Advertisement

ಚಂದಾದಾರರ ಮಾತುಕತೆ

06:00 AM Nov 16, 2018 | |

“ಈಗಿನ ಚಿತ್ರಗಳಲ್ಲಿ ಫೈಟು, ಕೊಲೆ, ಲವ್ವು ಈ ವಿಷಯಗಳೇ ಜಾಸ್ತಿ ತುಂಬಿವೆ. ಫ್ಯಾಮಿಲಿ ಬಂದು ಸಿನಿಮಾ ನೋಡುವಂತೆಯೇ ಇಲ್ಲ. ಇಂತಹ ಚಿತ್ರಗಳಿಗೆ ಹೊರತಾಗಿ ನಮ್ಮ ಚಿತ್ರ ಮೂಡಿಬಂದಿದೆ. ಎಲ್ಲರೂ ಬಂದು ನೋಡುವ ಚಿತ್ರ ಇದಾಗಲಿದೆ..’

Advertisement

– ಹೀಗೆ ಹೇಳಿದ್ದು, ನಿರ್ಮಾಪಕ ಸನತ್‌ಕುಮಾರ್‌. ಅವರು ಹೇಳಿಕೊಂಡಿದ್ದು “ನೀವು ಕರೆ ಮಾಡಿದ ಚಂದಾದಾರರು’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ. ಹಾಗಾದರೆ, ನಿಮ್ಮ ಚಿತ್ರದಲ್ಲಿ ಏನೆಲ್ಲಾ ಇದೆ? ಈ ಪ್ರಶ್ನೆಗೆ ಇಲ್ಲೂ ಫೈಟು, ಲವ್ವು ಇತ್ಯಾದಿ ಇದೆ ಎಂಬ ಉತ್ತರ ನಾಯಕಿ ಶಿಲ್ಪಾ ಮಂಜುನಾಥ್‌ ಅವರಿಂದ ಬಂತು. ಅದಕ್ಕೂ ಮೊದಲು ನಿರ್ಮಾಪಕರು, “ಈಗಿನ ಚಿತ್ರಗಳಲ್ಲಿ ಬರೀ ಫೈಟು, ಕೊಲೆ, ಲವ್ವು ಇತ್ಯಾದಿ ಅಂಶಗಳೇ ಇರುತ್ತವೆ. ಕುಟುಂಬ ಸಮೇತ ಸಿನಿಮಾ ನೋಡಲು ಆಗುವುದಿಲ್ಲ. ನಮ್ಮ ಚಿತ್ರ ಅದಕ್ಕೆ ಹೊರತಾಗಿದೆ. ಇಲ್ಲಿ ಅದ್ಯಾವುದೂ ಇರುವುದಿಲ್ಲ’ ಎನ್ನುವ ಮೂಲಕ ಗೊಂದಲಕ್ಕೆ ಕಾರಣರಾದರು. ಪತ್ರಕರ್ತರ ಪ್ರಶ್ನೆಗಳಿಗೆ, “ನೀವು ಸಿನಿಮಾ ನೋಡಿ, ಇಲ್ಲಿ ಕೊಲೆ ಇದೆ ಅಂತ ಹೇಳಿದರೆ, ಸಸ್ಪೆನ್ಸ್‌ ಹೊರಟು ಹೋಗುತ್ತೆ, ಲವ್‌ ಇದೆ ಅಂದರೆ ಕಥೆಯ ಗುಟ್ಟು ಬಿಟ್ಟಂತಾಗುತ್ತೆ, ನಾನು ಬೇರೆ ಯಾವ ಚಿತ್ರಗಳ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ’ ಅಂತ ಸಬೂಬು ಕೊಡಲು ಮುಂದಾದರಾದರೂ, ಪತ್ರಕರ್ತರಿಂದ ತೂರಿಬಂದ ಪ್ರಶ್ನೆಗೆ ವೇದಿಕೆ ಮೇಲೆ ನಿರೂಪಣೆ ಮಾಡುತ್ತಿದ್ದ ಅವರ ಪುತ್ರ ಉತ್ತರಿಸಲು ಮುಂದಾದರು. ಅವರ ಮಾತು ಕೇಳದ ಪತ್ರಕರ್ತರು, ನಿರ್ದೇಶಕರಿಗೆ ಮೈಕ್‌ ಕೊಡಿ ಅವರೇ ಎಲ್ಲವನ್ನೂ ಹೇಳಲಿ’ ಅಂದಿದ್ದಕ್ಕೆ ಪುನಃ ನಿರ್ಮಾಪಕರು ಮಾತಿಗಿಳಿದರು. “ಇಲ್ಲಿ ನಿರ್ದೇಶಕ, ನಿರ್ಮಾಪಕರ ತಪ್ಪಿದೆ. ಕಥೆ ಕೇಳಿ ಚಿತ್ರೀಕರಣವೂ ಆಗಿ, ಆಮೇಲೆ ಬೇರೆಯವರ ಸಲಹೆ ಮೇರೆಗೆ ರೀ ಶೂಟ್‌ ಮಾಡಲಾಗಿದೆ. ಇಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕಿ, ಸಲಹುತ್ತಾರೆ ಆದರೆ, ಮಕ್ಕಳು ಅವರ ನಂಬಿಕೆ ಹಾಳುಗೆಡವುತ್ತಾರೆ. ಇದು ಕಮರ್ಷಿಯಲ್‌ ಚಿತ್ರ. ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ” ಎಂಬ ವಿವರ ಕೊಟ್ಟರು ನಿರ್ಮಾಪಕರು.

