Advertisement

ಸೀಮಿತ ವ್ಯಾಪ್ತಿಯಲ್ಲಿ ದಿಢೀರ್‌ ವಿಪರೀತ ಮಳೆ! ಹವಾಮಾನ ವೈಪರೀತ್ಯದ ಸುಳಿವು: ತಜ್ಞರು

12:21 AM Aug 04, 2022 | Team Udayavani |

ಮಂಗಳೂರು: ನೈಋತ್ಯ ಮಾನ್ಸೂನ್‌ ವೇಳೆ ಸಾಮಾನ್ಯವಾಗಿ ವಿಶಾಲ ಪ್ರದೇಶದಲ್ಲಿ ಮೋಡ ಸೃಷ್ಟಿಯಾಗಿ ಮಳೆ ಸುರಿಯುವುದು ವಾಡಿಕೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ
ಕೆಲವೇ ಪ್ರದೇಶಕ್ಕೆ ಸೀಮಿತ!

Advertisement

ಜಿಲ್ಲೆಯ ಹೋಬಳಿ, ತಾಲೂಕು ವ್ಯಾಪ್ತಿಯೊಳಗೇ ವ್ಯಾಪಕ ಮಳೆಯಾಗಿ ಅನಾಹುತ ಸೃಷ್ಟಿಸುತ್ತಿರುವ ಸನ್ನಿವೇಶ ಕಳೆದ ಕೆಲವು ದಿನಗಳಿಂದ ಮರುಕಳಿಸುತ್ತಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಇದು ಹವಾಮಾನ ವೈಪರೀತ್ಯದ ಮುನ್ಸೂಚನೆ.

ಸುಳ್ಯ, ಸುಬ್ರಹ್ಮಣ್ಯ, ಯೇನೆ ಕಲ್ಲು, ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು ಪ್ರದೇಶದಲ್ಲಿ ಆ. 1ರಿಂದ ಸುರಿದ ಬಿರುಸಿನ ಮಳೆ ಪುತ್ತೂರು ಸೇರಿದಂತೆ ನೆರೆಯ ತಾಲೂಕುಗಳಲ್ಲಿ ಅಷ್ಟಾಗಿ ಇರಲಿಲ್ಲ. ಅದೇ ರೀತಿ ಕೆಲವು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆ ನೆರೆಯ ಮೂಡುಬಿದಿರೆ, ಬಂಟ್ವಾಳ ತಾಲೂಕಿನಲ್ಲಿ ಕಡಿಮೆ ಬಿರುಸು ಹೊಂದಿತ್ತು. ಆ. 2ರಂದು ಬೈಂದೂರು-ಶಿರೂರು ಭಾಗದಲ್ಲಿ ಭಾರೀ ಮಳೆಯಾಗಿದ್ದರೆ ಉಡುಪಿ ಜಿಲ್ಲೆಯ ಬೇರಾವ ಭಾಗದಲ್ಲೂ ಮಳೆ ಅಷ್ಟಾಗಿ ಇರಲಿಲ್ಲ. ಇತ್ತೀಚೆಗೆ ಸುಮಾರು 20ರಿಂದ 30 ಕಿ.ಮೀ. ವ್ಯಾಪ್ತಿಗೆ ಮಾತ್ರ ಮಳೆ ಸೀಮಿತಗೊಳ್ಳುತ್ತಿದೆ. ಇದಕ್ಕೆ ನಿಖರ ಕಾರಣವನ್ನು ಭಾರತೀಯ ಹವಾಮಾನ ಇಲಾಖೆ ನಡೆಸುವ ಸಂಶೋಧನೆಯಿಂದ ಮಾತ್ರ ಅರಿತುಕೊಳ್ಳಬಹುದು.

