Advertisement

ಟೋಲ್‌ ವಿರುದ್ಧ ಉಡುಪಿ ಜಿಲ್ಲಾ ಬಂದ್‌ ಯಶಸ್ವಿ

08:49 AM Feb 14, 2017 | Team Udayavani |

ಪಡುಬಿದ್ರಿ/ಉಡುಪಿ: ಹೆದ್ದಾರಿಯಲ್ಲಿ ಸುಂಕ ವಸೂಲಿ ಆರಂಭಿಸಿರುವ ನವಯುಗ ಕಂಪೆನಿಯ ವಿರುದ್ಧ ತಿರುಗಿಬಿದ್ದಿರುವ ಸ್ಥಳೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಹೋರಾಟಗಾರರು ಕರೆ ನೀಡಿದ್ದ ಉಡುಪಿ ಜಿಲ್ಲಾ ಬಂದ್‌ ಯಶಸ್ಸನ್ನು ಕಂಡಿದೆ.

Advertisement

ಫ‌ೆ. 25ರ ವರೆಗೆ ಸ್ಥಳೀಯರಿಗೆ ವಿನಾಯಿತಿ ನೀಡುವುದಾಗಿ ಪ್ರಕಟಿಸಿದ ಬಳಿಕ ಸೋಮವಾರ ಮಧ್ಯಾಹ್ನದ ವೇಳೆಗೆ ಹೆಜಮಾಡಿ ಟೋಲ್‌ಗೇಟ್‌ ವಿರುದ್ಧದ ಪ್ರತಿಭಟನೆಯನ್ನು ಹಿಂದೆ ಗೆದುಧಿಕೊಳ್ಳಲಾಯಿತು. ಬಳಿಕ ಪ್ರತಿಭಟನಕಾರರು ಚದುರಿದರು.

ಬೆಳಗ್ಗಿನಿಂದಲೇ ರಾ. ಹೆ.66 ಹಾದುಹೋಗುವ ಕಾಪು, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಹಾಗೂ ಹೆಜಮಾಡಿಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಕೆಲ ಸರಕಾರಿ ಬಸ್‌ಗಳು ಮಾತ್ರ ಮಂಗಳೂರು- ಉಡುಪಿ ಮಧ್ಯೆ ಸಂಚಾರ ನಡೆಸಿದವು. ಸಂಜೆ ವೇಳೆಗೆ ಉಡುಪಿ- ಮಂಗಳೂರು- ಕುಂದಾಪುರ ಹೆದ್ದಾರಿಯಲ್ಲಿ ಕೆಲ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದವು. ಶಿರ್ವ, ಮುದರಂಗಡಿ, ಕಾರ್ಕಳ ಭಾಗದಲ್ಲಿ ಎಂದಿನಂತಿತ್ತು. ಸಂಚಾರಕ್ಕೆ ಸಮಸ್ಯೆಯಾದ ಕಡೆಗಳಲ್ಲಿ ಶಾಲಾ, ಕಾಲೇಜಿಗೆ ರಜೆ ಸಾರಲಾಗಿತ್ತು.

