Advertisement

ಸುದರ್ಶನ ಉರಾಳರಿಗೆ ಯಕ್ಷಜಂಗಮ ಪ್ರಶಸ್ತಿ 

06:12 PM Aug 24, 2018 | |

ಕೋಟದ ಸುದರ್ಶನ ಉರಾಳರು ಎಲೆಕ್ಟ್ರಿಕಲ್‌ ಡಿಪ್ಲೊಮ ಪದವೀಧರ. ಯಕ್ಷಗಾನ ಅವರ ಹವ್ಯಾಸ. ಮನೆಯ ಸುತ್ತಮುತ್ತ ಸದಾ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಿಂದ ಪ್ರಭಾವಿತರಾದ ಉರಾಳರು ಮೊದಲು ಗೆಜ್ಜೆಕಟ್ಟಿದ್ದು ಶಾಂಭವಿ ಗಿಳಿಯಾರು ಶಾಲೆಯ ಯಕ್ಷ ವೇದಿಕೆಯಲ್ಲಿ. 1979ರಲ್ಲಿ ಗುರು ಎಂ.ಎನ್‌. ಮಧ್ಯಸ್ಥರಿಂದ ತರಬೇತಿ ಪಡೆದು ಯಕ್ಷತರಂಗ ಬಾಲಕರ ಯಕ್ಷಗಾನ ಮೇಳದಲ್ಲಿ ಒಡ್ಡೋಲಗ ಕೊಟ್ಟವರು. ಮುಂದೆ ನಾಲ್ಕು ವರ್ಷಗಳ ಕಾಲ ಅದೇ ಮೇಳದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ರಾಜ್ಯಾದ್ಯಂತ ಯಕ್ಷಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು. 

Advertisement

 ಶಿವರಾಮ ಕಾರಂತರು, ಮದ್ದಲೆ ಮಹಾಬಲ ಕಾರಂತರು, ನೀಲಾವರ ಲಕ್ಷ್ಮೀನಾರಾಯಣ ರಾವ್‌, ಹೆರೆಂಜಾಲು ವೆಂಕಟರಮಣ ಗಾಣಿಗ, ಪೇತ್ರಿ ಮಂಜುನಾಥ ಪ್ರಭು, ಬನ್ನಂಜೆ ಸಂಜೀವ ಸುವರ್ಣರು ಹೀಗೆ ಅನೇಕ ಗುರು ಪರಂಪರೆಯಡಿಯಲ್ಲಿ ಉರಾಳರು ಬೆಳೆದು ಬಂದವರು. ಯಕ್ಷ ನಾಟ್ಯದ ಜೊತೆಗೆ ಮದ್ದಲೆ ವಾದನ, ಯಕ್ಷಪ್ರಸಾಧನ ಕಲೆಗಳನ್ನು ಮೈಗೂಡಿಸಿಕೊಂಡರು. ಸ್ತ್ರೀ ವೇಷಕ್ಕೆ ಒಪ್ಪುವ ಆಳಂಗ, ಶಾರೀರದಿಂದಾಗಿ ಸುಗಭೆì, ಕಮಲಗಂಧಿನಿ, ಆಸ್ತಿ, ಸುಭದ್ರೆ ಮೊದಲಾದ ಪಾತ್ರಗಳಲ್ಲಿ ಮಿಂಚಿದರು. 

 ಹತ್ತು ಹಲವು ಸಂಘ ಸಂಸ್ಥೆಗಳು , ಶಾಲಾ ಕಾಲೇಜುಗಳಲ್ಲಿ ನೂರಾರು ಹವ್ಯಾಸಿ ಕಲಾವಿದರಿಗೆ ಗೆಜ್ಜೆ ಕಟ್ಟಿಸಿದವರು. ತಾವೇ ಪ್ರಸಂಗವನ್ನು ನಿರ್ದೇಶಿಸಿ, ಚೌಕಿಯಲ್ಲಿ ಪಾತ್ರಧಾರಿಗಳಿಗೆ ವೇಷಕಟ್ಟಿ, ವೇದಿಕೆಯಲ್ಲಿ ಮದ್ದಲೆ ಹಿಡಿದು ರಂಗಕಟ್ಟಿದವರು ಉರಾಳರು. 

