Advertisement

MESCOM ವ್ಯಾಪ್ತಿಯಲ್ಲೂ ಶೀಘ್ರವೇ ಬರಲಿದೆ ಪ್ರಿಪೇಯ್ಡ ಮೀಟರ್‌, ಸ್ಮಾರ್ಟ್‌ ಮೀಟರ್‌

12:34 AM Feb 28, 2024 | Team Udayavani |

ಮಂಗಳೂರು: ವಿದ್ಯುತ್‌ ಉಳಿತಾಯ, ಗ್ರಾಹಕರಿಗೆ ಹೆಚ್ಚಿನ ಸುವಿಧತೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ  (ಕೆಇಆರ್‌ಸಿ) ನಿರ್ದೇಶನದಂತೆ ಮೆಸ್ಕಾಂ ಕೂಡ ಪ್ರಿಪೇಯ್ಡ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲು ಮುಂದಾಗುತ್ತಿದೆ.

Advertisement

ಈಗಾಗಲೇ ಪ್ರಿಪೇಯ್ಡ ಮೀಟರ್‌ಗಳು ಬೆಂಗಳೂರು ಹಾಗೂ ಮೈಸೂರಿನ ಕೆಲವು ಭಾಗಗಳಲ್ಲಿವೆ. ಅದರಲ್ಲೂ ಸ್ಮಾರ್ಟ್‌ ಹಾಗೂ ಸಿಂಪಲ್‌ ಎನ್ನುವ ಎರಡು ರೀತಿಯ ಮೀಟರ್‌ಗಳಿವೆ.

ಸ್ಮಾರ್ಟ್‌ ಮೀಟರ್‌ಗಳು ಪ್ರೀಪೇಯ್ಡ ಮೊಬೈಲ್‌ ರೀತಿಯಲ್ಲೇ ಕಾರ್ಯವೆಸಗುತ್ತವೆ. ಅಗತ್ಯವಿರುವ ವಿದ್ಯುತ್‌ಗೆ ಶುಲ್ಕವನ್ನು ಪೂರ್ವ ಪಾವತಿ ಮಾಡುವುದು. ಹೆಚ್ಚುವರಿ ವಿದ್ಯುತ್‌ ಖರ್ಚಾಗದಂತೆ ಇದರಲ್ಲಿ ಮಿತವ್ಯಯ ಸಾಧಿಸಬಹುದು. ಇದಕ್ಕೆ ಪ್ರತ್ಯೇಕ ಆ್ಯಪ್‌ ಕೂಡ ಇದ್ದು, ಎಷ್ಟು ವಿದ್ಯುತ್‌ ಖರ್ಚಾಗಿದೆ ಎನ್ನುವುದನ್ನು ವೀಕ್ಷಿಸಬಹುದಾಗಿದೆ.

ಮೆಸ್ಕಾಂಗೂ ಲಾಭ
ಈಗಾಗಲೇ ಕೋಟ್ಯಂತರ ರೂ.ಗಳ ದೊಡ್ಡ ಮೊತ್ತದ ಬಿಲ್‌ ಅನ್ನು ಕೆಲವು ಸಂಸ್ಥೆಗಳು ಬಾಕಿ ಉಳಿಸಿಕೊಂಡಿವೆ. ಈ ರೀತಿಯ ಪ್ರಿಪೇಯ್ಡ ಮೀಟರ್‌ ಅಳವಡಿಕೆಯಿಂದ ಗ್ರಾಹಕರು ಮುಂಚಿತವಾಗಿ ಹಣ ಪಾವತಿಸುವುದರಿಂದ ಮೆಸ್ಕಾಂಗೂ ನಷ್ಟದ ಭೀತಿಯಿಲ್ಲ.

ಏನಿದು ಸ್ಮಾರ್ಟ್‌ ಮೀಟರ್‌?
ಪ್ರಸ್ತುತ ಕೆಇಆರ್‌ಸಿ ಶಿಫಾರಸು ಮಾಡಿರುವುದು ಸ್ಮಾರ್ಟ್‌ ಮೀಟರ್‌ಗಳನ್ನು. ಇದರಲ್ಲಿ ಪ್ರೀಪೇಯ್ಡ, ಪೋಸ್ಟ್‌ ಪೇಯ್ಡ ಎರಡನ್ನೂ ಕಾನ್ಫಿಗರ್‌ ಮಾಡುವುದಕ್ಕೆ ಅವಕಾಶವಿದೆ. ನಗರಗಳಲ್ಲಿ ಈಗಿರುವುದು ಸ್ಟಾಟಿಕ್‌ ಮೀಟರ್‌. ಇವುಗಳಲ್ಲಿ ಯಾವುದೇ ಚಲಿಸುವ ಭಾಗಗಳಿಲ್ಲ. ಇವುಗಳು ಪೂರ್ಣ ಎಲೆಕ್ಟ್ರಾನಿಕ್‌. ಇಲ್ಲಿ ಏಕಮುಖ ಸಂವಹನ ಮಾತ್ರ ಎಂದರೆ ಮೀಟರ್‌ಗೆ ಸೂಚನೆಗಳನ್ನು ಮಾತ್ರ ಕೊಡಬಹುದು ಹೊರತು ಮೀಟರ್‌ನಿಂದ ಸಂಸ್ಥೆಗೆ ಮಾಹಿತಿ ಬರುವುದಿಲ್ಲ. ಆದರೆ ಸ್ಮಾರ್ಟ್‌ ಮೀಟರ್‌ ಹಾಗಲ್ಲ, ಅದರಲ್ಲಿ ಮೀಟರ್‌ ಆಫ್‌ ಆದಾಗ, ಯಾವುದೇ ಸಮಸ್ಯೆ ಉಂಟಾದಾಗ ವಿದ್ಯುತ್‌ ಪೂರೈಕೆ ಕಂಪೆನಿಗೆ ಹಿಮ್ಮಾಹಿತಿ ಹೋಗುತ್ತದೆ.

