ಚಿಕ್ಕಮಗಳೂರು: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಗಿದೆ. ಶಿಕ್ಷಣ ಇಲಾಖೆ ಪರೀಕ್ಷೆ ದಿನಾಂಕ ನಿಗದಿಪಡಿಸಿಲ್ಲ. ಆದರೆ, ವಿದ್ಯಾರ್ಥಿಗಳು ಕಲಿತ ವಿಷಯವನ್ನು ಮರೆಯದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುತ್ತಿದೆ.
ಜಿಲ್ಲೆಯ ಬೀರೂರು 1,371, ಚಿಕ್ಕಮಗಳೂರು 3,780, ಕಡೂರು 2,296, ಕೊಪ್ಪ 1079, ಮೂಡಿಗೆರೆ 1,333, ಎನ್ ಆರ್‌ಪುರ 940, ಶೃಂಗೇರಿ 559, ತರೀಕೆರೆ 2014 ಸೇರಿದಂತೆ ಖಾಸಗಿ ವಿದ್ಯಾರ್ಥಿಗಳು ಪುನಃವರ್ತಿತ ವಿದ್ಯಾರ್ಥಿಗಳು ಸೇರಿದಂತೆ 13,371 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಎದುರು ನೋಡುತ್ತಿದ್ದಾರೆ. ಮಕ್ಕಳು ಕಲಿತ ವಿಷಯವನ್ನು ಮರೆದಂತೆ ಪುನರ್‌ಮನನ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಚಂದನ ವಾಹಿನಿಯಲ್ಲಿ ಏ.29ರಿಂದ ಪುನರ್‌ಮನನ ತರಗತಿ ಆರಂಭಿಸಿದ್ದು, ಪ್ರತಿದಿನ ಮಧ್ಯಾಹ್ನ 3 ರಿಂದ 4:30ರ ವರೆಗೂ ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ. ಈ ಸಮಯದಲ್ಲಿ ವಿದ್ಯುತ್ ಸಮಸ್ಯೆಯಿಂದ ಇನ್ಯಾವುದೋ ಕಾರಣದಿಂದ ವಿದ್ಯಾರ್ಥಿಗಳಿಗೆ ತರಗತಿ ವಂಚಿತವಾದರೆ ಮರುದಿನ ಬೆಳಿಗ್ಗೆ 6 ರಿಂದ 7:30ರ ವರೆಗೂ ಮರುಪ್ರಸಾರವಾಗುತ್ತಿದೆ.
ಮನೆಯಲ್ಲಿ ಟಿವಿ ಇಲ್ಲದಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿಷಯವಾರು ತರಗತಿ ವಿಡಿಯೋಗಳನ್ನು ಯೂಟ್ಯೂಬ್‌ಗಳಲ್ಲೂ ಬಿಡಲಾಗಿದೆ. ಮಕ್ಕಳವಾಣಿ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದು, ಶಿಕ್ಷಕರು ಪಾಠ ಮಾಡುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಬೇಕಾದಾಗ ನೋಡಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಶಿಕ್ಷಕರಿಗೆ 5 ರಿಂದ 10 ವಿದ್ಯಾರ್ಥಿಗಳ ಜವಬ್ದಾರಿಯನ್ನು ನೀಡಲಾಗಿದೆ. ಶಿಕ್ಷಕರು ಪ್ರತಿದಿನ ವಿದ್ಯಾರ್ಥಿಯ ಅಭ್ಯಾಸದ ಕಡೆ ಗಮನಹರಿಸುತ್ತಾರೆ. ವಾಟ್ಸಪ್ ವಿಡೀಯೋ ಕಾಲ್ ಮಾಡಿ ಅವರ ದೈನದಿಂದ ವಿಷಯವಾರು ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಯಾವುದಾದರೂ ಸಂದೇಹಗಳಿದ್ದರೆ ಅವರ ಸಂದೇಹಗಳನ್ನು ವಾಟ್ಸಪ್ ವಿಡೀಯೋ ಕಾಲ್ ಮೂಲಕ ಸಂದೇಹ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು (ಬಿಇಒ), ವಿಷಯವಾರು ಅಧಿಕಾರಿಗಳು ಪ್ರತಿ 5 ವಿದ್ಯಾರ್ಥಿಗಳು, ಆಯಾಶಿಕ್ಷಕರಿಗೆ ಕಾನ್ಪರೆನ್ಸ್ ಕಾಲ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವ ದೃಷ್ಟಿಯಿಂದ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿಗಳು ಅಥವಾ ಪೋಷಕರ ವಾಟ್ಸಪ್ ಗ್ರೂಪ್‌ಗ್ಳನ್ನು ಮಾಡಿಕೊಂಡು ಮಾದರಿ ಪರೀಕ್ಷೆ ಮೇ 11ರಿಂದ ಆರಂಭಿಸಿದ್ದು ಮೇ 11ರಿಂದ16 ಮಾದರಿ-1, ಮೇ 18 ರಿಂದ23 ಮಾದರಿ-2 ಹಾಗೂ ಮೇ 26 ರಿಂದ 31ರ ವರೆಗೆ ಮಾದರಿ-3 ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಕೀ ಉತ್ತರಗಳನ್ನು ಅಂದು ಸಂಜೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸರಿ ಉತ್ತರ ಕಂಡುಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಟಿ.ವಿ ಮತ್ತು ಆಂಡ್ರಾಯಡ್ ಮೊಬೈಲ್ ಸೌಲಭ್ಯವಿಲ್ಲದಿರುವಂತಹವರಿಗೆ ಆ ಗ್ರಾಮದಲ್ಲಿ ಟಿವಿ ಮತ್ತು ಆಂಡ್ರಾಯಡ್ ಮೊಬೈಲ್ ಹೊಂದಿರುತ್ತಾರೋ ಅಂತವರೊಂದಿಗೆ ಜೊತೆಗೂಡಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪುನರ್ಮನನ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶೇ.90ರಷ್ಟು ವಿದ್ಯಾರ್ಥಿಗಳನ್ನು ವಿಡೀಯೊ, ವಾಟ್ಸಪ್, ತಂತ್ರಜ್ಞಾನವನ್ನು ಬಳಸಿಕೊಂಡು ಪರೀಕ್ಷೆಗೆ ಅಣಿಗೊಳಿಸಲಾಗಿದೆ. ಜಿಲ್ಲೆಯಲ್ಲಿ 150ರಿಂದ 200 ವಲಸೆ ಮಕ್ಕಳಿದ್ದು, ಅವರಿಗೂ ಆಧುನಿಕ ತಂತ್ರಜ್ಞಾನದ ಮೂಲಕ ಪಾಠಪ್ರವಚನ ನೀಡಲಾಗುತ್ತಿದೆ.
ಹಾಸ್ಟೇಲ್‌ಗಳಲ್ಲಿ ವಾಸವಿದ್ದ ಬೀದರ್, ರಾಯಚೂರು ಮೂಲದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದು ಅವರು ತಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಾರೋ ಅಥವಾ ಜಿಲ್ಲೆಗೆ ಬಂದು ಪರೀಕ್ಷೆ ಬರೆಯುತ್ತಾರೋ ಎಂಬ ಮಾಹಿತಿ ಪಡೆದಿದ್ದು, ಅವರಲ್ಲಿ 30 ಮಕ್ಕಳು ತಮ್ಮ ಜಿಲ್ಲೆಯಲ್ಲೇ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದು, ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಯ ಮಾಹಿತಿ ನೀಡಲಾಗಿದೆ. ಉಳಿದವರು ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಇಚ್ಚಿಸಿದ್ದಾರೆ. ಕೆಲವು ಖಾಸಗಿಶಿಕ್ಷಣ ಸಂಸ್ಥೆಗಳು ಆನ್ ಲೈನ್ ತರಗತಿಗಳನ್ನುನಡೆಸುತ್ತಿವೆ. ಯಾವುದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾದರು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ತಯಾರಿ ಮಾಡಿದೆ.
ಪರೀಕ್ಷೆ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ವಿದ್ಯಾರ್ಥಿಗಳು ಕಾಯ್ದುಕೊಳ್ಳುವ ಉದ್ದೇಶದಿಂದ ಪರೀಕ್ಷಾ ಕೊಠಡಿಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಮಾಸ್ಕ್ ಗಳನ್ನು ಸಂಘ-ಸಂಸ್ಥೆಗಳು ನೀಡುವುದಾಗಿ ತಿಳಿಸಿವೆ. ಸ್ಯಾನಿಟೈಸರ್ ಶಿಕ್ಷಣ ಇಲಾಖೆಯೇ ನೀಡುವುದಾಗಿ ತಿಳಿಸಿದೆ. ಪರೀಕ್ಷೆ ದಿನಾಂಕ ಪ್ರಕಟಗೊಂಡ ನಂತರ 10 ದಿನಗಳ ಕಾಲ ವಿಷಯವಾರು ಪಾಠಪ್ರವಚನ ನಡೆಸಿ ಮಕ್ಕಳನ್ನು ಪರೀಕ್ಷೆಗೆ ಇನಷ್ಟು ಸಿದ್ಧಗೊಳಿಸಲಾಗುವುದು.
-ಸಿ.ನಂಜಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
-ಸಂದೀಪ ಜಿ.ಎನ್. ಶೇಡ್ಗಾರ್