Advertisement

ಮಂಗಳೂರಿನಲ್ಲಿ ಮೊದಲ ಜಿಐ ಸಬ್‌ಸ್ಟೇಷನ್‌

09:29 AM Dec 13, 2018 | |

ಮಂಗಳೂರು: ನಗರದ ನೆಹರೂ ಮೈದಾನ ಬಳಿಯ ಮೆಸ್ಕಾಂ 33 ಕೆ.ವಿ. ವಿದ್ಯುತ್‌ ಸಬ್‌ ಸ್ಟೇಷನ್‌ ಕೆಲವೇ ದಿನಗಳಲ್ಲಿ ಕರಾವಳಿಯ ಮೊದಲ 110 ಕೆ.ವಿ. ಜಿಐಎಸ್‌ (ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಷನ್‌) ಆಗಿ ಮೇಲ್ದರ್ಜೆಗೇರಲಿದೆ. ಸದ್ಯ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಾತ್ರ ಈ ಅತ್ಯಾಧುನಿಕ ತಂತ್ರಜ್ಞಾನವಿದೆ.
ಪ್ರಸ್ತುತ ಈ ಸಬ್‌ಸ್ಟೇಷನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಮತ್ತು ಆಸುಪಾಸಿಗೆ ವಿದ್ಯುತ್‌ ಸರಬ ರಾಜಾಗುತ್ತಿದೆ. ಸಹಜವಾಗಿ ಒತ್ತಡ ಅಧಿಕ ಇರುವುದರಿಂದ ಮೇಲ್ದರ್ಜೆಗೇರಿಸಬೇಕಾದ ಅಗತ್ಯವನ್ನು ಮನಗಂಡ ಮೆಸ್ಕಾಂ ಜಿಐಎಸ್‌ ತಂತ್ರಜ್ಞಾನ ಅಳವಡಿಸುವುದಕ್ಕಾಗಿ ಕೆಲವು ತಿಂಗಳ ಹಿಂದೆ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಕೆಪಿಟಿಸಿಎಲ್‌ ಸಮ್ಮತಿಸಿದ್ದು, ತಾನೇ ಜಿಐಎಸ್‌ ಅಳವಡಿಕೆಯನ್ನು ಕೈಗೆತ್ತಿ ಕೊಳ್ಳಲು ನಿರ್ಧರಿಸಿದೆ.

Advertisement

ಸರ್ವೆ ಪೂರ್ಣ
ಹಾಲಿ ಸಬ್‌ ಸ್ಟೇಷನ್‌ ಪಕ್ಕದಲ್ಲಿ ಸರ್ವೆ ನಡೆಸಲಾಗಿದೆ. ಮೈಸೂರಿನ ಜಿಐ ಸಬ್‌ಸ್ಟೇಶನ್‌ಗೆ ಮಂಗಳೂರಿನ ಕೆಪಿಟಿಸಿಎಲ್‌ ತಂಡ ಇತ್ತೀಚೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಯೋಜನಾ ವರದಿಯನ್ನು ಅಂತಿಮ ಗೊಳಿಸಲಾಗುತ್ತಿದೆ. ಅಂತಿಮಗೊಂಡ 15 ದಿನಗಳೊಳಗೆ ಅದನ್ನು ಕೆಪಿಟಿಸಿಎಲ್‌ ಕೇಂದ್ರ ಕಚೇರಿಗೆ ಸಲ್ಲಿಸಲಾಗುತ್ತದೆ. ಬಳಿಕ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಿ ಸರಕಾರದ ಒಪ್ಪಿಗೆ ಪಡೆದು ಅನುಷ್ಠಾನವಾಗಲಿದೆ. 

ಏನಿದು ಜಿಐಎಸ್‌?
ಗ್ರಿಡ್‌ಗಳಿಂದ ಸರಬರಾಜಾದ ವಿದ್ಯುತ್ತನ್ನು ಸ್ವೀಕರಿಸಿ ಹಂಚಿಕೊಡುವ ಅಧಿಕ ಸಾಮರ್ಥ್ಯದ ಸಬ್‌ಸ್ಟೇಶನ್‌ಗಳಲ್ಲಿ ಗ್ಯಾಸ್‌ ಇನ್ಸುಲೇಶನ್‌ ವಿಧಾನವನ್ನು ಮೊದಲಿಗೆ ಜಪಾನಿನಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಹೈ ವೋಲ್ಟೆàಜ್‌ ವಿದ್ಯುತ್‌ ಪ್ರಸರಣದ ಪ್ರಮುಖ ಅಂಗಗಳನ್ನು ಸಲ್ಫರ್ ಹೆಕ್ಸಾಫ್ಲೋರೈಡ್‌ ಅನಿಲವಿರುವ ಮುಚ್ಚಿದ ಕವಚಗಳಲ್ಲಿ ಹುದುಗಿಸಿಡುವ ತಂತ್ರಜ್ಞಾನ ಇದು. ಸಾಂಪ್ರದಾಯಿಕ ಏರ್‌ ಇನ್ಸುಲೇಟೆಡ್‌ ವಿಧಾನದ 110 ಕೆ.ವಿ. ಸಾಮರ್ಥ್ಯದ ಸಬ್‌ ಸ್ಟೇಷನ್‌ಗೆ 100 ಚದರ ಮೀ. ಜಾಗದ ಅಗತ್ಯವಿದ್ದರೆ, ಜಿಐ ತಂತ್ರಜ್ಞಾನ ಅಳವಡಿಸಿದಾಗ ಕೇವಲ 30 ಚದರ ಮೀ. ಜಾಗ ಸಾಕಾಗುತ್ತದೆ. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ ನಿರ್ವಹಣೆ ಹಾಗೂ ಕಾರ್ಯಾಚರಣೆ ಸರಳ, ಮಿತವ್ಯಯಿ. ಹೀಗಾಗಿ ನಗರ ಪ್ರದೇಶಗಳಿಗೆ ಅತ್ಯಂತ ಸೂಕ್ತ. ಇದಲ್ಲದೆ, ಕರಾವಳಿಯ ಉಪ್ಪಿನಂಶವಿರುವ ಗಾಳಿ, ಮಳೆನೀರಿನಂತಹ ಸವಕಳಿ ಅಂಶಗಳಿಂದ ಇದು ಹೆಚ್ಚು ರಕ್ಷಣೆ ಒದಗಿಸುತ್ತದೆ. 

