ಬೆಂಗಳೂರು : ‘ಕಾಂತಾರ’ ಚಿತ್ರದ ಕುರಿತು ‘ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ’ ಎಂದು ನಟ ಚೇತನ್ ಅಹಿಂಸಾ ಅವರ ಹೇಳಿಕೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು, ‘ಇಂತಹ ಹೇಳಿಕೆಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಬಾರದು , ಅಲ್ಲಿಗೆ ಬಿಟ್ಟು ಬಿಡಬೇಕು’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೇತನ್ ಹೇಳಿಕೆಗಳ ಕುರಿತು ಕೇಳಿದಾಗ ಪ್ರತಿಕ್ರಿಯಿಸಿ, ”ಅದೆಲ್ಲ ಮಾತಾಡಬೇಡಿ. ಯಾವ್ಯಾವುದೋ ವಿಚಾರಕ್ಕೆ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡಬೇಡಿ” ಎಂದು ಕಿವಿ ಮಾತು ಹೇಳಿದರು.
ಇದನ್ನೂ ಓದಿ :ದೆಹಲಿ ಪಟಾಕಿ ನಿಷೇಧ ಆದೇಶ ರದ್ದುಗೊಳಿಸಲು ಸುಪ್ರೀಂ ನಕಾರ; ಹಣ ಸಿಹಿ ತಿಂಡಿಗೆ ಉಪಯೋಗಿಸಿ…
”ಯಾವತ್ತೇ ಆಗಲಿ ಇಂತಹದ್ದಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬಾರದು. ಅದನ್ನು ನಿರ್ಲಕ್ಷ ಮಾಡಬೇಕು ಅದನ್ನು ಬಿಟ್ಟು ಬಿಡಿ, ದೈವಾರಾಧನೆ, ದೇವರು ಎಲ್ಲವೂ ವೈಯಕ್ತಿಕ ನಂಬಿಕೆ. ಅದನ್ನು ಸಾಮಾಜಿಕವಾಗಿ ಕಿತ್ತಾಡುವುದು ಅಸಹ್ಯ. ನಾನು ಅದೇ ಊರಿನವ, ನಮ್ಮ ತಂದೆ ಪ್ರತಿ ವರ್ಷ ನಾಗನ ಪೂಜೆ ಮಾಡಿಸುತ್ತಾರೆ. ಅದು ನಂಬಿಕೆ ಇರುವ ಜಾಗ, ವಿಶೇಷವಾದ ಗೌರವ ಇದೆ” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಕಾಂತಾರ’ ಚಿತ್ರದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿ, ಮುಂದೆ ನನಗೂ ಇಂತಹ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ರಿಷಬ್ ಶೆಟ್ಟಿ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನೂ ತುಂಬಾ ಉತ್ಸುಕನಾಗಿದ್ದೇನೆ. ನನ್ನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಯಾಗಿದ್ದೆ. ಆದಷ್ಟು ಬೇಗ ಚಿತ್ರ ನೋಡಿ, ರಿಷಬ್ ಅವರಿಗೆ ಕರೆ ಮಾಡಿ ಮಾತನಾಡುತ್ತೇನೆ. ರಿಷಬ್ ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಮೊದಲ ಚಿತ್ರದಿಂದಲೂ ಅವರೊಬ್ಬ ತುಂಬಾ ಪ್ರತಿಭಾವಂತ ನಿರ್ದೇಶಕ ಎಂದು ತೋರಿಸಿಕೊಟ್ಟಿದ್ದಾರೆ” ಎಂದು ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.
”ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿರುವುದು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ” ಎಂದು ಟ್ವೀಟ್ ಮಾಡಿ ಚೇತನ್ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದರು.