Advertisement

ಸರ್ವರ್‌ ಎಡವಟ್ಟು; ಖಾತಾ ಬದಲಾವಣೆ ಸಂಕಷ್ಟ !

11:56 AM Aug 13, 2018 | Team Udayavani |

ಮಹಾನಗರ: ಒಂದೆಡೆ ಪೇಪರ್‌ಲೆಸ್‌ ಯೋಜನೆ… ಇನ್ನೊಂದೆಡೆ ಹಳೆಯ ಸರ್ವರ್‌… ಪರಿಣಾಮವಾಗಿ ಮಹಾನಗರ ಪಾಲಿಕೆ ಈಗ ಸಮಸ್ಯೆಯ ಕೂಪವಾಗಿ ಪರಿವರ್ತಿತವಾಗಿದೆ! ಕಾಗದ ರಹಿತವಾಗಿ ಹಾಗೂ ಎಲ್ಲವೂ ಆನ್‌ಲೈನ್‌ ವ್ಯವಸ್ಥೆ ಸಾರ್ವಜನಿಕರಿಗೆ ಸಿಗಬೇಕು ಎಂಬ ಉತ್ತಮ ಉದ್ದೇಶ ಪಾಲಿಕೆಯದ್ದು. ಆದರೆ ಅನುಷ್ಠಾನದಲ್ಲಿ ಆಗಿರುವ ತಾಂತ್ರಿಕ ಎಡವಟ್ಟಿನಿಂದಾಗಿ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಎಲ್ಲವೂ ಆನ್‌ಲೈನ್‌ ಆಗಿದೆ ಎಂದು ಪಾಲಿಕೆ ಹೇಳುತ್ತಿದ್ದರೂ ಸಾರ್ವಜನಿಕರು ಸಮಸ್ಯೆಯಲ್ಲಿ ನಲುಗಿದ್ದು, ನಿತ್ಯ ಕಚೇರಿ ಸುತ್ತಾಡುವಂತಾಗಿದೆ.

Advertisement

ವಿಲೇವಾರಿಯಾಗದ ಅರ್ಜಿಗಳು
ಸಾರ್ವಜನಿಕರು ಖಾತಾ ಬದಲಾವಣೆಗೆ ಪಾಲಿಕೆ ಯ ಕಂದಾಯ ವಿಭಾಗಕ್ಕೆ ಅರ್ಜಿ ಹಾಕಿದ್ದರೂ ವಿಲೇವಾರಿ ಮಾತ್ರ ಆಗುತ್ತಿಲ್ಲ. ಇಲಾಖೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ ಮುಖೇನ ನಡೆಸಲು ಉದ್ದೇಶಿಸಿರುವುದರಿಂದ ಕಂದಾಯ ಇಲಾಖೆಯಲ್ಲಿದ್ದ ಸರ್ವರ್‌ ಗೆ ಲೋಡ್‌ ಹೆಚ್ಚಾಗಿ ದಿನಕಳೆದಂತೆ ದಾಖಲೆಗಳನ್ನು ಸ್ಕ್ಯಾನ್  ಮಾಡುವ ಪ್ರಕ್ರಿಯೆ ನಿಧಾನಗತಿ ಪಡೆಯಿತು. ಈಗ ಸರ್ವರ್‌ ಕಾರ್ಯಚರಿಸುವುದನ್ನೇ ಭಾಗಶಃ ನಿಲ್ಲಿಸಿದಂತಾಗಿದೆ. 

ವಾಸ್ತವ್ಯ ದೃಢಪತ್ರ, ಮನೆ ನಂಬರ್‌ ಅರ್ಜಿ, ಖಾತಾ ಸೇರಿದಂತೆ ದಿನಕ್ಕೆ ಸುಮಾರು 75ರಷ್ಟು ಅರ್ಜಿಗಳು ಪಾಲಿಕೆಯ ಕಂದಾಯ ವಿಭಾಗಕ್ಕೆ ಬರುತ್ತವೆ. ಅರ್ಜಿಯೊಂದಿಗೆ ಅದಕ್ಕೆ ಸಬಂಧಪಟ್ಟ ದಾಖಲೆಗಳೇ ಸುಮಾರು 30 ಪುಟಗಳಿಷ್ಟುರುತ್ತದೆ. ಅದನ್ನು ಅರ್ಜಿಗಳು ಬಂದ ದಿನವೇ ಸ್ಕ್ಯಾನ್‌ ಮಾಡಿ ಮರುದಿನ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಆದರೆ ಈಗ ಸರ್ವರ್‌ ಸಮಸ್ಯೆ ಆಗಿ ಎಲ್ಲ ಕೆಲಸ ಬಾಕಿ ಉಳಿದಿವೆ.

