ಹೊಸದಿಲ್ಲಿ: ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಜನರ ಕೈಗೆಟುಕುವಂತೆ ಮಾಡುವಲ್ಲಿ ಮತ್ತೂಂದು ಹೆಜ್ಜೆಯಿಟ್ಟಿರುವ ಸರ್ಕಾರ, ಫೇಮ್‌ನ 2ನೇ ಆವೃತ್ತಿಯ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದೆ.
ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದಿಂದ ಅಧಿಸೂಚನೆಯೊಂದು ಹೊರ ಬಿದ್ದಿದ್ದು, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕೆ ಮೇಲೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು 5,000ರೂ.ಗಳಿಗೆ ಹೆಚ್ಚಿಸಲಾಗಿದೆ. ವಾಹನಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿಯ ಶಕ್ತಿಗೆ ಅನುಗುಣವಾಗಿ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ಅಂದರೆ, ವಾಹನಗಳಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಯ ಪ್ರತಿ ಕಿಲೋವ್ಯಾಟ್ ಪರ್ ಹವರ್ ಶಕ್ತಿಗೆ (k Wph) 20,000 ರೂ.ಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ:ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್; ಆಸ್ಪತ್ರೆಗೆ ದೌಡು
ಈ ಪರಿಷ್ಕರಣೆಗೂ ಮುನ್ನ ಪ್ರತಿ ಕಿಲೋವ್ಯಾಟ್ ಪರ್ ಹವರ್‌ಗೆ 10,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈಗ, ಅದನ್ನು15,000 ರೂ.ಗಳಿಗೆ ಏರಿಸಲಾಗಿದೆ. ಅಲ್ಲದೆ, ಇದರ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಬೇಕು, ಹೈಬ್ರಿಡ್ ಹಾಗೂ ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಬೆಲೆಗಳಲ್ಲಿ ಗಣನೀಯವಾಗಿ ಕಡಿತವಾಗಬೇಕು ಎಂಬ ಆಶಯ ಇಲಾಖೆಯದ್ದು.
ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿ 10,000 ರೂ. ಪ್ರೋತ್ಸಾಹ ಧನದ ಲಾಭ ಬಳಸಿಕೊಂಡು ವಾಹನಗಳ ಬೆಲೆ ಇಳಿಸಿತ್ತು. ಈಗ ಪರಿಷ್ಕೃತ ಫೇಮ್ 2 ಯೋಜನೆಯಡಿ ಇನ್ನಷ್ಟು ದರ ಇಳಿಸುವ ಸಾಧ್ಯತೆ ಇದೆ.