Advertisement

ಚೀನಾ ನೆರೆ ಸಿಂಗಾಪುರದಲ್ಲಿ ಕೊರೊನಾ ಕರಿನೆರಳಿನಲ್ಲೇ ಯಶಸ್ವಿ ಏರ್‌ಶೋ

09:29 PM Mar 11, 2020 | Lakshmi GovindaRaj |

ಮೈಸೂರು: ಮಹಾಮಾರಿ ಕೊರೊನಾ ವೈರಸ್‌ ತನ್ನ ಉಗ್ರ ಪ್ರತಾಪ ಪ್ರದರ್ಶಿಸುತ್ತಿರುವ ಚೀನಾದಿಂದ ಸಾವಿರಾರು ಕಿಲೋ ಮೀಟರ್‌ ದೂರದಲ್ಲಿರುವ ಕರ್ನಾಟಕದ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲೂ ಜನ ಸಮೂಹ ಸನ್ನಿಗೆ ಒಳಗಾದವರಂತೆ ಕೊರೊನಾ ಭೀತಿಯಿಂದ ಮಾಸ್ಕ್ ಧರಿಸಿ, ಕೈಗಳ ಸ್ವತ್ಛತೆಗೆ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಲು ಮುಗಿಬಿದ್ದಿರುವಾಗ ಚೀನಾಕ್ಕೆ ಗಡಿ ಹಂಚಿಕೊಂಡಿರುವ ಸಣ್ಣ ರಾಷ್ಟ್ರ ಸಿಂಗಾಪುರ ಕೊರೊನಾ ಕರಿನೆರಳಿನ ನಡುವೆಯೂ ಸಿಂಗಾಪುರ ವೈಮಾನಿಕ ಪ್ರದರ್ಶನ (ಏರ್‌ಶೋ-2020)ಯಶಸ್ವಿಯಾಗಿ ಆಯೋಜಿಸಿದ್ದು ಅಚ್ಚರಿ ಹುಟ್ಟಿಸಿದೆ.

Advertisement

ಕೊರೊನಾ ಭೀತಿ ಎಷ್ಟರಮಟ್ಟಿಗೆ ಆವರಿಸಿದೆಯೆಂದರೆ ಕರ್ನಾಟಕದಲ್ಲೇ ವಿಧಾನಮಂಡಲ ಅಧಿವೇಶನದಲ್ಲಿ ಭಾಗಿಯಾಗಿರುವ ಶಾಸಕರುಗಳಿಗೆ ಹ್ಯಾಂಡ್‌ ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹೊರತುಪಡಿಸಿ ಉಳಿದೆಲ್ಲಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಮಾರ್ಪಾಡು ಮಾಡಿ, ಮಾರ್ಚ್‌ ಮೂರನೇ ವಾರದೊಳಗೆ ಪರೀಕ್ಷೆಗಳನ್ನು ಮುಗಿಸಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನೇ ಹೊರಡಿಸಿದೆ. ಹೆಚ್ಚು ಜನ ಪಾಲ್ಗೊಳ್ಳುವ ಸಾರ್ವಜನಿಕ ಸಭೆ-ಸಮಾರಂಭಗಳನ್ನೇ ಮುಂದೂಡಲಾಗುತ್ತಿದೆ. ಇಲ್ಲವೇ ರದ್ದುಪಡಿಸಲಾಗುತ್ತಿದೆ.

