿದ್ದರು. ಆ್ಯಮಿ ಇಂಗ್ಲೀಷ್‌ನಲ್ಲಿ ಒಂದೇ ಸಮ ಹೇಳಿಬಿಟ್ಟರೆ, ತಮ್ಮ ಅಸಿಸ್ಟಂಟ್‌ಗಳನ್ನು ಕರೆದು, “ನಿಮ್ಮಜ್ಜಿ ಬರ್ರಲೇ … ಅಯಮ್ಮನ್‌ಗೆ ಸೀನ್‌ ಬಗ್ಗೆ ಹೇಳ್ರೋ’ ಅನ್ನೋರು.

ಆ ಅಸಿಸ್ಟಂಟ್‌ ಕೂಡ ಪ್ರೇಮ್‌ ಶಿಷ್ಯ. ಅಲ್ಲಿಗೆ ಕಥೆ ಅಷ್ಟೇ. ಕೊನೆಗೆ ಪ್ರೇಮ್‌ ಸಿಂಪಲ್‌ ಆಗಿ, “ಏಮಿ ಜಾಕ್ಸನ್‌ ಯು ಸೀ, ಜಸ್ಟ್‌ ಯು ಫಾಲ್‌. ಆ್ಯಂಡ್‌ ಲುಕ್‌ ಆ್ಯಂಡ್‌ ಗೋ … ದಟ್ಸ್‌ ಇಟ್‌’ ಅಂದುಬಿಡೋರು. ಕೆಲವೊಮ್ಮೆ, “ಅಯಮ್ಮನಿಗೆ ಸೀನ್‌ ಏನಂಥ ನೀನೇ ಹೇಳಿಬಿಡು ಡಾರ್ಲಿಂಗ್‌’ ಅಂತ ನನಗೆ ಹೇಳ್ಳೋರು. ಅದಕ್ಕೆ ನಾನು, “ನೀನೇ ಹೇಳಪ್ಪಾ. ನಾನೇನ್‌ ನಿನ್‌ ಅಸಿಸ್ಟೆಂಟಾ?’ ಅಂತ ಸುಮ್ಮನಾಗ್ತಾ ಇದ್ದೆ. ಪ್ರೇಮ್‌ ಇಂಗ್ಲೀಷ್‌ನ ಕೇಳಿದ್ರೆ ಆಕ್ಸ್‌ಫ‌ರ್ಡ್‌ ಯೂನಿರ್ವಸಿಟಿ ಮುಚ್ಚುತ್ತೆ’ ಎಂದು ಸುದೀಪ್‌, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಅಪ್ಪಾಜಿ ಸ್ಟೆಪ್‌ ರಿಪೀಟ್‌: ಶಿವರಾಜ್‌ಕುಮಾರ್‌ ಕೂಡ ಹಾಡಿಗೆ ಸ್ಟೆಪ್‌ ಹಾಕಿ ಎಲ್ಲರನ್ನೂ ರಂಜಿಸಿದರು. ಅಷ್ಟೇ ಅಲ್ಲ, “ಮಾತು ಶುರವಿಗೆ ಮುನ್ನ, ಕೊಡಗು ನೀರಲ್ಲಿ ಮುಳುಗಿದೆ. ಅಲ್ಲಿನ ನಮ್ಮ ಕನ್ನಡಿಗರು ಕಷ್ಟದಲ್ಲಿದ್ದಾರೆ. ನಾವೆಲ್ಲರೂ ಅವರಿಗೆ ನೆರವಾಗುತ್ತಿದ್ದೇವೆ. ಪ್ರತಿ ಕನ್ನಡಿಗನೂ ಅವರ ಕಷ್ಟಕ್ಕೆ ನೆರವಾಗಿ’ ಎಂದು ಮನವಿ ಮಾಡಿದರು. “ದಿ ವಿಲನ್‌’ ಕುರಿತು ಮಾತನಾಡಿದ ಅವರು, “ಇದು ಬೇರೆ ಭಾಷೆಯವರು ತಿರುಗಿ ನೋಡುವ ಚಿತ್ರವಾಗುತ್ತೆ. ಪ್ರೇಮ್‌ ಗಿಮಿಕ್‌ ಜಾಸ್ತಿ ಅಂತಾರೆ.

