ಕಡಬ: ಮರ್ದಾಳ ಪೇಟೆಯಲ್ಲಿ ಪದೇ ಪದೇ ವಾಹನ ಅಪಘಾತಗಳು ಸಂಭವಿಸುತ್ತಿರುವ ಕಾರಣದಿಂದಾಗಿ ವಾಹನಗಳ ವೇಗವನ್ನು ನಿಯಂತ್ರಿಸಲು ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆಯು ಜಂಕ್ಷನ್‌ನಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಿದೆ.
ಧರ್ಮಸ್ಥಳ -ಸುಬ್ರಹ್ಮಣ್ಯ ರಾಜ್ಯಹೆದ್ದಾರಿ ಹಾದುಹೋಗುವ ಮರ್ದಾಳ ಜಂಕ್ಷನ್‌ನಲ್ಲಿ ಪ್ರತೀ ದಿನ ಟೂರಿಸ್ಟ್ ವಾಹನಗಳು ಭಾರೀ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಮಂಗಳೂರು-ಸುಬ್ರಹ್ಮಣ್ಯ ರಸ್ತೆಯೂ ಮರ್ದಾಳದ ಅದೇ ಜಂಕ್ಷನ್‌ನಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಗೆ ಸೇರುತ್ತದೆ. ಮರ್ದಾಳ ಪೇಟೆಯ ವ್ಯಾಪ್ತಿಯಲ್ಲಿಯೂ ಟೂರಿಸ್ಟ್ ವಾಹನಗಳು ವೇಗವಾಗಿ ಸಂಚರಿಸುವುದರಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು.
ಇಲ್ಲಿನ ಸಮಸ್ಯೆ ಬಗ್ಗೆ ಉದಯವಾಣಿ ಸುದಿನ ಸಚಿತ್ರ ವರದಿಯನ್ನು ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಜನರ ಮನವಿ ಮತ್ತು ಮಾಧ್ಯಮ ವರದಿಗೆ ಸ್ಪಂದಿಸಿ ಪರಿಶೀಲನೆ ನಡೆಸಿದ್ದ ಅಧಿಕಾರಿ ಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ದ್ದರು. ಅದರಂತೆ ಈಗ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಲಾಗಿದೆ. ಕರ್ಮಾಯಿ ರಸ್ತೆಯ ಜೀವನ್ ಜ್ಯೋತಿ ವಿಶೇಷ ಶಾಲೆ ಬಳಿ ಮುಖ್ಯರಸ್ತೆಗೆ ಸೇರುವ ಜಾಗದಲ್ಲಿಯೂ ಅಪಘಾತಗಳು ಸಂಭವಿಸಿತ್ತು. ಅಲ್ಲಿಯೂ ಸ್ಪೀಡ್ ಬ್ರೇಕರ್ ಅಳವಡಿಸಲಾಗಿದೆ.
ಅಪಘಾತ ನಿಯಂತ್ರಿಸಲು ಸ್ಪೀಡ್ ಬ್ರೇಕರ್‌ಗಳನ್ನು ಹಾಕಲಾಗಿದೆ. ಇಲ್ಲಿ ಸವಾರರಿಗೆ ಅನುಕೂಲವಾಗುವಂತೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು.
-ಕನಿಷ್ಕ ಎಸ್.ಚಂದ್ರ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