ಆದರೆ, ಕೊರೊನಾ ವೈರಸ್‌ ಹರಡುವಿಕೆ ವ್ಯಾಪಕವಾಗಿದ್ದ ಆರಂಭದ ದಿನಗಳಾದ ಫೆಬ್ರವರಿ ಎರಡನೇ ವಾರದಲ್ಲಿ ಸಿಂಗಾಪುರ ರಾಷ್ಟ್ರ ದೊಡ್ಡಮಟ್ಟದ ವೈಮಾನಿಕ ಪ್ರದರ್ಶವನ್ನು ಯಶಸ್ವಿಯಾಗಿ ಸಂಘಟಿಸಿ ಬೆರಗು ಮೂಡಿಸಿತು ಎಂದು ಸಿಂಗಾಪುರ ಏರ್‌ಶೋ ಜತೆಗೆ ಚೀನಾದ ಗಡಿಗೆ ಹೊಂದಿಕೊಂಡಂತಿರುವ ವಿಯೆಟ್ನಾಂ, ಲಾವೋಸ್‌, ಥೈಲ್ಯಾಂಡ್‌, ಕಾಂಬೋಡಿಯಾಗಳಿಗೆ ಪ್ರವಾಸ ಕೈಗೊಂಡು ಬಂದಿರುವ ರಕ್ಷಣಾ ಇಲಾಖೆಯಡಿ ಬರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೈಸೂರಿನ ಜಯಪ್ರಕಾಶ್‌ ರಾವ್‌ ಕೆ. ಅವರು ಸಿಂಗಾಪುರದ ಸಾಹಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಕಳೆದ ಫೆಬ್ರವರಿ 11ರಿಂದ 16ರವರೆಗೆ ಸಿಂಗಾಪುರ ರಾಷ್ಟ್ರ ಬೃಹತ್‌ ದ್ವೆ„ವಾರ್ಷಿಕ ಏರ್‌ಶೋ-2020 ಆಯೋಜಿಸಿದಾಗ, ಕೊರೊನಾ ಭೀತಿಯ ನಡುವೆ ಇಷ್ಟೊಂದು ಬೃಹತ್‌ಮಟ್ಟದ ವೈಮಾನಿಕ ಪ್ರದರ್ಶನ ಯಶಸ್ವಿಯಾಗಲಿದೆಯೇ ಎಂಬ ಶಂಕೆ ಎಲ್ಲರಲ್ಲೂ ಇತ್ತು. ಆಗ ತಾನೇ ಹೊಸ ವರ್ಷಾಚರಣೆಯ ಸಂಭ್ರಮ ಮುಗಿಸಿ ಚೀನಿಯರು, ಸಿಂಗಾಪುರಕ್ಕೆ ಬರುತ್ತಿದ್ದರು. ಅದೇ ವೇಳೆಯಲ್ಲಿ ಕೊರೊನಾ ಭಯಾನಕತೆಯೂ ತೀವ್ರವಾಗಿ ಹರಡಿತ್ತು. ಹೀಗಾಗಿ ಸಿಂಗಾಪುರ ಸರ್ಕಾರ ಕಠಿಣ ನಿಯಮಗಳನ್ನು ಅನುಸರಿಸಿ, ಸಾಮಾನ್ಯವಾಗಿ ಮೂರ್‍ನಾಲ್ಕು ದಿನಗಳಲ್ಲಿ ನೀಡುವ ಪ್ರವಾಸಿ ವೀಸಾ ನೀಡಲು ಬರೋಬ್ಬರಿ ಒಂದು ತಿಂಗಳು ಕಾಲಾವಕಾಶ ತೆಗೆದುಕೊಂಡಿತು.

ಪ್ರವಾಸಿಗರ ಹಳೇಯ ಪಾಸ್‌ಪೋರ್ಟ್‌ಗಳನ್ನೂ ತರಿಸಿಕೊಂಡು, ಈ ಹಿಂದೆ ಚೀನಾಕ್ಕೆ ಹೋಗಿಬಂದಿದ್ದಾರಾ ಎಂಬುದನ್ನು ಪರಿಶೀಲಿಸಿದ ನಂತರವೇ ವೀಸಾ ನೀಡಲಾಗುತ್ತಿತ್ತು. ಸಿಂಗಾಪುರಕ್ಕೆ ಹೋಗಿ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ದೇಹದ ಉಷ್ಣತೆ ತಪಾಸಣೆ ಮಾಡಿದ್ದಲ್ಲದೆ, ಬಸ್‌, ಮೆಟ್ರೋ ಹತ್ತಿ-ಇಳಿಯುವಾಗ, ಹೋಟೆಲ್‌ ಒಳಗೆ ಹೋಗುವಾಗ-ಹೊರ ಬರುವಾಗ ಹೀಗೆ ಪ್ರತಿಯೊಂದು ಹಂತದಲ್ಲೂ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತಿತ್ತು ಎಂದು ಹೇಳುತ್ತಾರೆ ಜಯಪ್ರಕಾಶ್‌ ರಾವ್‌. ಕೊರೊನಾ ಭೀತಿಯ ನಡುವೆಯೂ ಏರ್‌ಶೋಗೆ ನಿತ್ಯ ಅಂದಾಜು 30 ಸಾವಿರದಷ್ಟು ಏರ್‌ಕ್ರಾಫ್ಟ್ ವ್ಯಾಪಾರಿ ವೀಕ್ಷಕರು ಹಾಗೂ 20 ಸಾವಿರದಷ್ಟು ಸಾರ್ವಜನಿಕ ವೀಕ್ಷಕರು ಬಂದು ಹೋಗುತ್ತಿದ್ದರು.

