Advertisement

2 ತಿಂಗಳಲ್ಲಿ ಸಬ್‌ಅರ್ಬನ್‌ ವರದಿ ಸಿದ್ಧ

12:43 PM Sep 19, 2018 | |

ಬೆಂಗಳೂರು: “ಬಹುನಿರೀಕ್ಷಿತ ಉಪನಗರ ರೈಲು (ಸಬ್‌ ಅರ್ಬನ್‌) ಯೋಜನೆಗೆ ಸಂಬಂಧಿಸಿದಂತೆ ಇನ್ನೆರಡು ತಿಂಗಳಲ್ಲಿ ಅಂತಿಮ ವರದಿ ಸಿದ್ಧಗೊಳ್ಳಲಿದೆ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಯೋಜನೆಗೆ ಈಗಾಗಲೇ ರೈಟ್ಸ್‌ ಸಂಸ್ಥೆ ಸಾಧಕ-ಬಾಧಕಗಳ ವರದಿಯನ್ನು ಸಲ್ಲಿಸಿದೆ.

Advertisement

ಅದಕ್ಕೆ ಅನುಗುಣವಾಗಿ ಪೂರಕ ಸಿದ್ಧತೆಗಳು ನಡೆದಿದ್ದು, ತಿಂಗಳಾಂತ್ಯಕ್ಕೆ ಪ್ರಾಥಮಿಕ ವರದಿ ಪೂರ್ಣಗೊಳ್ಳಲಿದೆ. ಬರುವ ನವೆಂಬರ್‌ಗೆ ಅಂತಿಮ ವರದಿ ಸಿದ್ಧಗೊಳ್ಳಲಿದೆ. ಇದನ್ನು ಆಧರಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತ ತಿಳಿಸಿದರು.
 
ನಗರದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಭಾಗೀಯ ಸಂಸದರ ಸಭೆಯಲ್ಲಿ ಸಂಸದ ಪಿ.ಸಿ. ಮೋಹನ್‌ ಉಪನಗರ ರೈಲು ಯೋಜನೆ ವಿಷಯ ಪ್ರಸ್ತಾಪಿಸಿ, ಸಂಚಾರದಟ್ಟಣೆ ತಗ್ಗಿಸಲು ತ್ವರಿತಗತಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಗಮನಸೆಳೆದರು. ಇದಕ್ಕೆ ಪ್ರಧಾನ ವ್ಯವಸ್ಥಾಪಕರು ಪ್ರತಿಕ್ರಿಯಿಸಿ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ಹೇಳಿದರು.

ಕೋಚ್‌ ಫ್ಯಾಕ್ಟರಿ – ಇನ್ನಷ್ಟು ವಿಳಂಬ: ಸಂಸದ ಕೆ.ಎಚ್‌. ಮುನಿಯಪ್ಪ ಮಾತನಾಡಿ, ಕೋಲಾರದಲ್ಲಿನ ಉದ್ದೇಶಿತ ಬೋಗಿಗಳ ತಯಾರಿಕೆ ಕಾರ್ಖಾನೆ ಸ್ಥಿತಿ ಬಗ್ಗೆ ಕೇಳಿದರು. ಆಗ, ಈಗಾಗಲೇ ಬೋಗಿಗಳ ಪೂರೈಕೆ ಬೇಡಿಕೆಗಿಂತ ಹೆಚ್ಚು ಇದೆ. ಹಾಗಾಗಿ, ಈ ಯೋಜನೆ ತುಸು ತಡವಾಗಲಿದೆ ಎಂದು ಮಾಹಿತಿ ನೀಡಿದರು. 

ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಬೆಂಗಳೂರು-ನೆಲಮಂಗಲ-ಹಾಸನ -ಮಂಗಳೂರು ನಡುವೆ ರೈಲುಗಳ ಸೇವೆಯನ್ನು ಹೆಚ್ಚಿಸಬೇಕು. ಹಾಗೂ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹತ್ತಿರ ಬರುವ ಮುದ್ದಲಿಂಗನಹಳ್ಳಿಯಲ್ಲಿ ರೈಲ್ವೆ ಎತ್ತರಿಸಿದ ಸೇತುವೆ (ರೈಲ್ವೆ ಓವರ್‌ ಬ್ರಿಡ್ಜ್) ನಿರ್ಮಿಸಬೇಕು ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ರಾಷ್ಟ್ರೀಯ ಹೆದ್ದಾರಿ 207ರ ಅಭಿವೃದ್ಧಿ ಅಡಿ ನಿರ್ಮಿಸಲು ಉದ್ದೇಶಿಸಿದೆ ಎಂದು ಎ.ಕೆ. ಗುಪ್ತ ಸಂಸದರ ಗಮನಕ್ಕೆ ತಂದರು. 

ತುಮಕೂರು ಸಂಸದ ಎಸ್‌.ಪಿ. ಮುದ್ದುಹನುಮೇಗೌಡ ಮಾತನಾಡಿ, ತುಮಕೂರು-ಅರಸಿಕೆರೆ ಜೋಡಿ ರೈಲು ಮಾರ್ಗ ಕಾಮಗಾರಿ ಬಗ್ಗೆ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ಅಧಿಕಾರಿಗಳು, ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಇದಕ್ಕೆ ಹಸಿರುನಿಶಾನೆ ದೊರೆಯಲಿದೆ. ಅಲ್ಲದೆ, ತುಮಕೂರು-ರಾಯದುರ್ಗ ಹೊಸ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದರು. 

Advertisement

ಸಂಸದ ಡಿ.ಕೆ. ಸುರೇಶ್‌ ಮಾತನಾಡಿದರು. ರಾಜ್ಯಸಭಾ ಸದಸ್ಯರಾದ ಜಿ.ಎಸ್‌. ಚಂದ್ರಶೇಖರ್‌, ಸಯ್ಯದ್‌ ನಾಸಿರ್‌ ಹುಸೇನ್‌ ಸಲಹೆ ನೀಡಿದರು. ಅಧಿಕಾರಿಗಳಾದ ಆರ್‌.ಎಸ್‌. ಸಕ್ಸೇನಾ, ಜೆ. ಪ್ರಸಾದ್‌, ಕೆ. ಶಿವಪ್ರಸಾದ್‌, ಯುಎಸ್‌ಎಸ್‌ ಯಾದವ್‌, ಕೆ.ಸಿ. ಸ್ವಾಮಿ, ಎಸ್‌.ಕೆ. ಗುಪ್ತ, ರಾಜೀವ್‌ಕುಮಾರ್‌, ಡಿ.ಬಿ. ಕಾಸರ್‌, ಇ. ವಿಜಯಾ ಉಪಸ್ಥಿತರಿದ್ದರು.

ಆದ್ಯತೆ ಮೇರೆಗೆ ಕಾಮಗಾರಿ: ಬೆಂಗಳೂರು ಸಿಟಿ ಮತ್ತು ಯಶವಂತಪುರ ರೈಲು ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ಬೈಯಪ್ಪನಹಳ್ಳಿ ಟರ್ಮಿನಲ್‌ ಅನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣ ಮತ್ತು ಕಾಡುಗೋಡಿ ಬಸ್‌ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸಲು ಎತ್ತರಿಸಿದ ಪಾದಚಾರಿ ಮಾರ್ಗ ನಿರ್ಮಿಸಬೇಕು ಎಂದು ಪಿ.ಸಿ. ಮೋಹನ್‌ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎ.ಕೆ. ಗುಪ್ತ, 2019 ಮಾರ್ಚ್‌ ಅಂತ್ಯಕ್ಕೆ ಬೈಯಪ್ಪನಹಳ್ಳಿ ಟರ್ಮಿನಲ್‌-1ರ ಕಾಮಗಾರಿ ಪೂರ್ಣಗೊಳ್ಳಲಿದ್ದು, ಟರ್ಮಿನಲ್‌-2 ಮುಂದಿನ ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. ಜತೆಗೆ ಹೊಸೂರಿನಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ಮತ್ತು ಹೀಲಳಿಗೆಯಲ್ಲಿ ಅನ್‌ಲೋಡಿಂಗ್‌ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next