Advertisement

KPTCL ಪಿಂಚಣಿ ಹೊರೆ ಗ್ರಾಹಕರಿಗೆ ಹೊರಿಸಲು ವಿರೋಧ

11:36 PM Feb 24, 2024 | Team Udayavani |

ಬೆಂಗಳೂರು: ವಿದ್ಯುತ್‌ ದರ ಪರಿಷ್ಕರಣೆಗೆ ಸಂಬಂಧಿಸಿ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಡೆಸಿದ ಸಾರ್ವಜನಿಕ ವಿಚಾರಣೆಯಲ್ಲೂ ಗ್ರಾಹಕರು ಕೆಪಿಟಿಸಿಎಲ್‌ ನೌಕರರ ಪಿಂಚಣಿ ಪ್ರತಿಧ್ವನಿಸಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಈ ಮೊದಲೇ ಕೆಇಆರ್‌ಸಿಯು, ನೌಕರರ ಪಿಂಚಣಿ ಗ್ರಾಹಕರ ಮೇಲೆ ವರ್ಗಾಯಿಸಲು ಬರುವುದಿಲ್ಲ ಎಂದು ಹೇಳಿತ್ತು. ಆದರೂ ತೆರೆಮರೆಯಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(ಕೆಪಿಟಿಸಿಎಲ್‌)ದಿಂದ ಪ್ರಯತ್ನಗಳು ಮುಂದುವರಿದಿದ್ದು, ಈಚೆಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಪ್ರಸ್ತಾವಗೊಂಡಿದೆ.

ಆದರೆ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸುತಾರಾಂ ಒಪ್ಪಿಲ್ಲ ಎನ್ನಲಾಗಿದೆ.ಫೆ.12ರಿಂದ ಆರಂಭಗೊಂಡ ಸಾರ್ವಜನಿಕ ವಿಚಾರಣೆ, ಫೆ.22ರ ವರೆಗೆ ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ ನಗರಗಳಲ್ಲಿ ನಡೆದಿದೆ. ಎಲ್ಲ ಕಡೆ ವಿರೋಧ ವ್ಯಕ್ತವಾಗಿದೆ. ಗ್ರಾಹಕರ ಅಭಿಪ್ರಾಯಕ್ಕೆ ಆಯೋಗವೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಈ ಮಧ್ಯೆಯೂ ಕೆಪಿಟಿಸಿಎಲ್‌ ತನ್ನ ಪ್ರಯತ್ನ ಕೈಬಿಟ್ಟಿಲ್ಲ. ರಾಜ್ಯ ಸರಕಾರ ಒಟ್ಟು 3,357.22 ಕೋಟಿ ರೂ.ಗಳನ್ನು ಗ್ರಾಹಕರ ಮೇಲೆ ವರ್ಗಾಯಿಸಲು ತೀರ್ಮಾನಿಸಿದೆ. ಇದನ್ನು 3 ವರ್ಷಗಳು ಕಂತುಗಳಾಗಿ ಪಡೆಯಲು ಹೇಳಿದೆ. ಅದರಂತೆ ಪ್ರತಿ ವರ್ಷ 1,117.765 ಕೋಟಿ ರೂ.ಗಳನ್ನು ಗ್ರಾಹಕರಿಂದ ಹೆಚ್ಚುವರಿಯಾಗಿ ಪಡೆಯಬೇಕು. ಕೆಪಿಟಿಸಿಎಲ್‌ ಇತರ ವೆಚ್ಚ ಸೇರಿ 1,616.34 ಕೋಟಿ ರೂ.ಗಳನ್ನು ಕೇಳಿದೆ.

