Advertisement

ಯುನಿಟ್‌ಗೆ ಸರಾಸರಿ 59 ಪೈಸೆ ಏರಿಕೆ: ಮೆಸ್ಕಾಂ ಪ್ರಸ್ತಾವ: ಬಳಕೆದಾರರಿಂದ ಪ್ರಬಲ ವಿರೋಧ

01:23 AM Feb 13, 2024 | Team Udayavani |

ಮಂಗಳೂರು: ನಿರಂತರ ವಿದ್ಯುತ್‌ ದರ ಏರಿಸುತ್ತಾ ಹೋದರೆ ಗ್ರಾಹಕರು ತಡೆದುಕೊಳ್ಳುವುದಾದರೂ ಹೇಗೆ ಎಂಬ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷರ ಆಕ್ಷೇಪದ ನಡುವೆ ಯುನಿಟ್‌ಗೆ ಸರಾಸರಿ 59 ಪೈಸೆ ಹೆಚ್ಚಿಸಬೇಕೆಂಬ ಪ್ರಸ್ತಾವವನ್ನು ಮೆಸ್ಕಾಂ ಮುಂದಿಟ್ಟಿದೆ.

Advertisement

ಬಿಜೈಯಲ್ಲಿರುವ ಮೆಸ್ಕಾಂ ಸಭಾಭವನದಲ್ಲಿ ಸೋಮವಾರ ಕೆಇಆರ್‌ಸಿ ವತಿಯಿಂದ ನಡೆದ ವಿದ್ಯುತ್‌ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ವಿಚಾರಣೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ದರ ಹೆಚ್ಚಳ ಪ್ರಸ್ತಾವ ಮುಂದಿಟ್ಟರು.

ಈಗ ಇರುವ ದರವೇ ದುಬಾರಿ ಯಾಗಿರುವ ಕಾರಣ ಯಾವುದೇ ಕಾರಣಕ್ಕೂ ದರ ಏರಿಕೆಗೆ ಅವಕಾಶ ನೀಡ ಬಾರದು ಎಂಬ ಪ್ರಬಲ ಒತ್ತಾಯವನ್ನು ಕೈಗಾರಿಕೋದ್ಯಮಿಗಳು, ಕೃಷಿಕರು ಸೇರಿದಂತೆ ಸಾರ್ವಜನಿಕರು ಆಯೋಗದ ಮುಂದಿರಿಸಿದರು.

ಆಯೋಗದ ಅಧ್ಯಕ್ಷ ಪಿ. ರವಿಕುಮಾರ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡು, ಖರ್ಚುಗಳನ್ನು ಜಾಸ್ತಿ ಮಾಡುತ್ತಾ ಹೋದರೆ ಸೇವೆಯನ್ನು ಉತ್ತಮ ಪಡಿಸದೆ ಮಂಗಳೂರು-ಉಡುಪಿ ಭಾಗದ ಗ್ರಾಹಕರು ಮಾತನಾಡದೆ ಬಿಲ್‌ ಪಾವತಿಸುತ್ತಾರೆ ಎಂದು ದರ ಜಾಸ್ತಿ ಮಾಡುತ್ತಾ ಹೋಗುವುದೇ ಎಂದು ಪ್ರಶ್ನಿಸಿದರು. ಖರ್ಚು ಹೆಚ್ಚಿರುವುದು ಹಾಗೂ ಕಂದಾಯ ಕೊರತೆಯನ್ನು ಸರಿದೂಗಿಸಲು ದರ ಏರಿಕೆ ಮಾಡಬೇಕಾಗುತ್ತದೆ ಎಂದು ಮೆಸ್ಕಾಂ ಎಂಡಿ ಸಮರ್ಥಿಸಿಕೊಂಡರು. ಆಯೋಗದ ಸದಸ್ಯ ಎಂ.ಡಿ. ರವಿ ಉಪಸ್ಥಿತರಿದ್ದರು.

ಸ್ಲ್ಯಾಬ್ ವ್ಯವಸ್ಥೆ ರದ್ದು ಸರಿಯಲ್ಲ
ಕಳೆದ ಬಾರಿ ಆಯೋಗದವರು 100 ಯುನಿಟ್‌ ಮೇಲ್ಪಟ್ಟು ಏಕಾಏಕಿ ಶೇ. 40ರಷ್ಟು ದರ ಏರಿಕೆ ಮಾಡಿ ಕೆಲವು ಸ್ಲಾéಬ್‌ಗಳನ್ನು ತೆಗೆದುಹಾಕಿದ್ದು ಸರಿಯಲ್ಲ. ಇದರಿಂದಾಗಿ 101 ಯುನಿಟ್‌ ಬಿಲ್‌ ಆದವರೂ 5.15 ರೂ. ಬದಲಿಗೆ 7 ರೂ. ಪಾವತಿಸಬೇಕಾಗುತ್ತದೆ ಎಂದು ಭಾರತೀಯ ಕಿಸಾನ್‌ ಸಂಘ ಉಡುಪಿಯ ಸತ್ಯನಾರಾಯಣ ಉಡುಪ ಅವರು ಗಮನ ಸೆಳೆದರು.

