ಸುಳ್ಯ: ಕರಾವಳಿಗೆ ಸಂಚರಿಸಲಿರುವ ಬಿಜೆಪಿ ನವಕರ್ನಾಟಕ ಪರಿವರ್ತನ ಯಾತ್ರೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ಸುಳ್ಯಮಂಡಲ ಬಿಜೆಪಿಯಿಂದ ಬೆಂಗಳೂರಿಗೆ ಬೈಕ್ ರ‍್ಯಾಲಿ ತೆರಳಿದೆ.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸಕ ಎಸ್. ಅಂಗಾರ ತೆಂಗಿನ ಕಾಯಿ ಒಡೆಯುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚರಿಸಲಿರುವ ಯಾತ್ರೆಗೆ ಪೂರ್ವಭಾವಿಯಾಗಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಸುಳ್ಯದಿಂದ ಹೊರಡುವ ಬೈಕ್ ರ‍್ಯಾಲಿ ಗುರುವಾರ ಸಂಜೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ಪರಿವರ್ತನ ರ‍್ಯಾಲಿ ಸಂದರ್ಭ ಜತೆಯಾಗಲಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ ಎಂದರು.
ಜಿ.ಪಂ. ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್. ಮನ್ಮಥ, ಮಾಜಿ ಜಿ.ಪಂ. ಸದಸ್ಯೆ ಭಾಗೀರಥಿ ಮುರುಳ್ಯ, ತಾ.ಪಂ. ಅಧ್ಯಕ್ಷ ಚನಿಯಕಲ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಎಪಿಎಂಸಿ ಸದಸ್ಯ ಸಂತೋಷ್ ಜಾಕೆ, ತಾ. ಬಿಜೆಪಿ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ, ಯುವಮೋರ್ಚಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಕಾರ್ಯದರ್ಶಿಗಳಾದ ಪ್ರದೀಪ್ ಬೊಳ್ಳೂರು, ಮಾಧವ ಚಾಂತಾಳ, ಮುಖಂಡರಾದ ಕೃಷ್ಣಪ್ರಸಾದ್ ಮಡ್ತಿಲ, ಶೀನಪ್ಪ ಬಯಂಬು, ಕುಶಾಲಪ್ಪ ಪೆರುವಾಜೆ, ದುರ್ಗೇಶ್, ಕೃಷ್ಣರಾಜ್ ಇದ್ದರು.
ಶಾಸಕರು ಸಹಸವಾರಿ
ರ‍್ಯಾಲಿಯ ಮುಂಚೂಣಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅವರ ದ್ವಿಚಕ್ರ ವಾಹನ ಹೊರಟಿತು.
ಅಧ್ಯಕ್ಷರೊಂದಿಗೆ ಹೆಲ್ಮೆಟ್ ಧರಿಸಿದ ಶಾಸಕ ಅಂಗಾರ ಅವರು ಸಹಸವಾರರಾಗಿ ತೆರಳಿದರು. ಅಧ್ಯಕ್ಷರ ಬೈಕ್‌ನ ಹಿಂದೆ
ಸುಮಾರು 100ರಷ್ಟು ದ್ವಿಚಕ್ರ ವಾಹನಗಳು ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಿ, ಬಳಿಕ ಗುಂಡ್ಯಮಾರ್ಗವಾಗಿ ಬೆಂಗಳೂರಿಗೆ ಸಾಗಿತು.