ಮುಕ್ತ ಪ್ರವೇಶ-ಗೊಂದಲ
ಪ್ರತಿಭಟನೆಯ ಕೊನೆಯಲ್ಲಿ ಹೋರಾಟಗಾರರ ಪರ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿಕೆ ನೀಡಿ, ಫೆ. 25ರ ವರೆಗೆ ಕೆಎ 20 ನೋಂದಣಿಯ ಬಿಳಿ ಮತ್ತು ಹಳದಿ ಬೋರ್ಡ್‌ ವಾಹನಗಳಿಗೆ 20 ಕಿ.ಮೀ. ವ್ಯಾಪ್ತಿಯಲ್ಲಿ ಮುಕ್ತ ಪ್ರವೇಶ, ಕೆಎ 19 ನೋಂದಣಿಯ ಎಲ್ಲ ವಾಹನಗಳಿಗೆ ಟೋಲ್‌ಗೇಟ್‌ನ 5 ಕಿ.ಮೀ. ವ್ಯಾಪ್ತಿಯಲ್ಲಿ ಮುಕ್ತ ಅವಕಾಶವಿದೆ ಎಂದರು.
ಉಡುಪಿ ತಹಶೀಲ್ದಾರ್‌ ಮಹೇಶ್‌ಚಂದ್ರ ಮಾತನಾಡಿ, ತಲಪಾಡಿಯಲ್ಲಿ ನವಯುಗ ಕಂಪೆನಿ ತೆಗೆದುಕೊಂಡ ನಿರ್ಣಯದಂತೆಯೇ ಇಲ್ಲೂ ಕೇವಲ ಕೆ.ಎ. 20 ನೋಂದಣಿಯ ಬಿಳಿ ಮತ್ತು ಹಳದಿ ನೋಂದಣಿ ಬೋರ್ಡ್‌ ವಾಹನಗಳಿಗೆ ಹೆಜಮಾಡಿ ಟೋಲ್‌ಗೇಟ್‌ನ 5 ಕಿ.ಮೀ. ವ್ಯಾಪ್ತಿಯಲ್ಲಿ ಫೆ. 25ರ ವರೆಗೆ ಉಚಿತ ಪ್ರವೇಶಕ್ಕಾಗಿ ಕಂಪೆನಿಯು ಒಪ್ಪಿದೆ. ಕೆ.ಎ. 19 ನೋಂದಣಿಯ ವಾಹನಗಳ ಕುರಿತಾಗಿ ತಾನೇನೂ ಹೇಳಿಕೆಯನ್ನು ನೀಡಿಲ್ಲವೆಂದು ಹೇಳಿದ್ದಾರೆ.

ಬೇಗನೆ ರಸ್ತೆ ತಡೆ
ಬೆಳಗ್ಗೆ ಸುಮಾರು 9.15ರ ವೇಳೆಗೆ ಪ್ರತಿಭಟನಕಾರರು ಹೆಜಮಾಡಿ ಟೋಲ್‌ಗೇಟ್‌ ಹಾಗೂ ಪಡುಬಿದ್ರಿ ಪೇಟೆಗಳಲ್ಲಿ ಹೆದ್ದಾರಿ ತಡೆ ಮಾಡಿದರು. 10 ಗಂಟೆಯ ಸುಮಾರಿಗೆ ಪಡುಬಿದ್ರಿಯ ಮುಖ್ಯಪೇಟೆಯಲ್ಲಿ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರು ಉಡುಪಿ ಜಿಲ್ಲಾಧಿಕಾರಿ, ಟೋಲ್‌ಗೇಟ್‌ಗಳ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು. ಮಹಿಳಾ ಪ್ರತಿಭಟನಕಾರರು ಹೋರಾಟದ ಬಗ್ಗೆ ಹೆಚ್ಚಿನ ದನಿ ಎತ್ತತೊಡಗಿದಾಗ ಅವರನ್ನು ಸುತ್ತುವರಿದ ಪೊಲೀಸರು ಉಡುಪಿ ಜಿಲ್ಲಾ ಎಡಿಶನಲ್‌ ಎಸ್ಪಿ ಎನ್‌. ವಿಷ್ಣುವರ್ಧನ್‌ ಆದೇಶದ ಮೇರೆಗೆ ಬಂಧಿಸತೊಡಗಿದಾಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.