Advertisement

ಹಿಂದಿನಂತೆ ಸ್ಲ್ಯಾಬ್ ಆಧಾರದಲ್ಲಿ ವಿದ್ಯುತ್‌ ದರವನ್ನು ಮುಂದುವರಿಸಬೇಕು. ಇಲ್ಲವಾದಲ್ಲಿ ಗ್ಯಾರಂಟಿ ಯೋಜನೆ ಇಲ್ಲದ ಗೃಹ ಬಳಕೆಯ ವಿದ್ಯುತ್‌ ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತಿದೆ ಎಂದು ಸಾರ್ವಜನಿಕರ ಪರವಾಗಿ ಹನುಮಂತ ಕಾಮತ್‌ ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳ ಕುರಿತು ಮೆಸ್ಕಾಂ ನೀಡುವ ಅಂಕಿ-ಅಂಶಗಳು ಸರಿಯಿಲ್ಲ, ಯಾಕೆಂದರೆ ಇನ್ನೂ ಸರಿಯಾಗಿ ಐಪಿ ಸೆಟ್‌ಗಳ ಮೀಟರೀಕರಣ ಆಗಿಲ್ಲ. ಶೇ. 100 ಮೀಟರೀಕರಣವಾಗದೆ ಇದ್ದರೆ ಸರಕಾರ ಕೃಷಿಕರು ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತಿದೆ ಎಂದು ಬೊಟ್ಟು ಮಾಡುತ್ತದೆ, ಹಾಗಾಗಿ ಆದ್ಯತೆ ಮೇರೆಗೆ ಇದನ್ನು ಮಾಡಬೇಕು. ಮೈಸೂರು ಪೇಪರ್‌ ಮಿಲ್‌ 220 ಕೋಟಿ ರೂ. ಬಾಕಿ ಇರುವುದಾಗಿ ಹೇಳಿದ್ದಾರೆ. ಇಂತಹ ಬಾಕಿಯನ್ನು ವಸೂಲು ಮಾಡುವಲ್ಲಿ ಕ್ರಮ ಆಗಬೇಕು. ಈಗಾಗಲೇ ಉತ್ತಮ ಆದಾಯ ಪಡೆಯುವ ಮೆಸ್ಕಾಂ ದರ ಏರಿಕೆ ಮಾಡಿ ಹಣ ಸಂಗ್ರಹಿಸುವ ಅಗತ್ಯವಿಲ್ಲ ಎಂದರು.

ಈಗಾಗಲೇ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್‌ ದರ ಹೆಚ್ಚಳದಿಂದ ಮತ್ತಷ್ಟು ತೊಂದರೆ ಆಗಲಿದೆ ಎಂದು ಕೆಸಿಸಿಐ ಅಧ್ಯಕ್ಷ ಅನಂತೇಶ್‌ ಪ್ರಭು ಹಾಗೂ ಇತರ ಪ್ರತಿನಿಧಿಗಳು ತಿಳಿಸಿದರು.

ಆಯೋಗ ಜನಪರವಾಗಲಿ
ದರ ಏರಿಕೆ ಪ್ರಸ್ತಾವದ ಬಗ್ಗೆ ಗ್ರಾಹಕರಿಂದ ಆಕ್ಷೇಪಣೆ ಸ್ವೀಕರಿಸಲಾಗುತ್ತದೆಯೇ ಹೊರತು ಗ್ರಾಹಕರ ಪರವಾಗಿ ಆಯೋಗದಿಂದ ತೀರ್ಪು ಬಂದಿಲ್ಲ, ಆಯೋಗ ಜನಪರವಾಗಬೇಕು ಎಂದು ಜಿ.ಕೆ. ಭಟ್‌ ಹೇಳಿದರು. ಕೇಂದ್ರ ಸರಕಾರವು ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದರೆ ರಾಜ್ಯ ಸರಕಾರ ನಿರುತ್ಸಾಹ ತೋರುತ್ತಿದೆ. ಹಿಂದೆ 9 ರೂ.ಗೆ ಸೋಲಾರ್‌ ವಿದ್ಯುತ್‌ ಖರೀದಿಯಾಗುತ್ತಿದ್ದರೆ ಈಗ ಅದನ್ನು 4 ರೂ.ಗೆ ಇಳಿಸಲಾಗಿದೆ. ಕನಿಷ್ಠ 10 ರೂ. ಒದಗಿಸಬೇಕು ಎಂದು ಆಗ್ರಹಿಸಿದರು.

