Advertisement

ಪ್ರಥಮ ಶಾಸಕರ ನೆನಪಲ್ಲಿ ವೃತ್ತ ನಿರ್ಮಾಣ; ನಾಳೆ ಸಮರ್ಪಣೆ

11:23 AM Dec 22, 2018 | |

ಸುಬ್ರಹ್ಮಣ್ಯ : ಅಮರ ಸುಳ್ಯವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖವಾಗಿ ಎರಡು ಮಂದಿ ಕಾಣಬರುತ್ತಾರೆ. ಶಿಕ್ಷಣ ತಜ್ಞ ಕುರುಂಜಿ ವೆಂಕಟ್ರಮಣ ಗೌಡರು ಒಬ್ಬರು. ಮತ್ತೊಬ್ಬರು ಮುತ್ಸದ್ದಿ ಕೂಜುಗೋಡು ವೆಂಕಟ್ರಮಣ ಗೌಡರು.

Advertisement

ಸ್ವತಂತ್ರ ಭಾರತ ಸರಕಾರದ ಅವಿಭಜಿತ ಪುತ್ತೂರು-ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಅವರು ಆಯ್ಕೆಯಾದವರು. ದ.ಕ. ಜಿಲ್ಲೆಯ ಗೌಡ ಜನಾಂಗದ ಮೊದಲ ವಕೀಲ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಡಾ| ಕುರುಂಜಿ ವೆಂಕಟ್ರಮಣ ಗೌಡ ಸ್ಮಾರಕ ಸಮಿತಿ ಆಶ್ರಯದಲ್ಲಿ ಸುಳ್ಯದಲ್ಲಿ ಕುರುಂಜಿ ಗೌಡರ ಪುತ್ಥಳಿ ಅನಾವರಣಗೊಂಡಿತ್ತು. ಅವರ ಸಮಕಾಲೀನ ದಿ| ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡ ಅವರ ನೆನಪಿಗೆ ಸುಳ್ಯ ತಾ| ಬಾಳುಗೋಡು ಗ್ರಾಮದಲ್ಲಿ ಕೆ.ವಿ. ಗೌಡ ವೃತ್ತ ನಿರ್ಮಾಣಗೊಂಡಿದೆ. ಅದು ಡಿ. 23ರಂದು ಲೋಕಾರ್ಪಣೆಗೊಳ್ಳಲಿದೆ. 

ಶಿಕ್ಷಣಕ್ಕೆ ನೆರವು
1905ರಲ್ಲಿ ಪ್ರಸಿದ್ಧ ಕೂಜುಗೋಡು ಮನೆತನದಲ್ಲಿ ಜನಿಸಿದ ಕೆ.ವಿ. ಗೌಡರು, ಪಂಜ, ಮಂಗಳೂರು, ಚೆನ್ನೈಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಪುತ್ತೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಎಷ್ಟೋ ಯುವಕರಿಗೆ ಮನೆಯಲ್ಲೇ ಆಶ್ರಯ ನೀಡಿ, ಶಿಕ್ಷಣಕ್ಕೆ ನೆರವಾಗಿದ್ದರು. ವಕೀಲಿ ವೃತ್ತಿ ನಡೆಸುತ್ತಿದ್ದ ಗೌಡರಿಗೆ ಸಹಕಾರ ಧುರೀಣ ಮೊಳಹಳ್ಳಿ ಶಿವರಾಯರು ಆಪ್ತರಾದರು.

