Advertisement

ಸಂಪೂರ್ಣ ಹದಗೆಟ್ಟ ಸೂಡ -ಪಳ್ಳಿ ಸಂಪರ್ಕ ರಸ್ತೆಗೆ ಬೇಕಿದೆ ಕಾಯಕಲ್ಪ

02:15 AM Jul 04, 2018 | Karthik A |

ಬೆಳ್ಮಣ್‌ : ಪಳ್ಳಿ- ಸೂಡಾ ಸಂಪರ್ಕ ರಸ್ತೆಯು ಪಿಲಾರುಖಾನದಿಂದ ಪಳ್ಳಿಯವರೆಗೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಮಳೆಗಾಲಕ್ಕೆ ವಾಹನ, ಪಾದಚಾರಿಗಳ ಸಂಚಾರ ದುಸ್ತರವೆನಿಸಿದೆ. ಈ ರಸ್ತೆಗೆ ಮರು ಡಾಮರೀಕರಣ ನಡೆಸಬೇಕೆಂದು ಈ ಭಾಗದ ಜನ ಆಗ್ರಹಿಸಿದ್ದಾರೆ. ರಸ್ತೆಯುದ್ದಕ್ಕೂ ದೈತ್ಯ ಗಾತ್ರದ ಹೊಂಡಗಳು ನಿರ್ಮಾಣಗೊಂಡ ಪರಿಣಾಮ ವಾಹನ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಪಿಲಾರುಖಾನದಿಂದ ಸೂಡ ಮಾರ್ಗವಾಗಿ ಪಳ್ಳಿ ನಿಂಜೂರು ಕಡೆ ಸಾಗುವ ಈ ರಸ್ತೆ ಸುಮಾರು 5ರಿಂದ 6 ಕಿ.ಮೀ ಉದ್ದಕ್ಕೂ ಸಂಪೂರ್ಣ ಕಿತ್ತು ಹೋಗಿದ್ದು, ಜಲ್ಲಿ ಹಾಗೂ ಟಾರುಗಳನ್ನು ಹುಡುಕಾಡುವ ಸ್ಥಿತಿ ನಿರ್ಮಾಣಗೊಂಡಿದೆ.

Advertisement

ಬೆಳ್ಮಣ್‌, ಶಿರ್ವ ಭಾಗದಿಂದ ಪಳ್ಳಿ ನಿಂಜೂರು ಹಾಗೂ ಬೈಲೂರು, ಕಾರ್ಕಳಕ್ಕೆ ತೆರಳಲು ಇದೇ ಹತ್ತಿರದ ರಸ್ತೆಯಾಗಿದೆ. ರಸ್ತೆಯ ಪರಿಸ್ಥಿತಿ ಗಮನಿಸಿರುವ ಬಾಡಿಗೆ ವಾಹನಗಳೂ ಕೂಡ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಗ್ರಾಮಸ್ಥರು ಕೆಲವು ಸಂದರ್ಭ ಕಾಲು ನಡಿಗೆಯಲ್ಲೇ ಸಂಚಾರ ನಡೆಸುವಂತಹ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ.


ಟಿಪ್ಪರ್‌ ಗಳ ಸಂಚಾರವೇ ಕಾರಣ

ಪಳ್ಳಿ ಹಾಗೂ ಸೂಡದಲ್ಲಿ ಕಲ್ಲಿನ ಕೋರೆಗಳು ಅಧಿಕವಾಗಿರುವ ಪರಿಣಾಮ ಘನ ವಾಹನಗಳು ಹೆಚ್ಚಾಗಿ ಇದೇ ರಸ್ತೆಯಲ್ಲಿ ಸಾಗುತ್ತವೆ. ಈ ಕಾರಣಕ್ಕೇ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿವೆ ಎನ್ನುತ್ತಾರೆ ಸ್ಥಳೀಯರು. ಸಮಸ್ಯೆಯನ್ನು ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಶಾಸಕರಿಗೆ ಮನವಿ
ಈ ರಸ್ತೆ ಜಿಲ್ಲಾ ಪಂಚಾಯತ್‌ ರಸ್ತೆಯಾಗಿದ್ದು ಶಿರ್ವ, ಮುದರಂಗಡಿ, ಬೆಳ್ಮಣ್‌, ಪಳ್ಳಿ,  ಪಂಚಾಯತ್‌ಗಳಿಗೆ ಸಂಬಂಧಪಟ್ಟಿದೆ. ಈಗಾಗಲೇ ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಅವರಿಗೆ ಮನವಿ ಮಾಡಲಾಗಿದ್ದು ಸ್ಪಂದಿಸುವ ಭರವಸೆ ನೀಡಿದ್ದಾರೆ.
– ಸೂಡಾ ಶಂಕರ ಕುಂದರ್‌, ಗ್ರಾ.ಪಂ. ಸದಸ್ಯ, ಬೆಳ್ಮಣ್‌

ರಸ್ತೆಯನ್ನು ದುರಸ್ತಿಮಾಡಿ
ಘನವಾಹನಗಳು ಹೆಚ್ಚಾಗಿ ಈ ಭಾಗದಲ್ಲಿ ಸಂಚಾರ ನಡೆಸುತ್ತಿರುವ ಕಾರಣ ರಸ್ತೆ ತೀರ ಹದಗೆಟ್ಟಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.
– ಪ್ರತಿಮಾ, ಸ್ಥಳೀಯರು

Advertisement

ಹೊಂಡಗಳಿಗೆ ಮುಕ್ತಿ ಕರುಣಿಸಿ
ರಸ್ತೆಯುದ್ದಕ್ಕೂ ಸಂಪೂರ್ಣ ಹೊಂಡಗುಂಡಿಗಳು ತುಂಬಿದ್ದು ಇಲ್ಲಿ ಸಂಚಾರ ನಡೆಸುವುದೇ ಅಸಾಧ್ಯ. ಕೂಡಲೇ ಗುಂಡಿಗಳಿಗೆ ಮುಕ್ತಿ ಕರುಣಿಸಿ.
– ಸತೀಶ್‌ ಪಿಲಾರು, ರಿಕ್ಷಾ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next