ಅದು ಅವರ ಶೈಲಿ. ಇಲ್ಲಿ ನನಗೆ ವಿಭಿನ್ನ ಪಾತ್ರ ಕಟ್ಟಿಕೊಟ್ಟಿದ್ದಾರೆ. ಎಲ್ಲವೂ ಹೊಸದಾಗಿದೆ. “ಟಿಕ್‌ ಟಿಕ್‌ ಟಿಕ್‌’ ಹಾಡನ್ನು ಅದ್ಭುತವಾಗಿ ಮಾಡಲಾಗಿದೆ. ಅದರೊಳಗಿನ ಸ್ಟೆಪ್ಪು ಚೆನ್ನಾಗಿದೆ. ಆದರೆ, ಅದು ಅಪ್ಪಾಜಿ ಹಾಕಿದ್ದ ಸ್ಟೆಪ್‌. ಅದನ್ನೇ ಇಲ್ಲಿ ಮಾಡಿದ್ದೇನೆ. ನಾನೊಬ್ಬ ಕಲಾವಿದ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸೋದು ನನ್ನ ಕೆಲಸ. ಇಲ್ಲಿ ಪ್ರೇಮ್‌ ಮತ್ತೆ ಉದ್ದ ಕೂದಲು ಹಾಕಿಸಿದ್ದಾರೆ. ನಾನು ನಿರ್ದೇಶಕರು ಹೇಳಿದಂತೆ ಮಾಡುತ್ತೇನೆ. ಕಸಗುಡಿಸುವ ಪಾತ್ರವಿದ್ದರೂ ಮಾಡ್ತೀನಿ’ ಎಂದರು ಶಿವರಾಜಕುಮಾರ್‌.

ಮತ್ತೆ ಶುರುವಾಗುತ್ತೆ “ಕಲಿ’: ನಿರ್ಮಾಪಕ ಸಿ.ಆರ್‌.ಮನೋಹರ್‌ಗೆ “ಕಲಿ’ ಚಿತ್ರ ಮಾಡುವ ಆಸೆ ಇನ್ನೂ ಹೋಗಿಲ್ಲ. “ಕಲಿ’ ಚಿತ್ರ ಶುರುವಾಗಿ ನಿಂತಿದ್ದಕ್ಕೆ ಸಾಕಷ್ಟು ಮಾತುಗಳು ಕೇಳಿಬಂದವು. ಈ ಕುರಿತು ಮಾತನಾಡಿದ ಮನೋಹರ್‌, “ಕಲಿ’ ಒಂದು ಹಿಸ್ಟಾರಿಕಲ್‌ ಸಿನಿಮಾ. ದೊಡ್ಡ ಪ್ರಾಜೆಕ್ಟ್ ಅದು. ನಾಲ್ಕು ಭಾಷೆಯಲ್ಲಿ ತಯಾರಾಗಲಿದೆ. “ದಿ ವಿಲನ್‌’ ಚಿತ್ರದಲ್ಲಿ ಇಬ್ಬರು ದಿಗ್ಗಜರಿದ್ದಾರೆ. ನನ್ನ ನಿರೀಕ್ಷೆ ಮೀರಿ ಚಿತ್ರ ಬಂದಿದೆ. ಪ್ರೇಮ್‌ ರಾತ್ರಿ-ಹಗಲು ಕೆಲಸ ಮಾಡಿದ್ದಾರೆ. ಪ್ರೇಮ್‌ ಅವರ ಪ್ರತಿ ಚಿತ್ರದಲ್ಲೂ ಅಮ್ಮನ ಸೆಂಟಿಮೆಂಟ್‌ ಇರುತ್ತೆ. ಇಲ್ಲೂ ಇದೆ. ಅದು ಹೇಗೆ ಅನ್ನೋದನ್ನು ಚಿತ್ರದಲ್ಲಿ ನೋಡಿ’ ಎಂಬುದು ಮನೋಹರ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next