Advertisement

Sub-Junior ರಾಷ್ಟ್ರೀಯ ಹಾಕಿ ತಂಡ ರಚನೆ; ಸರ್ದಾರ್‌,ರಾಣಿ ರಾಂಪಾಲ್‌ ಕೋಚ್‌ಗಳಾಗಿ ಆಯ್ಕೆ

11:34 PM Aug 10, 2023 | Team Udayavani |

ಚೆನ್ನೈ: ಯುವಕರು ಹಾಕಿ ಕ್ರೀಡೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಹಾಕಿ ಇಂಡಿಯಾ ದಿಟ್ಟ ಹೆಜ್ಜೆ ಇಟ್ಟಿದೆ. ಬಾಲಕ-ಬಾಲಕಿಯರಿಗಾಗಿ ಸಬ್‌ ಜೂನಿಯರ್‌ (ಅಂಡರ್‌-17) ರಾಷ್ಟ್ರೀಯ ಹಾಕಿ ತಂಡಗಳನ್ನು ರಚಿಸುವುದಾಗಿ ಹಾಕಿ ಇಂಡಿಯಾ ಪ್ರಕಟಿಸಿದೆಯಲ್ಲದೇ ಈ ತಂಡಗಳಿಗೆ ಮಾಜಿ ನಾಯಕರಾದ ಸರ್ದಾರ್‌ ಸಿಂಗ್‌ ಮತ್ತು ರಾಣಿ ರಾಂಪಾಲ್‌ ಅವರನ್ನು ಕೋಚ್‌ಗಳಾಗಿ ನೇಮಿಸಿದೆ.

Advertisement

ಸದ್ಯ ಸಾಗುತ್ತಿರುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯ ವೇಳೆ ಹಾಕಿ ಇಂಡಿಯಾ ಅಧ್ಯಕ್ಷ ಮತ್ತು ಭಾರತ ತಂಡದ ಮಾಜಿ ನಾಯಕರೂ ಆಗಿರುವ ದಿಲೀಪ್‌ ತಿರ್ಕೆ ಅವರು ಈ ವಿಷಯವನ್ನು ಪ್ರಕಟಿಸಿದರು. ಕೋಚ್‌ ನಿಯಮದಲ್ಲಿ ಕೆಲವೊಂದು ಬದಲಾವಣೆ ತರಲು ಉದ್ದೇಶಿಸಲಾಗಿದೆ. ತಳಮಟ್ಟದಿಂದಲೇ ಯುವಕರಿಗೆ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಹಾಕಿ ಇಂಡಿಯಾದ ಇತಿಹಾಸದಲ್ಲಿ ಇದೇ ಮೊದಲ ಸಲ ಮಾಡಲಾಗುತ್ತಿದೆ ಎಂದವರು ಹೇಳಿದರು.

ಕೆಲವೊಂದು ಸಮಯದಿಂದ ನಾವು ಅಂಡರ್‌-21 ಮಟ್ಟದ ಹಾಕಿ ಸ್ಪರ್ಧೆಗಳಿಗೆ ಪ್ರಾಮುಖ್ಯ ನೀಡುತ್ತಿದ್ದೆವು. ಇದೀಗ ಸಬ್‌ ಜೂನಿಯರ್‌ ಹಂತಕ್ಕೂ ಪ್ರಾಮುಖ್ಯ ನೀಡಲು ನಿರ್ಧರಿಸಿದ್ದೇವೆ. ಈ ಕಾರಣಕ್ಕೆ ಸಬ್‌ ಜೂನಿಯರ್‌ ತಂಡಗಳನ್ನು ಆಯ್ಕೆ ಮಾಡಲಾಗುವುದು. ಯುವಕರು ಹಾಕಿ ಕ್ರೀಡೆಯತ್ತ ಆಸಕ್ತಿ ವಹಿಸಲು ಅವಕಾಶ, ವೇದಿಕೆ ಕಲ್ಪಿಸಲಾಗುವುದು ಎಂದವರು ತಿಳಿಸಿದರು.

ಸಬ್‌ ಜೂನಿಯರ್‌ ತಂಡಗಳಿಗೆ ವಿಶೇಷ ತರಬೇತಿ ಶಿಬಿರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಆ. 21ರಿಂದ ಆರಂಭವಾಗುವ ಶಿಬಿರವು 45ರಿಂದ 50 ದಿನ ಇರಲಿದೆ. ಅದಲ್ಲದೇ ಯುರೋಪ್‌, ಬೆಲ್ಜಿಯಂ, ನೆದರ್ಲೆಂಡ್ಸ್‌ನಲ್ಲಿ ಪಂದ್ಯಗಳನ್ನು ನಡೆಸಲಾಗುವುದು. ಪ್ರತಿ ಶಿಬಿರಕ್ಕೆ 40 ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next