Advertisement

ಒತ್ತಡದ ಮಧ್ಯೆಯೇ ಉತ್ತಮ ಸೇವೆ ಸಲ್ಲಿಸಿ

12:55 PM Apr 07, 2017 | Team Udayavani |

ದಾವಣಗೆರೆ: ಎಂತಹದ್ದೇ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಒತ್ತಡಕ್ಕೆ ಒಳಗಾಗದೆ ಸಂವೇದನಾಶೀಲತೆಯಿಂದ ಸಮರ್ಪಕವಾಗಿ ಕರ್ತವ್ಯ ನಿಭಾಯಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಗುಳೇದ್‌ ಸಲಹೆ ನೀಡಿದ್ದಾರೆ. 

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮಹತ್ಯೆ ತಡೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದಾ ಒತ್ತಡದಲ್ಲಿಯೇ ಕೆಲಸ ಮಾಡಬೇಕಾದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಇನ್ನಿಲ್ಲದ ಒತ್ತಡವನ್ನ ತುಂಬಾ ತಾಳ್ಮೆ, ಸಂಯಮದಿಂದ ನಿಭಾಯಿಸಬೇಕು.

ಕಾರ್ಯಾಗಾರದ ಮೂಲಕ ಅಂತಹ ಮಾನಸಿಕ ಸಿದ್ಧತೆಗೆ ಒಳಗಾಗಬೇಕು ಎಂದರು. ಪೊಲೀಸ್‌, ಆರೋಗ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡಬೇಕಿದೆ. ಇದು ಮಾನಸಿಕ ಒತ್ತಡಕ್ಕೆ ಬಹು ಮುಖ್ಯ ಕಾರಣ. ದಿನವಿಡೀ ಸದಾ ಒಂದಿಲ್ಲೊಂದು ಒತ್ತಡದಲ್ಲೇ ಕೆಲಸ ಮಾಡುವುದರಿಂದ ಸರಿಯಾದ ಸಮಯಕ್ಕೆ ಊಟ, ನಿದ್ದೆ, ವಿಶ್ರಾಂತಿ ದೊರೆಯುವುದಿಲ್ಲ. 

ಇದು ನಮ್ಮಲ್ಲಿನ ಜೈವಿಕ ಗಡಿಯಾರದ ಮೇಲೆ ಪರಿಣಾಮ ಉಂಟಾಗುತ್ತದೆ. ಯಾವಾಗ ಸರಿಯಾದ ಸಮಯಕ್ಕೆ ಊಟ, ನಿದ್ದೆ, ವಿಶ್ರಾಂತಿ ಇರುವುದಿಲ್ಲವೂ ಸಹಜವಾಗಿಯೇ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆದರೂ, ನಾವು ಒತ್ತಡ ನಿಭಾಯಿಸುವ ಮೂಲಕ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.  ಸಮಾಜ ಬದಲಾಗುತ್ತಿದೆ. ಅಂತೆಯೇ ಬಹಳ ಸೂಕ್ಷ್ಮವಾಗುತ್ತಿದೆ. ಹಿಂದೆಲ್ಲಾ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯ ಮಾತುಗಳಿಗೆ ಅಷ್ಟಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಈಗ ಅಂತಹ ವಾತಾವರಣ ಇಲ್ಲ. ಜನರ ಮನೋಭಾವ ಬದಲಾವಣೆಗೆ ತಕ್ಕಂತೆ ಕೆಲಸದ ವೈಖರಿಯನ್ನೂ ಬದಲಾಯಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಈಗ ಸಾಮಾಜಿಕ ಮಾಧ್ಯಮ, ಮೊಬೈಲ್‌ ಸಹ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒತ್ತಡಕ್ಕೆ ಕಾರಣವಾಗುತ್ತಿವೆ. ಹಿಂದೆಯೆಲ್ಲಾ ಘಟನೆ ನಡೆದು, ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗುವುದು ಸ್ವಲ್ಪ ತಡವಾಗುತ್ತಿತ್ತು.

Advertisement

ಆದರೆ, ಈಗೆಲ್ಲಾ ಘಟನೆ ನಡೆದ ಕ್ಷಣಾರ್ಧದಲ್ಲೇ ಸಾಮಾಜಿಕ ಮಾಧ್ಯಮ, ಮೊಬೈಲ್‌, ದೃಶ್ಯ ಮಾಧ್ಯಮದಲ್ಲಿ ಬಿತ್ತರವಾಗುತ್ತಿರುತ್ತವೆ. ಹಿರಿಯ ಅಧಿಕಾರಿಗಳಿಗೆ ಪ್ರತಿ ಕ್ಷಣದ ಮಾಹಿತಿ ನೀಡಬೇಕಾಗುತ್ತದೆ. ನಮ್ಮ ಮೇಲೆಯೂ ಒತ್ತಡ ಇರುತ್ತದೆ. ನಾವು ಕೆಳಗಿನವರ ಮೇಲೆ ಒತ್ತಡ ಹಾಕಬೇಕಾಗುತ್ತದೆ ಎಂದು ತಿಳಿಸಿದರು. ನನ್ನನ್ನೂ ಒಳಗೊಂಡಂತೆ ಅಧಿಕಾರಿಗಳು ಪ್ರತಿ ದಿನ ನೂರಾರು ಮೊಬೈಲ್‌ ಕರೆ ಸೀಕರಿಸಬೇಕಾಗುತ್ತದೆ.

ತಮಗೆ ಮೊಬೈಲ್‌ ಕರೆ ಮಾಡಿ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆಯೂ ಕೇಳುವವರು ಇದ್ದಾರೆ. ಎಷ್ಟೆಲ್ಲಾ ಒತ್ತಡ ಇದ್ದರೂ ಸಂವೇದನಾಶೀಲತೆಯಿಂದ ಕೆಲಸ ಮಾಡುವುದ ಕಲಿಯಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ ಮಾತನಾಡಿ, ಏ. 7 ರಂದು ವಿಶ್ವ ಆರೋಗ್ಯ ದಿನವನ್ನು ಒತ್ತಡ… ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುವುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲೆಡೆ ಒತ್ತಡ ಹೆಚ್ಚುತ್ತಿದೆ. ಜನರು ಸಣ್ಣ ವಿಚಾರಕ್ಕೂ ಆತ್ಮಹತ್ಯೆಗೆ ಒಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈಚೆಗೆ ಸರ್ಕಾರ ಮಾನಸಿಕ ಆರೋಗ್ಯ ಅಭಿಯಾನದ ಮೂಲಕ ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಮಾನಸಿಕ ತಜ್ಞರ ನೇಮಿಸುತ್ತಿದೆ. ಸದಾ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ತಾಳ್ಮೆಯಿಂದ ಕೆಲಸ ಮಾಡುವ ಮೂಲಕ ಒತ್ತಡವನ್ನು ನಿಭಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಹೆಚ್ಚುವರಿ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ಸರೋಜಾಬಾಯಿ, ಡಾ| ದಯಾನಂದ್‌ ಸಾಗರ್‌ ಇತರರು ಇದ್ದರು. ಎಂ.ಕೆ. ಗಂಗಲ್‌ ಸ್ವಾಗತಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next