Advertisement

ಸುಬ್ರಹಣ್ಯ:ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ ಪುರಾತನ ಭೋಗಾಯನ ಕೆರೆ

09:53 AM Dec 20, 2018 | |

ಸುಬ್ರಹ್ಮಣ್ಯ : ಸುಮಾರು 400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬಳ್ಪದ ಭೋಗಾಯನಕೆರೆ ಈಗ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ. ರಾಜ್ಯ-ಕೇಂದ್ರ ಸರಕಾರದ ಆರ್ಥಿಕ ನೆರವು ಪಡೆದು ಸಣ್ಣ ನೀರಾವರಿ ಇಲಾಖೆ ಮೂಲಕ ಈ ಕೆರೆ ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದೆ. ಐತಿಹಾಸಿಕ ಭೋಗಾಯನಕೆರೆ ಪ್ರವಾಸಿ ತಾಣವಾಗುವ ನಿರೀಕ್ಷೆಯಲ್ಲಿದೆ.

Advertisement

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನ. 11ರಂದು ಜಿಲ್ಲಾಮಟ್ಟದಲ್ಲಿ ನಡೆದಿತ್ತು. ಸಭೆಯಲ್ಲಿ ಭೋಗಾಯನಕೆರೆ ಅಭಿವೃದ್ಧಿ ಕುರಿತು ಚರ್ಚೆ ನಡೆದಿತ್ತು. ಜಿಲ್ಲಾಧಿಕಾರಿ ಹಾಗೂ ಸಂಸದರ ಸೂಚನೆಯಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಭೂಮಿ ಏಜೆನ್ಸಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸರ್ವೇ ನಡೆಸಿದ್ದಾರೆ.

ಉದ್ಯಾನವನ ನಿರ್ಮಾಣ
ಕೆರೆ ಅಭಿವೃದ್ಧಿಗೊಳಿಸಿ ತೋಟಗಾರಿಕೆ ಇಲಾಖೆ ಇಲ್ಲಿ ಆಕರ್ಷಣೀಯ ಉದ್ಯಾನವನ ನಿರ್ಮಿಸಲಿದೆ. ಕೆರೆ ತಟದಲ್ಲಿ ಸುಸಜ್ಜಿತ ವೃಕ್ಷೋದ್ಯಾನ, ಆಯುರ್ವೇದ, ಸಸ್ಯರಾಶಿಗಳನ್ನು ಬೆಳೆಸುವುದು. ಕೆರೆಯ ಹೂಳು ತೆಗೆದು ಬಳಿಕ ಕೆರೆ ಸುತ್ತಲು ಮೆಟ್ಟಿಲು ಗಳನ್ನು ನಿರ್ಮಿಸಿ ಬೋಟ್‌, ಆಸನ ವ್ಯವಸ್ಥೆ, ಒಳಭಾಗದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾದ ಆಟಿಕೆಗಳ ಪಾರ್ಕ್‌ ಇಲ್ಲಿ ನಿರ್ಮಿಸಲಾಗುತ್ತದೆ.

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ನಡುವೆ ಇರುವ ಈ ಕೆರೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ 12 ಕಿ.ಮೀ. ದೂರದಲ್ಲಿದೆ. ಎರಡೂವರೆ ದಶಕದ ಹಿಂದೆ ಈ ಕೆರೆಯ ಒಂದು ಬದಿಗೆ ತಡೆಗೋಡೆ ಇತ್ತು. 8 ವರ್ಷಗಳ ಹಿಂದೆ ಒಂದು ಬಾರಿ ಈ ಕೆರೆಯ ಹೂಳು ತೆಗೆಯಲಾಗಿತ್ತು. ಆ ಬಳಿಕ ಹೂಳು ತೆಗೆದಿಲ್ಲ. ಹಾಗಾಗಿ ಈಗ ಹೂಳು ತುಂಬಿ ನೀರು ಬತ್ತಿದೆ.