Advertisement

ತಹಶೀಲ್ದಾರ್‌ ಮಧ್ಯಸ್ಥಿಕೆ
ಹೋರಾಟಗಾರರು ಪಡುಬಿದ್ರಿ ಪಂಚಾಯತ್‌ ಮೈದಾನಕ್ಕಾಗಮಿಸಿ ಅಲ್ಲಿಂದ ಹೆಜಮಾಡಿಯ ಟೋಲ್‌ಗೇಟ್‌ ಕಡೆಗೆ ಹೋಗಲು ನಿರ್ಧರಿಸಿದ್ದರು. ಪೊಲೀಸರು ಅವರನ್ನು ಮತ್ತೆ ಬಂಧಿಸಲು ಮುಂದಾದರು. ಆದರೆ ಆ ವೇಳೆಗಾಗಲೇ ಸ್ಥಳಕ್ಕಾಗಮಿಸಿದ ಉಡುಪಿ ತಹಶೀಲ್ದಾರ್‌ ಮಹೇಶ್‌ಚಂದ್ರ ಮಧ್ಯಸ್ಥಿಕೆಯಲ್ಲಿ ಪ್ರತಿಧಿಭಟನೆಯ ಕಾವನ್ನು ಆರಿಸಲು ಪೊಲೀಸರು ಯಶಸ್ವಿಯಾದರು. 

ಉಡುಪಿ: ಜನಸಂಚಾರ ವಿರಳ
ಜಿಲ್ಲಾ ಬಂದ್‌ ಕರೆಯಿಂದಾಗಿ ಉಡುಪಿ ನಗರದಲ್ಲಿ ಜನಸಂಚಾರ ಸ್ವಲ್ಪ ವಿರಳವಾಗಿತ್ತು. ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದಲ್ಲಿ ಕೆಲ ಅಂಗಡಿಗಳು ಬಂದ್‌ ಆಗಿದ್ದವು. ಉಡುಪಿಯಲ್ಲಿ ಸಿಟಿ, ನರ್ಮ್ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದವು. ಆದರೆ ಗ್ರಾಮೀಣ ಪ್ರದೇಶದ ಜನರು ಬಸ್‌ ಇಲ್ಲದೆ ಪರದಾಡಿದರು. 
ಉಡುಪಿಯಿಂದ ಮಂಗಳೂರು ಕುಂದಾಪುರ ಭಾಗವಾಗಿ ತೆರಳುವ ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ಜನ ಸಂಚಾರವೂ ಕಡಿಮೆ ಇತ್ತು.

ಎರಡು ಬಾರಿ ಬಂಧನ ಯತ್ನ ವಿಫಲ
ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಹೆದ್ದಾರಿಯಲ್ಲಿ ನಿಂತಿದ್ದ ಪ್ರತಿಭಟನಕಾರರನ್ನು ಬಂಧಿಸಿ ಸರಕಾರಿ ಬಸ್‌ಗೆ ತುಂಬಿಸತೊಡಗಿದಾಗ ಮಿಕ್ಕುಳಿದ ಮಂದಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಬಂಧಿತರು ಬಸ್‌ನಿಂದ ಹೊರಜಿಗಿದು ಮತ್ತೆ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು. ಮತ್ತೆ ಹೆದ್ದಾರಿಯಲ್ಲಿ ಮಲಗಿ ಹೋರಾಟವನ್ನು ಮುಂದುವರಿಸಿದಾಗ ಮಗದೊಮ್ಮೆ ಅವರನ್ನು ಬಂಧಿಸಲು ಪೊಲೀಸರು ಮುಂದಾದರಾದರೂ ಅದೂ ಯಶಸ್ವಿಯಾಗಲಿಲ್ಲ. ಬಸ್‌ ಮುಂದೆ ನಿಂತು ಪ್ರತಿಭಟಿಸಿದಾಗ ಮತ್ತೆ ಅವರನ್ನು ಬಿಡುಗಡೆಗೊಳಿಸಲಾಯಿತು.

