ಸುಳ್ಯ: ಸೂಕ್ಷ್ಮ ಪರಿಸರ ವಲಯವನ್ನಾಗಿ ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿ ವಿಸ್ತರಿಸಿ ಸುಳ್ಯ ತಾಲೂಕಿನ ಕಲ್ಮಕಾರು, ಬಾಳುಗೋಡು ಗ್ರಾಮ ಸೇರ್ಪಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಲಯ ವ್ಯಾಪ್ತಿಯನ್ನು 100 ಮೀಟರ್‌ಗೆ ಇಳಿಕೆ ಮಾಡುವಂತೆ ಪ್ರಯತ್ನಿಸುವುದಾಗಿ ಅರಣ್ಯ ಸಚಿವ ರಮಾನಾಥ ರೈ ಭರವಸೆ ನೀಡಿದ್ದಾರೆ.
ಸಚಿವರು ಶುಕ್ರವಾರ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಉದಯ್ ಕೊಪ್ಪಡ್ಕ ಮತ್ತು ಕಾಂಗ್ರೆಸ್ ಮುಖಂಡರನ್ನೊಳಗೊಂಡ ತಂಡ ಪಕ್ಷಾತೀತವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಸಚಿವರು, ಹಿಂದೆ ರಾಜ್ಯ ಸರಕಾರ ಯೋಜನೆಯನ್ನು ಶೂನ್ಯ ವಲಯವನ್ನಾಗಿಸಲು ಕೋರಿ ವರದಿ ಕಳುಹಿಸಿತ್ತು. ಆದರೆ ಕೇಂದ್ರ ಸರಕಾರ 1 ಕಿ.ಮೀ. ವ್ಯಾಪ್ತಿಗೊಳಪಡಿಸಿ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಧಿತರ ಪರವಾಗಿ ಮತ್ತೆ ವರದಿ ಕಳಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಸುಬ್ರಹ್ಮಣ್ಯ- ಮಡಿಕೇರಿ ಸಂಪರ್ಕಿ ಸುವ ಕಡಮಕಲ್- ಗಾಳಿಬೀಡು ರಸ್ತೆಯ ಸಂಚಾರ ವಿಚಾರದಲ್ಲೂ ಅರಣ್ಯ ಇಲಾಖೆ ಆಕ್ಷೇಪ ಕುರಿತಂತೆ ಮನವಿ ಸಲ್ಲಿಸಿದರೆ, ಮುಂದಿನ ಕ್ರಮ ಜರಗಿಸುವುದಾಗಿ ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ಆಹ್ವಾನ: ನ. 4ರಂದು ಹರಿಹರ ಪಳ್ಳತ್ತಡ್ಕದಲ್ಲಿ ಕರೆದಿರುವ ಸಮಾಲೋಚನ ಸಭೆಗೆ ಸಚಿವರನ್ನು ಉದಯ್ ಕೊಪ್ಪಡ್ಕ ಆಹ್ವಾನಿಸಿದಾಗ ಪ್ರತಿಕ್ರಿಯಿಸಿದ ಸಚಿವರು ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮ ಇರುವುದರಿಂದ ಪಾಲ್ಗೊಳ್ಳಲು ಸಾಧ್ಯವಿಲ್ಲ. ನ. 6ರಂದು ವನ್ಯಜೀವಿ ಇಲಾಖೆ ಮತ್ತು ವಿವಿಧ ಇಲಾಖಾಧಿಕಾರಿಗಳನ್ನೊಳ ಗೊಂಡ ಸಭೆ ಆಯೋಜಿಸುವಂತೆ ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ತಾ.ಪಂ. ವಿಪಕ್ಷ ನಾಯಕ ಅಶೋಕ್ ನೆಕ್ರಾಜೆ, ಹರಿಹರ ಗ್ರಾ.ಪಂ. ಅಧ್ಯಕ್ಷ ಹಿಮ್ಮತ್ ಕೆ.ಸಿ., ಮುಖಂಡರಾದ ಪಿ.ಸಿ. ಜಯರಾಮ, ವಸಂತ ಕಿರಿಬಾಗ, ಸತೀಶ್ ಕೊಮ್ಮೆಮನೆ, ಡಿ.ಎಸ್. ಹರ್ಷಕುಮಾರ್, ಸೋಮಶೇಖರ ಕಟ್ಟೆಮನೆ, ನರೇಂದ್ರ ಬಿಳಿಮಲೆ, ಜಯರಾಮ ಬಾಳುಗೋಡು, ಜಯಂತ ಬಾಳುಗೋಡು ಮತ್ತಿತರಿದ್ದರು.