ಮೀನು ಗಾರಿಕೆಯನ್ನೇ ಅವಲಂಬಿಸಿ ರುವ ಮಂಜುಗಡ್ಡೆ ಸ್ಥಾವರಗಳ ವತಿಯಿಂದ ಪ್ರತೀ ಬಾರಿ ವಿದ್ಯುತ್‌ ದರ ಏರಿಕೆ ಮಾಡದಂತೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಆದರೆ ಅದನ್ನು ಆಯೋಗ ಅವಗಣಿಸುತ್ತಿರುವುದರಿಂದ ಕನಿಷ್ಠ 5 ಅಥವಾ 10 ಪೈಸೆ ಹೆಚ್ಚಳದಿಂದಲೂ ಮಂಜುಗಡ್ಡೆ ಸ್ಥಾವರಗಳಿಗೆ ಭಾರೀ ದೊಡ್ಡ ಹೊಡೆತ ಬೀಳುತ್ತದೆ. ಈಗಲಾದರೂ ನಮ್ಮ ಮನವಿಯನ್ನು ಪರಿಣಿಸಬೇಕು ಎಂದು ಕರ್ನಾಟಕ ಮಂಜುಗಡ್ಡೆ ಸ್ಥಾವರಗಳ ಪರ
ವಾಗಿ ರಾಜೇಂದ್ರ ಸುವರ್ಣ ಆಗ್ರಹಿಸಿದರು.

ಮೆಸ್ಕಾಂ ಸಾರ್ವಜನಿಕ ವಿಚಾರಣೆಯ ಬಳಿಕ ಕೆಇಆರ್‌ಸಿಯಿಂದ ಎಂಎಸ್‌ಇಝ ಡ್‌ನ‌ ಅಹವಾಲನ್ನು ಸ್ವೀಕರಿಸಲಾಯಿತು.

ದರ ಏರಿಕೆಗೆ ಮೆಸ್ಕಾಂ ಬೇಡಿಕೆ
2024-25ನೇ ಸಾಲಿನಲ್ಲಿ 5281.94 ಕೋಟಿ ರೂ. ಆದಾಯದ ಬೇಡಿಕೆ ಹಾಗೂ 4,929.98 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದ್ದು, 351. 96 ಕೋಟಿ ರೂ. ಆದಾಯ ಕೊರತೆ ಉಂಟಾಗಲಿದೆ. ಪ್ರತೀ ಯುನಿಟ್‌ಗೆ ಸರಾಸರಿ 8.91 ರೂ. ವಿದ್ಯುತ್‌ ಸರಬರಾಜು ವೆಚ್ಚವಾಗಲಿದ್ದು, ಹಾಲಿ ದರಗಳಲ್ಲಿ ಸರಾಸರಿ 8.32 ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಿಂದಾಗಿ 59 ಪೈಸೆ ಏರಿಕೆಯ ಅಗತ್ಯವಿದೆ ಎಂದು ಮೆಸ್ಕಾಂ ಎಂಡಿ ಪದ್ಮಾವತಿ ವಿವರ ನೀಡಿದರು.

ಎಲ್‌ಟಿ ಗೃಹಬಳಕೆ ವಿದ್ಯುತ್‌ ದರಗಳನ್ನು ಪ್ರತೀ ಯುನಿಟ್‌ಗೆ 4.75-7.75 ರೂ.ನಿಂದ 5.15-7.95 ರೂ., ವಾಣಿಜ್ಯ 8.50ರಿಂದ 8.80 ರೂ., ಕೈಗಾರಿಕೆ 6.10-7.10ರಿಂದ 6.30-7.30 ರೂ.ಗೆ ಏರಿಸಬೇಕು. ಎಚ್‌ಟಿ ದರಗಳು ಗೃಹಬಳಕೆ 7.25ರಿಂದ 7.30 ರೂ., ವಾಣಿಜ್ಯ 9.25ರಿಂದ 9.30 ರೂ., ಕೈಗಾರಿಕೆ 7.40ರಿಂದ 7.45 ರೂ.ಗೆ ಏರಿಸಬೇಕಾಗುತ್ತದೆ ಈ ಮೂಲಕ ಕೊರತೆಯಾಗಿರುವ 351 ಕೋಟಿ ರೂ. ಮೊತ್ತವನ್ನು ಸರಿದೂಗಿಸಬೇಕಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next