ಪುತ್ತೂರು – ಸುಳ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ಚಳವಳಿ, ಭೂ ಬ್ಯಾಂಕ್‌ ನಿರ್ಮಾಣ (1938) ಮಾಡಿದರು. 1952ರಲ್ಲಿ ಕೂಜುಗೋಡು ವೆಂಕಟ್ರಮಣ ಗೌಡರು ಪ್ರಥಮ ಮಹಾಚುನಾವಣೆಯಲ್ಲಿ ಸಾಹಿತಿ ಡಾ| ಶಿವರಾಮ ಕಾರಂತರನ್ನೇ ಸೋಲಿಸಿ ಮದ್ರಾಸು ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದರು. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳಗಳ ಪ್ರತೀ ಹಳ್ಳಿಗಳಿಗೂ ರಸ್ತೆ ನಿರ್ಮಾಣ, ಸೇತುವೆ ರಚನೆ, ಶಾಲೆಗಳ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳನ್ನು ಮಾಡಿದರು. ಅವರ ಅವಧಿಯಲ್ಲಿ ಬಾಳುಗೋಡು, ಸುಬ್ರಹ್ಮಣ್ಯ, ಕೊಲ್ಲಮೊಗ್ರ, ಹರಿಹರ ಮೊದಲಾದೆಡೆ ಹಲವು ಸೇತುವೆಗಳು ನಿರ್ಮಾಣವಾದವು. ಕೊಲ್ಲಮೊಗ್ರು ಪ್ರಾ. ಆರೋಗ್ಯ ಕೇಂದ್ರ, ಹರಿಹರ-ಪಲ್ಲತ್ತಡ್ಕ ಶಾಲೆ, ಗುತ್ತಿಗಾರು ಪ್ರೌಢಶಾಲೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ದೂರವಾಣಿ ಸಂಪರ್ಕ, ವಿದ್ಯುತ್‌ ಸಂಪರ್ಕ, ಸುಬ್ರಹ್ಮಣ್ಯ ಕಡಮಕಲ್‌ ಗಾಳಿಬೀಡು ರಸ್ತೆ, ಬಳ್ಪ ಗುತ್ತಿಗಾರು ರಸ್ತೆ, ಸರಕಾರಿ ಬಸ್‌ ಸೇವೆ ಆರಂಭಕ್ಕೂ ಕಾರಣರಾದರು.

Advertisement

ಪ್ರಾಂತ್ಯವಾರು ವಿಭಜನೆ ಬಳಿಕ 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿ ಪುತ್ತೂರು ವಿಭಜನೆಗೊಂಡಿತು. ಸುಳ್ಯ ಮೀಸಲು ಕ್ಷೇತ್ರವಾಯಿತು. ಸುಳ್ಯದ ಮಣ್ಣಿನ ಮಗನಿಗೆ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿ ಅಲ್ಲಿ ಸುಬ್ಬಯ್ಯ ನಾಯ್ಕ ಶಾಸಕರಾದರು. ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಕೆ.ವಿ. ಗೌಡರು ಆಯ್ಕೆಯಾದರು. 1962ರಲ್ಲೂ ಪುನರಾಯ್ಕೆಯಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರಲ್ಲದೆ, ಒಟ್ಟು 15 ವರ್ಷಗಳ ಕಾಲ ಶಾಸಕರಾಗಿ ದುಡಿದರು. 1967ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಅವರು ಮಿತಭಾಷಿಯಾಗಿದ್ದರು. ಬರವಣಿಗೆಯನ್ನು ಹವ್ಯಾಸವಾಗಿ ಹೊಂದಿದ್ದರು

ಯೋಧರಿಗೆ ಸಮ್ಮಾನ 
ಕೂಜುಗೋಡು ವೆಂಕಟರಮಣ ಗೌಡ ವೃತ್ತ ನವೀಕರಣ ಸಮಿತಿ ನೇತೃತ್ವದಲ್ಲಿ ವಿಶ್ವ ಯುವಕ ಮಂಡಲ ಬಾಳುಗೋಡು, ದೀಪಾ ಮಹಿಳಾ ಮಂಡಲ ಬಾಳುಗೋಡು, ಗಣೇಶ ಭಕ್ತವೃಂದ ಬಸವನಗುಡಿ ಸಹಭಾಗಿತ್ವದಲ್ಲಿ ಬಾಳುಗೋಡು ಗ್ರಾಮಸ್ಥರ ಸಹಕಾರದಲ್ಲಿ ಈ ಸುಂದರ ವೃತ್ತ ನಿರ್ಮಾಣಗೊಂಡಿದೆ. ಇದೇ ವೇಳೆ ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಯೋಧರಿಗೆ ಸಮ್ಮಾನ ಕಾರ್ಯಕ್ರಮ ನೆರವೇರಲಿದೆ.

ಗೌಡರನ್ನು ನೆನಪಿಸುವ ವೃತ್ತ
ಕೆ.ವಿ. ಗೌಡರ ಹೆಸರನ್ನು ನೆನಪಿಸುವ ವೃತ್ತವನ್ನು ಬಸವನಗುಡಿಯಲ್ಲಿ ನಿರ್ಮಿಸಲಾಗಿದ್ದು, ಇದರ ಲೋಕಾರ್ಪಣೆ ಡಿ. 23ರಂದು ನಡೆಯಲಿದೆ.
ದಾಮೋದರ ಕೆ.ಎಸ್‌.
 ಅಧ್ಯಕ್ಷರು, ಕೆ.ವಿ. ಗೌಡ ವೃತ್ತ
 ನವೀಕರಣ ಸಮಿತಿ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next