ನಿರ್ದೇಶಕ ಮೋನೀಶ್‌ ಅವರಿಗೆ ಇದು ಮೊದಲ ಚಿತ್ರ. ಹದಿನೈದು ದಿನಗಳ ಕಾಲ ಕೂರ್ಗ್‌ನಲ್ಲಿ ಚಿತ್ರೀಕರಣ ನಡೆಸಿ, ಆಮೇಲೆ ಅದನ್ನು ಎಡಿಟ್‌ ಮಾಡಿ, ನೋಡಿದಾಗ, ನಿರ್ದೇಶಕರಿಗೆ ತೃಪ್ತಿ ಆಗಲಿಲ್ಲವಂತೆ. ಕೊನೆಗೆ ರೀಶೂಟ್‌ ಮಾಡಿ ಚಿತ್ರ ಮಾಡಿದ್ದಾರೆ. “ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಹೊಂದಿರುವ ಚಿತ್ರ. ನವೆಂಬರ್‌ 23 ರಂದು ತೆರೆಗೆ ಬರುತ್ತಿದೆ. ಇಲ್ಲೊಂದು ಸಂದೇಶವಿದೆ. ಅದನ್ನು ಚಿತ್ರದಲ್ಲೇ ನೋಡಿ’ ಅಂದರು ಮೋನೀಶ್‌. 

ನಾಯಕಿ ಶಿಲ್ಪಾ ಮಂಜುನಾಥ್‌ ಇಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದಾರಂತೆ. ಇಲ್ಲಿ ಮನರಂಜನೆ ಜೊತೆಗೆ ಕುತೂಹಲ ಕೆರಳಿಸುವ ಅಂಶಗಳಿವೆ ಎಂಬುದು ಅವರ ಮಾತು. ಇನ್ನು, ಮೊದಲು ಈ ಚಿತ್ರಕ್ಕೆ ಬೇರೊಬ್ಬ ಸಂಗೀತ ನಿರ್ದೇಶಕರು ಹಿನ್ನೆಲೆ ಸಂಗೀತ ನೀಡಿದ್ದರಂತೆ. ಅವರ ಕೆಲಸ ಇಷ್ಟವಾಗದಿದ್ದರಿಂದ ನಿರ್ದೇಶಕರು, ಮ್ಯಾಥು ಮನು ಅವರಿಗೆ ಹಿನ್ನೆಲೆ ಸಂಗೀತದ ಜವಾಬ್ದಾರಿ ನೀಡಿದ್ದಾರಂತೆ. ಕೇಶವ ಚಂದ್ರ ಇಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದರೆ, ಶ್ರೀನಿವಾಸ ಛಾಯಾಗ್ರಹಣವಿದೆ. ದಿಲೀಪ್‌ರಾಜ್‌ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next