ಮೈಸೂರು: ಶಾಲೆಗೆ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ. ಸಮವಸ್ತ್ರ ಆದೇಶವನ್ನು ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲನೆ ಮಾಡದಿದ್ದರೆ ಸರ್ಕಾರಿ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತ ಮಾಡುವ ದುರುದ್ದೇಶವಿಲ್ಲ. ಎಜುಕೇಷನ್ ಅ್ಯಕ್ಟ್ ರೂಲ್ 11 ಅನ್ವಯ ನಿಯಮ ಜಾರಿ ಮಾಡಿದ್ದೇವೆ. ಎಜುಕೇಶನ್ ಪಾಲಿಸಿಯನ್ನು ಬಿಜೆಪಿ ಸರ್ಕಾರ ಮಾಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಿನಿಂದಲೂ ಇದೆ. ಇದರಲ್ಲಿ ಅನಾವಶ್ಯಕ ರಾಜಕಾರಣ ಮಾಡಬಾರದು ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗಲೂ ಜಾರಿಯಲ್ಲಿವೆ. ಆ ನಿಯಮದ ಅನ್ವಯವೇ ಆದೇಶ ಮಾಡಿದ್ದೇನೆ. ರಾಜಕೀಯ ಲಾಭಕ್ಕೆ ಮಕ್ಕಳನ್ನ ಬಳಸಿಕೊಳ್ಳಬಾರದು. ಮಕ್ಕಳನ್ನು ಅಸ್ತ್ರ ಮಾಡಿಕೊಂಡು ರಾಜಕೀಯ ಮಾಡಬೇಡಿ. ಪಾಪುಲರ್ ಫ್ರಂಟ್ ಯಾರ ಕೈಯಲ್ಲಿದೆ, ಯಾರ ಕೈವಾಡ ಇದೆ ಅಂತ ಜಗತ್ತಿಗೆ ಗೊತ್ತು. ಅವರ ಕುಮ್ಮಕ್ಕಿನಿಂದ ಆ ಮಕ್ಕಳು ಹಿಜಾಬ್ ಧರಿಸಿದ್ದಾರೆ. ಐವತ್ತು ವರ್ಷ ಆಳಿದ ಕಾಂಗ್ರೆಸ್ ಗೆ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಕಾಳಜಿ ಇದೆ ಅಂತ ಗೊತ್ತಿದೆ. ನಾವು ಮಕ್ಕಳಲ್ಲಿ ಸಮಾನ ಮಾನಸಿಕತೆ ತರಲು ಈ ಆದೇಶ ಜಾರಿಗೊಳಿಸಿದ್ದೇವೆ ಎಂದರು.
ಇದನ್ನೂ ಓದಿ:ಲತಾ ಮಂಗೇಶ್ಕರ್: ಮಂದ ಸ್ವರ ಎಂದು ತಿರಸ್ಕರಿಸಿದವರೇ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದರು
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಆದರೆ ಪಕ್ಷದಲ್ಲಿ ಚರ್ಚೆಯಾಗಿಲ್ಲ. ಈ ವಿಚಾರದಲ್ಲಿ ಸಿಎಂ ಹಾಗೂ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಎಂದರು.
ರಾಜ್ಯ ಬಜೆಟ್ ಕುರಿತು ಮಾತನಾಡಿದ ಅವರು, ಕೇಂದ್ರ ನಾಯಕರ ಸಲಹೆ ಪಡೆಯಲು ಸಿಎಂ ದೆಹಲಿಗೆ ಹೋಗಿದ್ದಾರೆ. ಪ್ರತಿ ಬಜೆಟ್ ಗೂ ಮುನ್ನ ಹೈಕಮಾಂಡ್ ಹಾಗೂ ಕೇಂದ್ರ ಸಚಿವರು, ಸಂಸದರ ಜೊತೆ ಮಾತುಕತೆ ನಡೆಸುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.