ಪಾಂಡವರ ಕಾಲದ ಕೆರೆ
ತುಳುನಾಡಿನ ರಾಜ ಮನೆತನಗಳ ಗತವೈಭವದಲ್ಲಿ ಮೆರೆದ ಅಳುಪ, ಆಳರಸರು 1,200 ವರ್ಷಕ್ಕೂ ಹೆಚ್ಚು ಕಾಲ ಆಳಿದ ಬಳ್ಪ ಗ್ರಾಮದಲ್ಲಿದೆ ಈ ಕೆರೆ. ಪಾಂಡವರ ಕಾಲದಲ್ಲಿ ಈ ಕೆರೆ ಇತ್ತಂತೆ. ವಿಜಯನಗರ ರಾಜರಸುಗಳ ಪೈಕಿ ಭೋಜರಾಜ ಎನ್ನುವವರು ಈ ಕೆರೆ ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಕೆರೆ ದಂಡೆ ಮೇಲೆ ಸ್ಪರ್ಧೆ
ಕೆರೆಯ ದಡದಲ್ಲಿ ಹಿಂದೆಲ್ಲ ವಿಶೇಷ ಹಬ್ಬ ಹರಿದಿನಗಳಂದು ವಿಶೇಷ ಸ್ಪರ್ಧೆಗಳು ನಡೆಯುತ್ತಿದ್ದವಂತೆ. ಕೆರೆಯ ನೀರಿನಲ್ಲಿ ನಯನಮನೋಹರ ತಾವರೆಗಳು ಕಂಗೊಳಿಸುತಿದ್ದವು. ದಡದ ಒಂದು ಬದಿಯಿಂದ ಇನ್ನೊಂದು ಬದಿಗೆ ಕಲ್ಲು ಎಸೆಯುವ ಸ್ಪರ್ಧೆಯೂ ನಡೆಯುತ್ತಿತ್ತು. ಇದರಲ್ಲಿ ಗೆದ್ದವರಿಗೆ ಇನಾಮು ಹಾಗೂ ವಿಶೇಷ ಬಹುಮಾನ ನೀಡಲಾಗುತ್ತಿತ್ತು. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಈ ಮೋಜಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಎಸೆದ ಕಲ್ಲು ಕೆರೆಯ ಮಧ್ಯ ಭಾಗಕ್ಕೂ ತಲುಪುತ್ತಿರಲಿಲ್ಲ ಎನ್ನುವುದನ್ನು ಇಲ್ಲಿಯ ಹಿರಿಯರು ಈಗಲೂ ನೆನೆಪಿಸಿಕೊಳ್ಳುತ್ತಾರೆ. ಈ ಕೆರೆ ಅಷ್ಟೊಂದು ವಿಸ್ತಾರವಾಗಿತ್ತು ಎನ್ನುವುದಕ್ಕೆ ಇದು ನಿದರ್ಶನ.

ರೈತರಿಗೆ ಆಸರೆಯಾಗಿತು
ಕೆರೆಯ ಹೂಳು ತೆಗೆದು ಪ್ರಥಮ ಹಂತದಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲು ಅಧಿಕಾರಿಗಳು ಅಂದಾಜು ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಅನಂತರ ವಿವಿಧ ಯೋಜನೆಗಳಲ್ಲಿ ಅನುದಾನ ಪಡೆದು ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಪ್ರಯತ್ನ ನಡೆಯಲಿದೆ. ಈ ಕೆರೆ ಎತ್ತರದ ಸ್ಥಳದಲ್ಲಿದೆ. ಹಿಂದೆ ಭತ್ತದ ಗದ್ದೆಗಳಿಗೆ ನೀರುಣಿಸುವ ಪ್ರಮುಖ ಮೂಲ ಇದು. ಭೋಗರಾಯ ಅರಸ ಈ ಕೆರೆ ಕಟ್ಟಿಸಿದನೆಂಬ ಪ್ರತೀತಿಇದೆ. 1.40 ಎಕ್ರೆ ವಿಸ್ತೀರ್ಣದ ಕೆರೆಯಲ್ಲಿ , ಸದ್ಯ 1,500 ಕ್ಯೂಬಿಕ್‌ ಹೂಳು ತುಂಬಿದೆ.

ಸಮಸ್ಯೆ ಬಗೆಹರಿಸಿ ಅಭಿವೃದ್ಧಿ
ಕೆರೆ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ. ಆರಂಭದಲ್ಲಿ ಅಂದಾಜು ಪಟ್ಟಿ ಸಿದ್ಧವಾಗಲಿದೆ. ಕೆರೆ ಪಕ್ಕದಲ್ಲಿ ದೈವಸ್ಥಾನವೂ ಇದೆ. ಜಾಗದ ವಿಚಾರವಾಗಿ ಒಂದಷ್ಟು ಸಮಸ್ಯೆಗಳು ಇವೆ. ಇವೆಲ್ಲವನ್ನು ಪರಿಹ ರಿಸಿಕೊಂಡು ಹಂತ-ಹಂತವಾಗಿ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುತ್ತೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಇಲಾಖೆಗಳ ನೆರವು ಪಡೆದು ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲಾಗುವುದು.
-ನಳಿನ್‌ ಕುಮಾರ್‌ ಕಟೀಲು,
ದ.ಕ.ಸಂಸದರು

‡ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next