ಟ್ರಾನ್ಸ್‌ಫಾರ್ಮರ್‌ ಸಾಮರ್ಥ್ಯ ಇಮ್ಮಡಿ
ಈಗಿನ ಸಬ್‌ಸ್ಟೇಷನ್‌ನಲ್ಲಿ 5 ಎಂ.ವಿ.ಎ. ಸಾಮರ್ಥ್ಯದ 2 ಟ್ರಾನ್ಸ್‌ ಫಾರ್ಮರ್‌ ಸದ್ಯ ಬಳಕೆಯಲ್ಲಿದ್ದರೆ, ಮುಂದೆ 20 ಎಂ.ವಿ.ಎ. ಸಾಮರ್ಥ್ಯದ 3 ಟ್ರಾನ್ಸ್‌ಫಾರ್ಮರ್‌ಗಳು ಬರಲಿವೆ. ಇದರಿಂದ ಒತ್ತಡ ಕಡಿಮೆಯಾಗಿ ಹಂಚಿಕೆ ಸುಲಭವಾಗಲಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಮಂಜಪ್ಪ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

11 ಕಿ.ಮೀ. ಉದ್ದದ ಭೂಗತ ಕೇಬಲ್‌
ಕಾವೂರಿನಲ್ಲಿರುವ 220 ಕೆ.ವಿ. ಶರಾವತಿ ವಿದ್ಯುತ್‌ ಸ್ವೀಕರಣ ಕೇಂದ್ರದಿಂದ ಜಿಲ್ಲೆಯ ವಿವಿಧೆಡೆಯ ಸಬ್‌ ಸ್ಟೇಷನ್‌ಗಳಂತೆ ನೆಹರೂ ಮೈದಾನದ ಪಕ್ಕದ ಸಬ್‌ಸ್ಟೇಷನ್‌ಗೂ ವಿದ್ಯುತ್‌ ಸರಬರಾಜಾಗುತ್ತದೆ. ಇಲ್ಲಿ ನೂತನ ಜಿಐ ಸಬ್‌ಸ್ಟೇಷನ್‌ ಸ್ಥಾಪನೆ ವೇಳೆ ಈಗಿರುವ ಲೈನ್‌ ಬದಲಿಸಿ ಭೂಗತ ಕೇಬಲ್‌ ಅಳವಡಿಸಲಾಗುತ್ತದೆ. ಕಾವೂರಿನಿಂದ ಪದವಿನಂಗಡಿ, ನಂತೂರು, ಮಲ್ಲಿಕಟ್ಟೆ, ಜ್ಯೋತಿ, ಹಂಪನಕಟ್ಟೆ ಮೂಲಕ ಸ್ಟೇಟ್‌ಬ್ಯಾಂಕ್‌ ಬಸ್‌ನಿಲ್ದಾಣ ಭಾಗದಿಂದ ಸುಮಾರು 10.5 ಕಿ.ಮೀ. ಉದ್ದಕ್ಕೆ ಭೂಗತ ಕೇಬಲ್‌ ಅಳವಡಿಸಲು ಕೆಪಿಟಿಸಿಎಲ್‌ ಸರ್ವೆ ನಡೆಸಿದೆ. ಸಬ್‌ ಸ್ಟೇಷನ್‌ ಸ್ಥಾಪನೆಗೆ ಜರ್ಮನಿಯಿಂದ ಉಪಕರಣಗಳು ಆಮದಾಗಲಿವೆ ಎಂದು ಕೆಪಿಟಿಸಿಎಲ್‌ ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

15 ದಿನದೊಳಗೆ ವರದಿ ಸಿದ್ಧ
ವಿದ್ಯುತ್‌ ಒತ್ತಡವನ್ನು ಪರಿಗಣಿಸಿ, ಜಿಲ್ಲೆಯ ಮೊದಲ ಜಿಐ ಸಬ್‌ ಸ್ಟೇಷನ್‌ ಅನ್ನು ನೆಹರೂ ಮೈದಾನದ ಪಕ್ಕದ ಈಗಿನ ಸಬ್‌ಸ್ಟೇಷನ್‌ ಜಾಗದಲ್ಲಿ ನಿರ್ಮಿಸಲು ಸರ್ವೆ ಪೂರ್ಣಗೊಳಿಸಿ, ಯೋಜನಾ ವರದಿ ಸಿದ್ಧಗೊಳಿಸಲಾಗುತ್ತಿದೆ. 15 ದಿನದೊಳಗೆ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುವುದು. ಬಳಿಕ ಡಿಪಿಆರ್‌ ಸಿದ್ಧಗೊಳಿಸಿ ಒಪ್ಪಿಗೆ ಪಡೆದು ಟೆಂಡರ್‌ ಕರೆಯಲಾಗುವುದು. 
ರವಿಕಾಂತ್‌ ಕಾಮತ್‌, ಅಧೀಕ್ಷಕ ಎಂಜಿನಿಯರ್‌ (ಕಾಮಗಾರಿ ಹಾಗೂ ನಿರ್ವಹಣೆ), ಕೆಪಿಟಿಸಿಎಲ್‌. 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next