ಕಥೆ ಮಾಡೋದಕ್ಕಂತ ಸುಮಾರು ಮೂವತ್ತೈದು, ನಲವತ್ತು ಹಳ್ಳಿಗಳನ್ನು ಸುತ್ತಿದರಂತೆ ಆನಂದಪ್ರಿಯ. ಪ್ರತಿ ಹಳ್ಳಿಗೆ ಹೋದಾಗಲೂ ಒಬ್ಬರಲ್ಲಾ ಒಬ್ಬರು ಓಳ್ ಮುನ್ಸಾಮಿಗಳು ಸಿಗುತ್ತಿದ್ದರಂತೆ. ಕೊನೆಗೆ ಅದೇ ಓಳ್ ಮುನ್ಸಾಮಿಯ ಪಾತ್ರವನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಿರುವುದಷ್ಟೇ ಅಲ್ಲ, ಅದೇ ಹೆಸರನ್ನು ಇಟ್ಟಿದ್ದಾರೆ. ಈಗ ಆ ‘ಓಳ್ ಮುನ್ಸಾಮಿ’ ಸದ್ದಿಲ್ಲದೆ ಮುಗಿದಿದೆ. ಇತ್ತೀಚೆಗೊಂದು ದಿನ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ತಮ್ಮ ತಂಡದವರೊಂದಿಗೆ ಬಂದಿದ್ದರು ಆನಂದಪ್ರಿಯ.
ಆನಂದಪ್ರಿಯ ಹೇಳುವಂತೆ ಇದು ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕಥೆಯಂತೆ. ‘ಇದೊಂದು ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕೋಲ್ಡ್ ವಾರ್ ಕುರಿತ ಸಿನಿಮಾ. ಇಲ್ಲಿ ಕಾಶೀನಾಥ್ ಆಸ್ತಿಕನಾದರೆ, ‘ಜಲ್ಸಾ’ದ ನಿರಂಜನ್ ಒಡೆಯರ್ ನಾಸ್ತಿಕನಾಗಿ ಅಭಿನಯಿಸಿದ್ದಾರೆ. ಸಾಮಾನ್ಯವಾಗಿ ಸುಳ್ಳು ಹೇಳುವವನಿಗೆ ಓಳ್ ಮುನ್ಸಾಮಿ ಅಂತ ಹೇಳುವುದು ವಾಡಿಕೆ. ಇಲ್ಲಿ ಅದು ಉಲ್ಟಾ. ಇಲ್ಲಿ ಮುನ್ಸಾಮಿ ಬರೀ ಸತ್ಯವನ್ನೇ ಹೇಳುತ್ತಾನೆ. ಆದರೆ, ಈಗ ಸತ್ಯ ಹೇಳುವವರು ಓಳ್ ಬಿಡುವವರು ಅಂತ ಆಗೋಗಿದೆ. ಹಾಗಾಗಿ ಚಿತ್ರಕ್ಕೆ ಆ ಹೆಸರು ಇಟ್ಟಿದ್ದೀವಿ. ಇದೊಂದು ಫ್ಯಾಮಿಲಿ ಸಿನಿಮಾ. ಅಸಭ್ಯತೆ, ಡಬ್ಬಲ್ ಮೀನಿಂಗ್ ಯಾವುದೂ ಇಲ್ಲ’ ಎಂದರು ಆನಂದಪ್ರಿಯ. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.
ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಕಾಶೀನಾಥ್, ಇದು ತಮ್ಮ ಪಾಲಿಗೆ ವಿಭಿನ್ನ ಸಿನಿಮಾ ಎಂದರು. ‘ನಾನು ಇದುವರೆಗೂ ಇಂಥಾ ಪಾತ್ರ ಮಾಡಿರಲಿಲ್ಲ. ಕಥೆ ಕೇಳಿದೆ ಇಷ್ಟವಾಯಿತು, ಅದೇ ಕಾರಣಕ್ಕೆ ಒಪ್ಪಿಕೊಂಡೆ. ಚಿತ್ರದಲ್ಲಿ ಸಂಭಾಷಣೆಗಳು ಚೆನ್ನಾಗಿವೆ’ ಎಂದರು. ಇನ್ನು ಕಾಶೀನಾಥ್ ಅವರು ತಮ್ಮ ಚಿತ್ರದಲ್ಲಿ ಇರುವುದೇ ಜಾಕ್‌ಪಾಟ್ ಎಂದರು ನಿರಂಜನ್. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗನ ಪಾತ್ರ ಮಾಡಿದ್ದಾರಂತೆ. ‘ಯಾವುದೇ ಸ್ಟೈಲ್‌ಗಳಿಲ್ಲದೆ ಸಾಮಾನ್ಯ ಹೈದನ ಪಾತ್ರ. ನನ್ನ, ಕಾಶೀನಾಥ್ ಅವರ ಮಧ್ಯೆ ಹಗ್ಗಾ ಜಗ್ಗಾಟ ನಡೆಯುತ್ತಲೇ ಇರುತ್ತವೆ. ಇಬ್ಬರಲ್ಲಿ ಯಾರು ಗೆಲ್ತೀವಿ ಅನ್ನೋದೇ ಸಸ್ಪೆನ್ಸ್’ ಎಂದರು. ಇನ್ನು ಅಖೀಲಾ ಪ್ರಕಾಶ್ ಚಿತ್ರದಲ್ಲಿ ಗಂಗಾ ಎಂಬ ಮುಗ್ಧ ಹುಡುಗಿಯ ಪಾತ್ರವನ್ನು ಮಾಡಿದ್ದಾರಂತೆ. ಇನ್ನು ಈ ಚಿತ್ರವನ್ನು ಸಮೂಹ ಟಾಕೀಸ್ ಸಂಸ್ಥೆ ನಿರ್ಮಿಸುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಸತೀಶ್ ನೀನಾಸಂ ಬಂದಿದ್ದರು. ಸಂಗೀತ ನಿರ್ದೇಶಕ ಸತೀಶ್ ಬಾಬು, ಗೀತರಚನೆಕಾರ ರಾಮ್‌ನಾರಾಯಣ್ ಮುಂತಾದವರು ಇದ್ದರು.