ಲಾಕ್‌ಡೌನ್ ಎಲ್ಲರಿಗೂ ಸರಿಯಾದ ಪಾಠ ಕಲಿಸಿದೆ. ಅಷ್ಟೇ ಅಲ್ಲ, ಮಾನವೀಯ ಮೌಲ್ಯದ ಅರ್ಥವನ್ನೂ ಕಲಿಸಿದೆ. ಈ ಸಮಯದಲ್ಲಿ ಮನರಂಜನೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಅದರಲ್ಲೂ ಡಿಜಿಟಲ್ ಫ್ಲಾಟ್‌ಫಾರಂಗೆ ತುಸು ಬೇಡಿಕೆ ಹೆಚ್ಚು. ಡಿಜಿಟಲ್ ವೇದಿಕೆಯಲ್ಲಿ ಈಗ ಹಲವು ಸಿನಿಮಾಗಳು, ಮನರಂಜಿಸುವ ಕಾರ್ಯಕ್ರಮಗಳದ್ದೇ ಕಾರುಬಾರು. ಲಾಕ್‌ಡೌನ್ ಸಮಯವನ್ನು ಚೆನ್ನಾಗಿ ಅರ್ಥಮಾಡಿಕೊಂಡರುವ ಡಿಜಿಟಲ್ ವೇದಿಕೆ, ಹಲವು ಕಾರ್ಯಕ್ರಮಗಳ ಮೂಲಕ ನೋಡುಗರನ್ನು ಆಕರ್ಷಿಸುತ್ತಿದೆ. ಆ ನಿಟ್ಟಿನಲ್ಲಿ ಈಗ ” ಸಕ್ಸಸ್ ಮಂತ್ರ’ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಇಂಥದ್ದೊಂದು ಕಾರ್ಯಕ್ರಮದ ಮೂಲಕ ಮನರಂಜಿಸುವ ಕೆಲಸಕ್ಕೆ ಕೈ ಹಾಕಿರೋದು ನಿರ್ದೇಶಕ ಸುಧೀರ್ ಅತ್ತಾವರ್. ಸದ್ಯಕ್ಕೆ ಈಗ ಯುಟ್ಯೂಬ್ ಚಾನೆಲ್‌ನಲ್ಲಿ ” ಸಕ್ಸಸ್ ಮಂತ್ರ’ ಹೆಸರಿನ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ಬಾಲಿವುಡ್‌ನ ಖ್ಯಾತ ನಟ,ನಟಿಯರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಗಾಯಕರು ಹೀಗೆ ಅನೇಕ ಸೆಲಿಬ್ರಿಟಿಗಳು ಜೀವನದ ತಮ್ಮ ಸಾಧನೆಯ ದಾರಿಯನ್ನೊಮ್ಮೆ ಅವಲೋಕಿಸಿ ಮಾತನಾಡಿರುವ ಅಪರೂಪದ ದೃಶ್ಯಗಳನ್ನು ಕಾಣಬಹುದಾಗಿದೆ.
ಸೆಲಿಬ್ರಿಟಿಗಳು ತಮ್ಮ ನೋವು-ನಲಿವುಗಳ ಅಂತರಂಗವನ್ನು ತೆರೆದಿಟ್ಟುಕೊಳ್ಳುವ ಈ ಅಪರೂಪದ ಕಾರ್ಯಕ್ರಮವನ್ನು ನಿರ್ದೇಶಕ ಸುಧೀರ್ ಅತ್ತಾವರ್ ವಿನ್ಯಾಸಗೊಳಿಸಿದ್ದು, ಈ ” ಸಕ್ಸಸ್ ಮಂತ್ರ’ ಕಾರ್ಯಕ್ರಮದಡಿ ಕನ್ನಡ ಹಾಗು ಹಿಂದಿ ಚಿತ್ರಗಳ ನಿರ್ದೇಶಕ ಎಂ.ಎಸ್.ಸತ್ಯು, ಬಾಲಿವುಡ್‌ನ ಮಾಧುರಿ ದೀಕ್ಷಿತ್, ಧಮೇಂದ್ರ, ಬಪ್ಪಿ ಲಹರಿ, ಅಂಕಿತ್ ತಿವಾರಿ, ಮಿಲ್ಕಾಸಿಂಗ್, ಗೋವಿಂದ, ಅನುರಾಧ ಪೋಡ್ವಾಲ್, ಫಲಕ್ ಮುಚ್ಚಲ್, ಅನೂಪ್ ಜಲೋಟ, ಕೈಲಾಶ್ ಖೇರ್, ಆಶಾ ಬೋಸ್ಲೆ, ಉಷಾ ಮಂಗೇಷ್ಕರ್, ಎಂ.ಎಸ್.ಸತ್ಯು, ಜಾವೆದ್ ಆಲಿ, ಕವಿತಾ ಸೇಠ್, ಉತ್ತಮ್ ಸಿಂಗ್, ಹೇಮ್‌ಲತಾ, ಮಧುಶ್ರೀ ಸೇರಿದಂತೆ ಹಲವು ನಟ,ನಟಿಯರು, ನಿರ್ದೇಶಕರು ತಮ್ಮ ಬದುಕಿನ ಸಕ್ಸಸ್ ಜರ್ನಿ ಕುರಿತು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದ ಅನೇಕ ಸೆಲಿಬ್ರಿಟಿಗಳ ಸಂದರ್ಶನ ಕೂಡ ಈ ಸಕ್ಸಸ್ ಮಂತ್ರದಲ್ಲಿ ನೋಡಬಹುದಾಗಿದೆ.
ಲಾಕ್‌ಡೌನ್ ಸಮಯದಲ್ಲಿ ರೇಡಿಯೋ ಹಾಡು, ಟಿವಿ ಕಾರ್ಯಕ್ರಮ ನೋಡಿದವರಿಗೆ ಈ ಡಿಜಿಟಲ್ ಫ್ಲಾಟ್‌ಫಾರಂ ಹೊಸ ಕಾರ್ಯಕ್ರಮ ಮೂಲಕ ಹೊಸ ವಿಷಯ ಪ್ರಸ್ತುತಪಡಿಸುವಲ್ಲಿ ಮುಂದಾಗಿದೆ. ಅಂದಹಾಗೆ, ಸಕ್ಸಸ್ ಫಿಲಂಸ್ ಮೂಲಕ ಈ ” ಸಕ್ಸಸ್ ಮಂತ್ರ’ ಕಾರ್ಯಕ್ರಮ ಶುರುವಾಗಿದ್ದು, ಯುಟ್ಯೂಬ್‌ನಲ್ಲಿ ಪ್ರತಿ ಸೋಮವಾರ ಸೆಲಿಬ್ರಿಟಿಗಳ ಕಾರ್ಯಕ್ರಮ ನೋಡಬಹುದಾಗಿದೆ.