ಲಾಠಿ ಬೀಸಿದ ಮಹಿಳಾ ಎಸ್‌ಐ?
ಅಂತಿಮ ಕ್ಷಣದಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಆಗಮಿಸಿದ್ದ ಮಹಿಳಾ ಪಿಎಸ್‌ಐ ಸುನೀತಾ ಕೆ.ಆರ್‌. ಅವರು ಹೆದ್ದಾರಿ ಸುಗಮ ಸಂಚಾರ ನಿರ್ವಹಣೆಯ ವೇಳೆ ಲಾಠಿ ಬೀಸಿದರೆಂದು ಗುಲ್ಲೆದ್ದು ಮತ್ತೆ ಗೊಂದಲ ಉಂಟಾಯಿತು. ಎಎಸ್ಪಿ ವಿಷ್ಣುವರ್ಧನ್‌ ಅಂಥದ್ದೇನೂ ನಡೆದಿಲ್ಲಧಿವೆಂದಿದ್ದು ಪರಿಸ್ಥಿತಿಧಿಯನ್ನು ತಿಳಿಗೊಳಿಸಿದರು. ಪೊಲೀಸ್‌ ಅಧಿಕಾರಿಗಳ ಸಹಿತ ಸ್ಥಳದಲ್ಲಿದ್ದ 2 ಕೆಎಸ್‌ಆರ್‌ಪಿ ತುಕಡಿ, ಒಂದು ಡಿಆರ್‌ ತುಕಡಿ, ಮಂಗಳೂರು ಮತ್ತು ಚಿಕ್ಕಮಗಳೂರುಗಳಿಂದ ಕರೆಸಲಾಗಿದ್ದ ಪೊಲೀಸ್‌ ಬೆಂಗಾವಲಿನೊಂದಿಗೆ ಪ್ರತಿಭಟನೆಯನ್ನು ಸಮರ್ಥವಾಗಿ ನಿಯಂತ್ರಿಸಲಾಯಿತು.

ಫೆ. 25ರೊಳಗೆ ಮಾತುಕತೆ-ವಿವಾದ ಇತ್ಯರ್ಥ
ಬೆಂಗಳೂರಿನಲ್ಲಿ ಫೆ. 14ರಂದು ಉಡುಪಿ ಜಿಲ್ಲಾಧಿಕಾರಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ನವಯುಗ ಕಂಪೆನಿಯ ಸಭೆ ನಡೆಯಲಿದೆ. ಫೆ. 25ರೊಳಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳೂ ಸೇರಿದಂತೆ ಸಭೆಯೊಂದು ನಡೆಯಲಿದ್ದು ಜಿಲ್ಲೆಯ ನವಯುಗ ಟೋಲ್‌ಗೇಟ್‌ಗಳಿಗೆ ಸಂಬಂಧಿಸಿದಂತೆ ಇತ್ಯರ್ಥಕ್ಕೆ ಬರಲಾಗುವುದು ಎಂದು ತಹಶೀಲ್ದಾರ್‌ ಮಹೇಶ್‌ಚಂದ್ರ ತಿಳಿಸಿದ್ದಾರೆ.

ಕಾಲಮಿತಿಯಲ್ಲಿ ಮಿಕ್ಕುಳಿದ ರಾಷ್ಟ್ರೀಯ ಹೆದ್ದಾರಿಯ ಅತೀ ಮುಖ್ಯ ಕಾಮಗಾರಿಗಳನ್ನು ಪೂರೈಸಲು ಜಿಲ್ಲಾಡಳಿತ ಮತ್ತು ನವಯುಗ ಕಂಪೆನಿ ನಡುವೆ ಪರಸ್ಪರ ಒಪ್ಪಂದವನ್ನು ಬರೆಸಿಕೊಳ್ಳುವುದು, ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಕೆ.ಎ. 20 ಅಥವಾ ಮೂಲ್ಕಿ ಪ್ರದೇಶಕ್ಕೆ ಸಮೀಪಧಿದಲ್ಲಿರುವ ಕೆ.ಎ. 19 ವಾಹನಗಳ ಮುಕ್ತ ಪ್ರವೇಶಕ್ಕಾಗಿ ನಿಯಮಗಳ ಸಡಿಲಿಕೆ ವಿಚಾರದಲ್ಲಿ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದೂ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next