ಇದು “ಲೋಕಲೈಸ್ಡ್ ಎಫೆಕ್ಟ್’
ಹವಾಮಾನ ಇಲಾಖೆಯ ಅಧಿಕಾರಿ ಪ್ರಸಾದ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಇತ್ತೀಚಿನ ದಿನಗಳಲ್ಲಿ 30ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನ ಬದ ಲಾವಣೆಯಾಗುತ್ತಿದೆ. ಗಾಳಿಯಲ್ಲಿ ವಾತಾವರಣದ ತೇವಾಂಶ ದಲ್ಲಾಗುವ ಬದಲಾವಣೆಯಿಂದ ಈ ರೀತಿಯ ಸನ್ನಿವೇಶ ಆಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದನ್ನು “ಲೋಕಲೈಸ್ಡ್ ಎಫೆಕ್ಟ್’ ಎನ್ನಬಹುದು. ಒಂದು ಕಡೆ ಗಾಳಿಯ ತೇವಾಂಶ ಹೆಚ್ಚಾಗಿದ್ದರೆ, ಮತ್ತೊಂದು ಕಡೆ ತೇವಾಂಶ ಕಡಿಮೆ ಇರುತ್ತದೆ. ಹೀಗಿರುವಾಗ ತೇವಾಂಶ ಹೆಚ್ಚಾಗಿರುವ ಪ್ರದೇಶದಲ್ಲಿ ಮೋಡಗಳು ಸೃಷ್ಟಿಯಾಗುತ್ತದೆ. ಆ ವೇಳೆ ಮಳೆಯ ಬಿರುಸು ಹೆಚ್ಚಾಗುತ್ತದೆ. ಇನ್ನು, ಇತ್ತೀಚಿನ ದಿನಗಳಲ್ಲಿ ಒಂದೇ ನಗರದ ವಿವಿಧ ಭಾಗಗಳಲ್ಲಿ ತಾಪಮಾನದಲ್ಲಿಯೂ ಏರಿಳಿತ ಕಂಡು ಬರುತ್ತದೆ. ಈ ಎಲ್ಲ ವಿದ್ಯಮಾನಗಳಿಗೆ ವಾತಾವರಣದಲ್ಲಾಗುವ ವಾಯುಮಾಲಿನ್ಯ, ಜನಸಂಖ್ಯೆ ಕೂಡ ಕಾರಣವಾಗಬಹುದು. ಈ ಕುರಿತಂತೆ ಮುಂದಿನ ದಿನಗಳಲ್ಲಿ ವಿಸ್ತೃತ ಸಂಶೋಧನೆಯಿಂದ ಮಾತ್ರ ನಿಖರ ಕಾರಣ ತಿಳಿಯಬಹುದು’ ಎನ್ನುತ್ತಾರೆ.

ಹವಾಮಾನ ವೈಪರೀತ್ಯದ ಲಕ್ಷಣ
ಕೃಷಿ ವಿ.ವಿ. ಹವಾಮಾನ ವಿಜ್ಞಾನಿ ಡಾ| ರಾಜೇಗೌಡ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಇತ್ತೀಚಿನ ದಿನಗಳಲ್ಲಿ ಹೋಬಳಿ ಅಥವಾ ಸೀಮಿತ ಪರಿಧಿಯಲ್ಲಿ ಮಾತ್ರ ಮಳೆಯಾಗುತ್ತಿರುವುದು ಹವಾಮಾನದ ವೈಪರೀತ್ಯದ ಮುನ್ಸೂಚನೆ ಎನ್ನಬಹುದು. ಸುತ್ತ¤ಲಿನ ಮೋಡಗಳು ಒಂದೇ ಕಡೆ ಸೃಷ್ಟಿಯಾಗಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನೈಋತ್ಯ ಮಾನ್ಸೂನ್‌ ಅವಧಿಯಲ್ಲಿ ಮೋಡಗಳು ವಿಶಾಲವಾಗಿ ಹರಡಿರುತ್ತವೆ. ಯಾವ ಭಾಗದಲ್ಲಿ ಮೋಡ ಹೆಚ್ಚಿರುತ್ತದೆಯೋ ಅಲ್ಲಿ ಮಳೆ ಬಿರುಸು ಪಡೆಯುತ್ತದೆ. ವಾತಾವರಣದಲ್ಲಾಗುವ ತೇವಾಂಶದ, ಒತ್ತಡದ ಪರಿಣಾಮ ಮೋಡಗಳು ಒಂದೆಡೆಯಿಂದ ಮತ್ತೂಂದೆಡೆಗೆ ಚಲಿಸುತ್ತವೆ. ಯಾವ ಭಾಗದಲ್ಲಿ ಮಳೆಯಾಗುತ್ತಿರುತ್ತದೋ ಆ ಭಾಗದಲ್ಲೇ ಮತ್ತೆ ಮತ್ತೆ ಮೋಡ ಸೃಷ್ಟಿಯಾಗಿ ಗಂಟೆಗಟ್ಟಲೇ ಮಳೆ ಸುರಿ ಯುತ್ತದೆ. ಇತ್ತೀಚಿಗೆ ಈ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಇದು ಹವಾಮಾನ ವೈಪರೀತ್ಯದ ಲಕ್ಷಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next