Advertisement
ಅತ್ತ ವಾಲ್‌ಸ್ಟ್ರೀಟ್‌ನಲ್ಲಿ ಮಾರುಕಟ್ಟೆ ಕುಸಿಯುತ್ತಿದಂತೆ, ಇತ್ತ ಮುಂಬಯಿ ಷೇರುಪೇಟೆಯಲ್ಲೂ ಅದರ ಎಫೆಕ್ಟ್ ಕಾಣತೊಡಗಿತು. ಹೂಡಿಕೆದಾರರು ಷೇರುಗಳ ಭಾರೀ ಮಾರಾಟದಲ್ಲಿ ತೊಡಗಿದ ಕಾರಣ, ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 1,275 ಅಂಕ ಕುಸಿಯಿತು. ಆದರೆ, ಅನಂತರ ಚೇತರಿಸಿಕೊಂಡು, ದಿನಾಂತ್ಯಕ್ಕೆ 561 ಅಂಕ ಕುಸಿತ ಕಂಡು, 34,195ರಲ್ಲಿ ಕೊನೆಗೊಂಡಿತು. ಇನ್ನು ನಿಫ್ಟಿ ಕೂಡ ಸತತ 6ನೇ ದಿನವೂ ಕುಸಿತಕ್ಕೆ ಸಾಕ್ಷಿಯಾಗಿ, 168 ಅಂಕ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 10,498ರಲ್ಲಿ ಕೊನೆಗೊಂಡಿತು. ಒಟ್ಟಿನಲ್ಲಿ ಕಳೆದ 6 ದಿನಗಳಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ ಉಂಟುಮಾಡಿತು.
ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಾದ ಬ್ಲಿಡ್‌ಬಾತ್ ವಿಶ್ವದ ಮೂರನೇ ಅತಿ ಶ್ರೀಮಂತ ಎಂದೇ ಖ್ಯಾತಿಯಾಗಿರುವ ಕೋಟ್ಯಧಿಪತಿ ವಾರೆನ್ ಬಫೆಟ್ ಅವರ ಆಸ್ತಿಯನ್ನು ಕೇವಲ 24 ಗಂಟೆಗಳಲ್ಲಿ 32,800 ಕೋಟಿ ರೂ. (5.1 ಶತಕೋಟಿ ಡಾಲರ್)ನಷ್ಟು ಕಡಿಮೆಯಾಗಿಸಿತು. ಅವರು ಈ ಪ್ರಮಾಣದ ನಷ್ಟ ಅನುಭವಿಸಿ ರುವುದಾಗಿ ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ವರದಿ ಹೇಳಿದೆ. ಇನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ 23,100 ಕೋಟಿ ರೂ. ನಷ್ಟ ಅನುಭವಿಸಿದರು. ಒಟ್ಟಿನಲ್ಲಿ ಮಂಗಳವಾರ ವಾಲ್‌ಸ್ಟ್ರೀಟ್‌ನಲ್ಲಾದ ಕುಸಿತವು ವಿಶ್ವದ 500 ಸಿರಿವಂತರ 114 ಶತಕೋಟಿ ಡಾಲರ್(7.33 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ಕರಗಿಸಿತು ಎಂದು ವರದಿ ಹೇಳಿದೆ.