Advertisement

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಸಾಧನವಾಗಿ ಇದು ಕೆಲಸ ಮಾಡುತ್ತದೆ. ಆ್ಯಪ್‌ ಬಳಸಿಕೊಂಡು ಪ್ರತಿನಿತ್ಯ ಗ್ರಾಹಕರು ಎಷ್ಟು ವಿದ್ಯುತ್‌ ಬಳಕೆಯಾಗಿದೆ ಎನ್ನುವುದನ್ನು ನೋಡಬಹುದು. ಖಾತೆಯಲ್ಲಿ ಎಷ್ಟು ಮೊತ್ತವಿದೆ ಎನ್ನುವುದನ್ನು ನೋಡಿಕೊಂಡು ವಿದ್ಯುತ್‌ ಬಳಕೆ ಸಾಧ್ಯವಾಗಲಿದೆ.

ಸದ್ಯದ ಲೆಕ್ಕಾಚಾರದಂತೆ ಪ್ರಿಪೇಯ್ಡ ಮೀಟರ್‌ಗಳಿಗೆ 6,000 ರೂ. ನಿಗದಿ ಪಡಿಸಲಾಗಿದೆ. ಇದರಲ್ಲಿ ಇದನ್ನು ನಿರ್ವಹಣೆ ಮಾಡುವ ತಂತ್ರಾಂಶ ಕೂಡ ಸೇರಿದೆ. ಸಾಫ್ಟ್‌ ವೇರ್‌ ಹಾಗೂ ಮೀಟರ್‌ ಎರಡೂ ಪೂರಕವಾಗಿರಬೇಕಾಗಿದ್ದು, ಒಂದೇ ಕಂಪೆನಿಯಿಂದಲೇ ಪಡೆದುಕೊಳ್ಳುವುದು ಸೂಕ್ತ ಎನ್ನುತ್ತಾರೆ ಮೆಸ್ಕಾಂನ ತಜ್ಞರು.

ಇದುವರೆಗೆ ರಾಜ್ಯದಲ್ಲೆಲ್ಲೂ ಸ್ಮಾರ್ಟ್‌ ಮೀಟರ್‌ ಬಳಕೆಯಾಗಿಲ್ಲ, ಪ್ರೀಪೇಯ್ಡ ಮೀಟರ್‌ ಅಷ್ಟೇ ಸದ್ಯ ಬಳಕೆಯಲ್ಲಿದೆ. ಇದು ಸ್ಮಾರ್ಟ್‌ ಅಲ್ಲ, 2-ವೇ ಕಮ್ಯುನಿಕೇಶನ್‌ ಇರುವುದಿಲ್ಲ. ಬದಲಿಗೆ ಇದಕ್ಕೊಂದು ಪಂಚ್‌ ಕಾರ್ಡ್‌ ಇರುತ್ತದೆ. ಅದಕ್ಕೊಂದು ಕೋಡ್‌ ಜನರೇಟ್‌ ಮಾಡಿ ಮೀಟರ್‌ಗೆ ಫೀಡ್‌ ಮಾಡಿದರಾಯಿತು. ಗ್ರಾಹಕರ ವಿದ್ಯುತ್‌ ಸಂಪರ್ಕದ ದರಗಳು ಕೂಡ ಅದಕ್ಕೆ ಫೀಡ್‌ ಆಗುತ್ತವೆ. ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ರಿಚಾರ್ಜ್‌ ಮಾಡಿಕೊಂಡರಾಯಿತು.

2026ರೊಳಗೆ ಎಲ್ಲ ಮನೆಗೂ ಸ್ಮಾರ್ಟ್‌ ಮೀಟರ್‌?
ಸದ್ಯ ಸ್ಮಾರ್ಟ್‌ ಮೀಟರ್‌ ಅಳವಡಿಸುವುದಕ್ಕೆ ಕೆಇಆರ್‌ಸಿ ಸೂಚಿಸಿದ್ದು, ಇದನ್ನು ತಾತ್ಕಾಲಿಕ ಸಂಪರ್ಕದ ಬಳಕೆದಾರರಿಗೆ ಅಳವಡಿಸುವ ಸಾಧ್ಯತೆ ಜಾಸ್ತಿ. ಮುಂದೆ ಇದನ್ನು ಹಂತ ಹಂತವಾಗಿ ಎಲ್ಲರಿಗೂ ಅಳವಡಿಸುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ಪ್ರಕಾರ ಮಾರ್ಚ್‌ 2026ರೊಳಗೆ ಎಲ್ಲ ಮನೆಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕಿದೆ.

ಪ್ರಿಪೇಯ್ಡ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕು ಎಂದು ಕೆಇಆರ್‌ಸಿ ಗೈಡ್‌ಲೈನ್ಸ್‌ ಕೊಟ್ಟಿದೆ. ಎಪ್ರಿಲ್‌ನಿಂದ ಮಾಡಬೇಕಿದೆ. ಬೆಸ್ಕಾಂನಲ್ಲಿ ಇದೆ. ಇಲ್ಲೂ ಅಳವಡಿಸಲು ಟೆಂಡರ್‌ ಕರೆಯುತ್ತೇವೆ.
– ಪದ್ಮಾವತಿ,
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next