ಮೈಸೂರು: ಬುದ್ಧನ ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ರೂಡಿಸಿಕೊಳ್ಳಬೇಕಿದೆ ಎಂದು ಶಾರದ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪಾರ್ಥ ಸಾರಥಿ ಹೇಳಿದರು.
ನಗರದ ಶಾರದಾ ವಿಲಾಸ ಶಿಕ್ಷಣ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಬುದ್ಧ-ಬಸವ-ಅಂಬೇಂಡ್ಕರ್‌ರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಡುವ ಕಾಯಕದಲ್ಲಿ ಕೈಲಾಸವನ್ನು ಕಾಣಿ ಎಂಬ ಬಸವೇಶ್ವರರ ಆಶಯದಂತೆ ಮಾಡುವ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಆಗ ಮಾತ್ರವೇ ಯಶಸ್ಸು ಕಾಣಲು ಸಾಧ್ಯ ಎಂದರು.
ರಾಮಾಯಣ, ಮಹಾಭಾರತದಂತಹ ಮಹಾನ್ ಗ್ರಂಥಗಳಲ್ಲಿ ಬುದ್ಧನ ಧಾರ್ಮಿಕ ಶ್ರದ್ಧೆಯನ್ನು ಅನುಸರಿಸಿರುವುದರಿಂದ ಭಕ್ತಿ ಪೂರ್ವಕ ಗ್ರಂಥಗಳೆ ನಿಸಿಕೊಂಡಿವೆ. ಬುದ್ಧನ ತತ್ವ-ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡು ನೀವು ಹೋಗುತ್ತಿರುವ ದಾರಿಯಲ್ಲಿ ಯಶಸ್ಸು ಕಾಣಿರಿ ಎಂದು ಕಿವಿಮಾತು ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಡಾ. ಶಿವಕುಮಾರ್, ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಪಾತ್ರ ಕುರಿತು ಮಾತನಾಡಿದರು. ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ನೀಡಿದ ಸಂವಿಧಾನ ದಲಿತ ವರ್ಗ ಮಾತ್ರವಲ್ಲದೆ ಇತರರಿಗೂ ಸಹ ಸಹಕಾರಿಯಾಗಿದೆ. ಮಹಿಳಾ ಶಿಕ್ಷಣ, ಸರ್ವರಿಗೂ ಸಮಪಾಲು ಸಿಗುವ ನಿಟ್ಟಿನಲ್ಲಿ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಸ್ಮರಿಸಬೇಕಿದೆ ಎಂದರು.
ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎನ್. ವಿಶ್ವನಾಥ್ ಮಾತನಾಡಿ, ಬುದ್ಧ-ಬಸವ-ಅಂಬೇಡ್ಕರ್ ಈ ಮೂವರು ಮಹಾಪುರುಷರ ಸ್ಮರಣೆ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶಾರದ ವಿಲಾಸ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಎಚ್.ಕೆ. ಶ್ರೀನಾಥ್, ಪ್ರಾಂಶುಪಾಲ ಡಾ.ಪಿ.ಎಸ್ ಸುರೇಶ್ ಹಾಜರಿದ್ದರು. ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಆತ್ಮಕಥೆಯ ವೀಸಾ ನಿರೀಕ್ಷೆಯಲ್ಲಿದ್ದಾಗ ಕಥಾ ಪ್ರಸಂಗವನ್ನು ಸಾಂಸ್ಕೃತಿಕ ಸಮಿತಿ ವಿದ್ಯಾರ್ಥಿಗಳು ನಾಟಕ ರೂಪದಲ್ಲಿ ಪ್ರದರ್ಶಿಸಿದರು.