Advertisement

ಚೀನಾ ಏರ್‌ಕ್ರಾಫ್ಟ್ ಹೊರತುಪಡಿಸಿ, ಅಮೆರಿಕ, ಯೂರೋಪ್‌ನಂತಹ ದೊಡ್ಡ ರಾಷ್ಟ್ರಗಳ ಏರ್‌ಕ್ರಾಫ್ಟ್ಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಅದೇ ಸಮಯದಲ್ಲಿ ಲಕ್ನೋದಲ್ಲಿ ವೈಮಾನಿಕ ಪ್ರದರ್ಶನ ಇದ್ದುದರಿಂದ ಭಾರತದ ಇಂಡಿಯನ್‌ ಏರ್‌ಫೋರ್ಸ್‌, ಎಚ್‌ಎಎಲ್‌ ಮಳಿಗೆಗಳು ಇರಲಿಲ್ಲ. ಆದರೆ, ನಮ್ಮ ಬ್ರಹ್ಮೋಸ್‌ ಮಳಿಗೆ ಇತ್ತು. ಶೇ.90ರಷ್ಟು ಕಂಪನಿಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರದರ್ಶನ ಯಶಸ್ವಿಯಾಯಿತು. ಆದರೆ, ನಿರೀಕ್ಷಿತಮಟ್ಟದಲ್ಲಿ ವ್ಯಾಪಾರ-ವ್ಯವಹಾರ ಆಗಿಲ್ಲ ಎಂದು ವರದಿಗಳು ಹೇಳುತ್ತವೆ.

ಸಿಂಗಾಪುರದಲ್ಲಿ ಚೀನಾದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೊರೊನಾ ಸೋಂಕು ತಗುಲಿದೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಉದಾಹರಣೆಗಳಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಆಟದ ಮೈದಾನ, ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಆದರೆ, ಕೊರೊನಾ ಭಯದ ವಾತಾವರಣ ಕಂಡುಬರಲಿಲ್ಲ. ಫೆಬ್ರವರಿ ಅಂತ್ಯದ ವೇಳೆಗೆ ಜನರು ಮಾಸ್ಕ್ ಧರಿಸಿ ಓಡಾಡುವುದು ಕಂಡುಬಂತು.

ಸಿಂಗಾಪುರದ ಬೃಹತ್‌ ಮಾಲ್‌ಗ‌ಳಲ್ಲಿ ಒಂದಾದ ಮೊಹಮ್ಮದ್‌ ಮುಸ್ತಾಫಾ ಸೆಂಟರ್‌ನಲ್ಲಿ ಒಂದೇ ಒಂದು ಬಾಟಲಿ ಹ್ಯಾಂಡ್‌ ಸ್ಯಾನಿಟೈಸರ್‌ ದೊರೆಯುತ್ತಿರಲಿಲ್ಲ. ಜನವರಿ ತಿಂಗಳಲ್ಲೇ ಅಲ್ಲಿನ ಅಂಗಡಿಗಳಲ್ಲಿ ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳ ದಾಸ್ತಾನುಗಳನ್ನು ಖಾಲಿ ಮಾಡಿಕೊಳ್ಳಲಾಗಿತ್ತು. ಅಲ್ಲಿನ ಜನ ರಾತ್ರಿ ಜೀವನವನ್ನೂ ತ್ಯಜಿಸಿದ್ದರು. ಭೌಗೋಳಿಕವಾಗಿ ಬೆಂಗಳೂರಿನಷ್ಟು ದೊಡ್ಡದಲ್ಲದ ಸಣ್ಣ ರಾಷ್ಟ್ರವೊಂದು ಕೊರೊನಾ ಭೀತಿಯ ನಡುವೆಯೂ ಯಶಸ್ವಿ ವೈಮಾನಿಕ ಪ್ರದರ್ಶನ ಆಯೋಜಿಸಿತ್ತು ಎಂದು ಅವರು ಸಿಂಗಾಪುರ ಪ್ರವಾಸದ ಅನುಭವವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next