ಯಕ್ಷದರ್ಶನ ಹಂದಟ್ಟು ಕೋಟ ಎಂಬುದು ಉರಾಳರ ಕನಸಿನ ಕೂಸು. ಸಮಾನ ಮನಸ್ಕರಾದ ಹವ್ಯಾಸಿ ಯಕ್ಷಗಾನ ಕಲಾವಿದರನ್ನು ಕೂಡಿಕೊಂಡು ಕಟ್ಟಿದ ಸಂಸ್ಥೆ ನಾಡಿನಾದ್ಯಂತ ದಿಗ್ವಿಜಯವನ್ನು ಸಾಧಿಸಿದೆ. ರಂಗಾಯಣದಲ್ಲಿ ಬಿ. ವಿ. ಕಾರಂತರ ನಿರ್ದೇಶನದ ಪುಣ್ಯಕೋಟಿ, ಬೊಮ್ಮನಹಳ್ಳಿ ಕಿಂದರಿಜೋಗಿ, ರಾಗರಸ ನಾಟಕಗಳಲ್ಲಿ ನೃತ್ಯ ಸಂಯೋಜನೆ ಮತ್ತು ಚಂಡೆವಾದನದ ಮೂಲಕ ಗುರುತಿಸಿಕೊಂಡವರು.ಪುಣೆ ಫಿಲ್ಮ್ ಅಕಾಡೆಮಿಯ ಪರಿಭ್ರಮಣ ಎಂಬ ಹಿಂದಿ ಚಲನಚಿತ್ರದಲ್ಲಿ ನಟನೆ, ಕನ್ನಡದ ರಂಗ ಎಸ್‌ಎಸ್‌ಎಲ್‌ಸಿ, ಯಶವಂತ್‌ ಚಲನಚಿತ್ರಗಳಲ್ಲಿ ನಟಿಸಿರುವುದು ಉರಾಳರ ಹೆಮ್ಮೆಯ ಗರಿಗಳಲ್ಲಿ ಒಂದು. 

ಮೂರು ದಶಕಗಳಿಂದ ಕೆ.ಮೋಹನ್‌ ನೇತೃತ್ವದ ಬೆಂಗಳೂರಿನ ಯಕ್ಷದೇಗುಲ ಯಕ್ಷಗಾನ ತಂಡದಲ್ಲಿ ಮದ್ದಲೆ ವಾದಕರಾಗಿ, ನೃತ್ಯ ನಿರ್ದೇಶಕರಾಗಿ, ಪ್ರಸಾಧನ ಕಲಾವಿದರಾಗಿ, ಮೈಕ್‌ಲೈಟ್‌ ಟೆಕ್ನೀಷಿಯನ್‌ ಆಗಿ, ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾ ದೇಶದ ಉದ್ದಗಲಕ್ಕೂ ಯಕ್ಷ ಪ್ರದರ್ಶನ ನೀಡುವಲ್ಲಿ ದುಡಿಯುತ್ತಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಉರಾಳರು ನಾಡಿನ ಅನೇಕ ಪತ್ರಿಕೆಗಳಿಗೆ ರಂಗ ವಿಮರ್ಶೆಗಳನ್ನು ಬರೆದಿದ್ದಾರೆ. 
 ಸದಾ ರಂಗಾಸಕ್ತಿಯಲ್ಲಿ ತೊಡಗಿಸಿಕೊಂಡಿರುವ ಉರಾಳರನ್ನು ಆಗಸ್ಟ್‌ 26ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷ‌ಜಂಗಮ ಪ್ರಶಸ್ತಿನ್ನಿತ್ತು ಗೌರವಿಸಲಾಗುವುದು. 

Advertisement

ಸುಜಯೀಂದ್ರ ಹಂದೆ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next