Advertisement

ನೆರೆ ಪರಿಹಾರಕ್ಕೆ 2 ದಿನದಲ್ಲಿ ಪರಿಷ್ಕೃತ ವರದಿ ಸಲ್ಲಿಕೆ

11:00 PM Sep 11, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ತಲೆದೋರಿದ ನೆರೆಯಿಂದಾಗಿ ಅಂದಾಜು 38,451 ಕೋಟಿ ರೂ. ನಷ್ಟವಾಗಿದ್ದು, ಎಸ್‌ಡಿಆರ್‌ಎಫ್ನಡಿ 3818 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಕೆಲ ಸ್ಪಷ್ಟನೆ ಕೋರಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪ್ರಸ್ತಾವವನ್ನು 2 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ವಿಧಾನಸೌಧದಲ್ಲಿ ಬುಧವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಖಾಸಗಿ ಕಟ್ಟಡ, ಆಸ್ಪತ್ರೆ, ಶಾಲೆ ಹಾನಿಗೆ ಎಸ್‌ಟಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಸಿಗಲ್ಲ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಪರಿಶೀಲಿಸಿ ಪರಿಷ್ಕೃತ ವರದಿ ಸಿದ್ಧಪಡಿಸಿ ಸಲ್ಲಿಸಲಿದ್ದಾರೆಂದರು. ನೆರೆಯಿಂದಾಗಿ 8.88 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. 2,47,628 ಮನೆಗಳಿಗೆ ಹಾನಿಯಾಗಿದೆ. 21,818 ಕಿ.ಮೀ. ಉದ್ದದ ರಸ್ತೆ ಹಾಳಾಗಿದೆ. 2193 ಸೇತುವೆ, 10,988 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ. 1550 ಸಣ್ಣ ನೀರಾವರಿ ಮತ್ತು ಜಿಪಂ ಟ್ಯಾಂಕ್‌ಗಳು ಹಾನಿಯಾಗಿವೆ ಎಂದು ವಿವರ ನೀಡಿದರು.

ಸದ್ಯ 26 ಕಾಳಜಿ ಕೇಂದ್ರಗಳಿದ್ದು, 5,397 ಮಂದಿ ಆಶ್ರಯ ಪಡೆದಿದ್ದಾರೆ. 2,00,258 ಲಕ್ಷ ಕುಟುಂಬಕ್ಕೆ 10,000 ರೂ. ಪರಿಹಾರ ನೀಡಲಾಗಿದೆ. ಬೆಳಗಾವಿಯಲ್ಲಿ ಮಾತ್ರ ಇನ್ನೂ 1929 ಕುಟುಂಬಕ್ಕೆ ಪರಿಹಾರ ನೀಡಬೇಕಿದೆ. 1929 ಪ್ರಕರಣಕ್ಕೆ ಸಂಬಂಧಪಟ್ಟಂತೆ ನೆರೆಹೊರೆಯವರು ಮನೆಗೆ ಹಾನಿಯಾಗಿಲ್ಲ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳಿದರು.

ಅಮಾನತಿಗೆ ಸೂಚನೆ: ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸ ಲಾಗಿದೆ. ಒಂದೊಮ್ಮೆ ಅನರ್ಹರಿಗೂ ನೆರವು ಕೊಡಿಸಲು ಯತ್ನಿಸಿರುವುದು ಕಂಡುಬಂದರೆ ಸಂಬಂಧಪಟ್ಟ ತಹಶೀ ಲ್ದಾರ್‌, ಕಂದಾಯ ನಿರೀಕ್ಷಕರನ್ನು ಅಮಾನತುಪಡಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 380.44 ಕೋಟಿ ರೂ. ಹಣವಿದೆ. ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಶೀಲನೆ ನಡೆಸಲಿದ್ದಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next