ಸರಕಾರ ಮಾತ್ರ ಈಗಿನ ಆರ್ಥಿಕ ಸ್ಥಿತಿಯಲ್ಲಿ ತನ್ನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗಿದೆ. 5 ಗ್ಯಾರಂಟಿಗಳಿಗೆ ಹಣ ಒದಗಿಸುವುದೇ ಕಷ್ಟವಾಗಿದೆ. ಹೀಗಾಗಿ ತನ್ನ ಹಿಂದಿನ ವೆಚ್ಚದ ಬಾಬ¤ನ್ನು ಕಡಿಮೆ ಮಾಡಿಕೊಳ್ಳಲು ಹೊರಟಿದೆ.

Advertisement

ಆದರೆ, ಈ ವಿಷಯಕ್ಕೆ ಸಂಬಂಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫೆRಸಿಸಿಐ) ಹೈಕೋಟ್‌ನಿಂದ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಗೊಳಿಸುವಂತೆ ಸರಕಾರ ಹಾಗೂ ಕೆಪಿಟಸಿಎಲ್‌ ಕಸರತ್ತು ನಡೆಸಿದೆ. ಯಾಕೆಂದರೆ, ಇದು ತೆರವಾಗದೆ ಕೆಇಆರ್‌ಸಿ ಒಪ್ಪುವುದಿಲ್ಲ. ಇನ್ನು ಗ್ರಾಹಕರು ಪ್ರತಿ ವರ್ಷ ಸಿಬಂದಿ ವೆಚ್ಚವನ್ನು ಭರಿಸುತ್ತಿದ್ದಾರೆ.

ಸರಕಾರ-ಆಯೋಗದ ಹಗ್ಗ ಜಗ್ಗಾಟ
ರಾಜ್ಯ ಸರಕಾರ 2022ರಿಂದ ಎಲ್ಲವನ್ನೂ ಗ್ರಾಹಕರಿಂದಲೇ ಸಂಗ್ರಹಿಸಲು ಆದೇಶಿಸಿದೆ. ಇದಕ್ಕೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಒಪ್ಪಿಲ್ಲ. ಸರಕಾರ ತನ್ನದೇ ಕಾಯ್ದೆಯ ನಿಯಮಗಳಂತೆ ಕೆಪಿಟಿಸಿಎಲ್‌ ನೌಕರರ ಪಿಂಚಿಣಿ ಸವಲತ್ತು ಭರಿಸಲು ಒಪ್ಪಿಕೊಂಡಿತ್ತು. ಈಗ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಬರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆದರೂ ಸರಕಾರ- ಕೆಇಆರ್‌ಸಿ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ.

ಪಿಂಚಣಿ ಭರಿಸಲು ಸಾಧ್ಯವಿಲ್ಲ
1999ರಲ್ಲಿ ಕೆಇಬಿ ಇದ್ದದ್ದು ಕೆಪಿಟಿಸಿಎಲ್‌ ಆಯಿತು. 2000ರಲ್ಲಿ ಸರಕಾರ – ಕೆಪಿಟಿಸಿಎಲ್‌- ನೌಕರರ ಸಂಘದ ನಡುವೆ ಒಪ್ಪಂದವಾಯಿತು. ಸರಕಾರ ನೌಕರರ ಪಿಂಚಣಿ ಹಣವನ್ನು ತಾನೇ ಪಾವತಿಸಲು ಒಪ್ಪಿತು. ನೌಕರರು ಆಗ ಎಸ್ಕಾಂಗಳ ರಚನೆಯನ್ನು ವಿರೋಧಿಸಿದ್ದರು. ಆಗ ಸರಕಾರ ಅವರ ಎಲ್ಲ ಸವಲತ್ತುಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಅದರಂತೆ ಎಸ್ಕಾಂಗಳ ಎಲ್ಲ ಎಂಜಿನಿಯರ್‌ಗಳು ಕೆಪಿಟಿಸಿಎಲ್‌ ನೌಕರರಾಗಿಯೇ ಉಳಿದರು. ಈಗ ಸರಕಾರ ನೌಕರರ ಪಿಂಚಣಿ ಹಣವನ್ನು ಭರಿಸಲು ಸಾಧ್ಯವಿಲ್ಲ ಎನ್ನುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next