ಅಲ್ಲೂ ಉಪಯೋಗಕ್ಕೆ ಬಾರದ ಸರ್ವರ್‌!
ಈ ಮಧ್ಯೆ ಪಾಲಿಕೆಯ ಕುಡಿಯುವ ನೀರಿನ ವಿಭಾಗದಲ್ಲಿರುವ ಸಾಫ್ಟ್‌ ವೇರ್‌ನ್ನು ಹೊಸ ಸರ್ವರ್‌ಗೆ ಲಿಂಕ್‌ ಮಾಡದೆ ಇರುವುದರಿಂದ ನೀರು ಪೂರೈಕೆ ಇಲಾಖೆಯಲ್ಲೂ ಈ ಸರ್ವರ್‌ ಕಾರ್ಯಾಚರಿಸುತ್ತಿಲ್ಲ. ಇದರಿಂದ ನೀರಿನ ಬಿಲ್‌ನಲ್ಲೂ ತೊಂದರೆಯಾಗುತ್ತಿದೆ. ಎ. 1ರಿಂದ ಈವರೆಗೆ ನೀರಿನ ಬಿಲ್‌ ಕೂಡ ಸರಿಯಾಗಿ ಅಪ್‌ಡೇಟ್‌ ಆಗುತ್ತಿಲ್ಲ.

ಅಧಿಕಾರಿಗಳ ಜತೆ ಸಭೆ
ಪಾಲಿಕೆಯ ಆನ್‌ಲೈನ್‌ ವ್ಯವಸ್ಥೆ ಹಾಗೂ ಅರ್ಜಿ ವಿಲೇವಾರಿಯಲ್ಲಿ ಸಮಸ್ಯೆಗಳಾದ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ತುರ್ತು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
 - ಭಾಸ್ಕರ್‌ ಕೆ., ಮೇಯರ್‌

Advertisement

ಬಂದದ್ದು ಕಂದಾಯಕ್ಕೆ ;ಹೋದದ್ದು ನೀರು ಸರಬರಾಜಿಗೆ!
ಇಂತಹ ಸಮಸ್ಯೆ ಬರಬಾರದೆಂದು ಲೆಕ್ಕಹಾಕಿ ಇಲಾಖಾ ಅಧಿಕಾರಿಗಳು ಹೊಸ ಸಾಫ್ಟ್‌ವೇರ್‌ ಅನ್ನು ಕಂದಾಯ ಇಲಾಖೆಗೆ ತರಿಸಿಕೊಂಡರು. ಅದೇ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್‌ ವಿತರಿಸುವ ಟೆಂಡರ್‌ ಮುಗಿದಿದ್ದ ಕಾರಣ ಬಿಲ್‌ ವಿತರಿಸಲು ತೊಂದರೆಯಾಗುತ್ತಿದೆ ಎಂಬ ಸಮಸ್ಯೆ ಭುಗಿಲೆದ್ದಿತ್ತು. ಈ ಕಾರಣಕ್ಕಾಗಿ ಕಂದಾಯ ಇಲಾಖೆಗೆ ಬಂದ ಸರ್ವರ್‌ ಅನ್ನು ನೀರು ಸರಬರಾಜು ವಿಭಾಗಕ್ಕೆ ನೀಡಲಾಯಿತು. ಆದ್ದರಿಂದ ಕಂದಾಯ ವಿಭಾಗದ ಖಾತಾ ಬದಲಾವಣೆ ಸಮಸ್ಯೆ ಹಾಗೆಯೇ ಮುಂದುವರಿಯಿತು. ಜು. 19ರಿಂದ ಈವರೆಗೆ ಸಲ್ಲಿಸಿದ ಎಲ್ಲ ಅರ್ಜಿಗಳು ಬಾಕಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next