ದೋಟಿಹಾಳ: ಬೆಳಗ್ಗೆ ದೋಟಿಹಾಳದಿಂದ ಬಿಜಕಲ್ ಮೂಲಕ ಕುಷ್ಟಗಿಗೆ ಶಾಲಾ ಕಾಲೇಜು ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಬಿಜಕಲ್ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಬಸ್ ತಡೆದು ಸುಮಾರು 3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಲಾ ವಿಧ್ಯಾರ್ಥಿನಿ ನಮ್ಮ ಗ್ರಾಮದಿಂದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಷ್ಟಗಿ ಪಟ್ಟಣಕ್ಕೆ ಶಾಲಾ ಕಾಲಾಜಿಗೆ ಹೋಗುತ್ತೇವೆ. ನಮಗೆ ಬೆಳಿಗ್ಗೆ ಶಾಲೆಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಹಾಗೂ ಬಸ್ಸಿನಲ್ಲಿ ಹತ್ತುವರೆಗೂ ಚಾಲಕ ಬಸ್ ನಿಲ್ಲಿಸುವದಿಲ್ಲ. ನಿನ್ನೆ ಬಸ್ ಹತ್ತುವ ವೇಳೆ ನನ್ನ ಗೆಳತಿಯರಿಬ್ಬರೂ ಬಸ್ಸಿನಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇವರಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲ, ಬಸ್ಸಿನ ಕಂಡಕ್ಟರ್ ವಿದ್ಯಾರ್ಥಿನಿಯರಿಗೆ ಏಕವಚನದಿಂದಲೇ ಮಾತನಾಡಿಸುತ್ತಾರೆ. ಶಾಲೆಗೆ ತಡವಾಗಿ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೈಯುತ್ತಾರೆ. ಬಸ್ ಇಲ್ಲದೆ ಮನೆಗೆ ಹೋದರೆ ಪಾಲಕರು ಬಯ್ಯುತ್ತಾರೆ ನಾವು ಏನು ಮಾಡಬೇಕೆಂಬ ಸ್ಥಿತಿಯಲ್ಲಿದ್ದೇವೆ ಎಂದು ವಿದ್ಯಾರ್ಥಿನಿಯರು ತನ್ನ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಬಿಲಾವಲ್ ಭುಟ್ಟೋ ಹೇಳಿಕೆ ಖಂಡಿಸಿದ ಸೂಫಿ ಕೌನ್ಸಿಲ್
ದೋಟಿಹಾಳ ಗ್ರಾಮದ ಕಡೆಯಿಂದ ಬೆಳಿಗ್ಗೆ ಒಟ್ಟು ನಾಲ್ಕು ಬಸ್ಸುಗಳು ಕುಷ್ಟಗಿ ಪಟ್ಟಣಕ್ಕೆ ಹೋಗುತ್ತವೆ ಆದರೆ ಎಲ್ಲಾ ಬಸ್ಸುಗಳು ಫುಲ್ ಆಗಿ ಬರುತ್ತವೆ. ಕೆಲವು ಬಸ್ಸು ಇಲ್ಲಿ ನಿಲ್ಲಿಸುತ್ತವೆ ಇನ್ನು ಕೆಲವು ಬಸ್ಸುಗಳು ಹಾಗೆ ಹೊರಟು ಹೋಗುತ್ತವೆ. ಬಸ್ ಫುಲ್ ಆಗಿ ಬಂದಾಗ ನಾವು ಜೊತು ಬಿದ್ದು ಬಸ್ಸಿನಲ್ಲಿ ಹತ್ತಿ ಕೊಂಡು ಹೋಗಬೇಕು. ಈ ವೇಳೆ ಕೆಲವರು ಕಾಲು ಜಾರಿ ಬಿದ್ದ ಘಟನೆಯೂ ನಡೆದಿದೆ. ಹೀಗಾಗಿ ನಮಗೆ ಒಂದು ಪ್ರತ್ಯೇಕ ಬಸ್ ಬಿಡಬೇಕು. ಅಲ್ಲಿಯವರೆಗೆ ನಾವು ಈ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಸ್ಥಳಕ್ಕೆ ಕುಷ್ಟಗಿ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕ ಸಂತೋಷ ಕುಮಾರ ಆಗಮಿಸಿ. ಪ್ರತಿಭಟನಾಕಾರರ ಸಮಸ್ಯೆಯನ್ನು ಕೇಳಿ ಮಾತನಾಡಿದ ಅವರು ದೋಟಿಹಾಳ ಗ್ರಾಮದಿಂದ ಕುಷ್ಟಗಿಗೆ ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸುಮಾರು ನಾಲ್ಕು ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುತ್ತೇವೆ. ಹೆಚ್ಚಿನ ಬಸ್ಸಿನ ಬಿಡಲು ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಬಸ್ಸಿನ ಅವಶ್ಯಕತೆ ಇದ್ದರೆ. ಇಲ್ಲಿಗೆ ನಮ್ಮ ಸಿಬ್ಬಂದಿಯನ್ನು ಕೆಲವು ದಿನಗಳ ಕಾಲ ಇಲ್ಲಿನ ಸ್ಥಿತಿ ಪರಿಶೀಲನೆಗೆ ಕಳಿಸುತ್ತೇನೆ. ಅವರಿಂದ ಬಂದ ವರದಿಯ ಮೇಲೆ ಒಂದು ಬಸ್ಸಿನ ವ್ಯವಸ್ಥೆ ಮಾಡಲು ಮೇಲಿಧಿಕಾರಿಗಳಿಗೆ ಗಮನಕ್ಕೆ ತರುತ್ತೇನೆ ಎಂದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಅಧಿಕಾರಿಗಳ ಜೊತೆ ಮಾತಿನ ಚಕಾಮಿಕೆ ನಡೆಯಿತು ಒಂದು ಹಂತದಲ್ಲಿ ಅಧಿಕಾರಿ ಬೇಸತ್ತು ನಡೆದುಕೊಂಡೆ ಕುಷ್ಟಗಿ ಹೋಗಿ ದೂರ ನೀಡುತ್ತೇನೆ ಎಂದು ಹೇಳಿ ಹೊರಟರು. ಆಗ ಪ್ರತಿಭಟನಾಕಾರರು ಅವರ ಹಿಂದೆ ಹೊರಟರು ದಾರಿಯ ಮಧ್ಯದಲ್ಲಿ ಕುಷ್ಟಗಿ ಪಿಎಸ್ಐ ಮೌನೇಶ ರಾಠೋಡ ಅವರು ಆಗಮಿಸಿ ಪ್ರತಿಭಟನಾಕಾರರನ್ನು ಮನವಲಿಸಿ, ಅಧಿಕಾರಿಗಳ ಮಾತಿಗೆ ಬೆಲೆ ನೀಡಿ. ಕೆಲವು ದಿನ ಕಾಲಾವಕಾಶ ನೀಡಿ ನಂತರ ಇದರ ಬಗ್ಗೆ ಮಾತನಾಡೋಣ. ಈಗ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡುವುದು ತಪ್ಪು ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಇಂಥ ಪ್ರತಿಭಟನೆಯಿಂದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹೀಗಾಗಿ ಕಾನೂನು ಪಾಲಿಸಿ ಎಂದು ತಿಳಿಮಾತು ಹೇಳಿದರು. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಇದನ್ನೂ ಓದಿ: ಭೂಪಟದಲ್ಲಿ ಪಾಕಿಸ್ತಾನ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ: ಕೆ.ಎಸ್.ಈಶ್ವರಪ್ಪ
ಈ ಪ್ರತಿಭಟನೆಯಿಂದ ಸುಮಾರು 8ಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ರಸ್ತೆ ಮಧ್ಯದಲ್ಲಿ ನಿಂತಿದ್ದವು ಇದರಿಂದ 3-4 ತಾಸು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಪ್ರತಿನಿತ್ಯ ದೋಟಿಹಾಳ ಗ್ರಾಮದಿಂದ ಕುಷ್ಟಗಿಗೆ ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸುಮಾರು ನಾಲ್ಕು ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುತ್ತೇವೆ. ಈ ವೇಳೆ ಹೆಚ್ಚುವರಿ ಬಸ್ ಬಿಡಲು ಸಾಧ್ಯವಿಲ್ಲ. ಕಾರಣ ತಾಲೂಕಿನ ಎಲ್ಲಾ ಹಳ್ಳಿಗಳ ಶಾಲಾ ಮಕ್ಕಳು ಇದೆ ವೇಳೆಗೆ ಬಸ್ ಬಿಡಿ ಎಂದರೆ. ಬಸ್ಸಿನ ಸಮಸ್ಯೆಯಾಗುತ್ತದೆ ಹೀಗಾಗಿ ವಿದ್ಯಾರ್ಥಿಗಳು ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಕಡೆಗೆ ಒಂದೇ ಸಮಯಕ್ಕೆ ಒಂದೊಂದು ಬಸ್ ಬಿಡಲು ತೊಂದರೆಯಾಗುತ್ತದೆ.
–ಸಂತೋಷ ಕುಮಾರ.ಕುಷ್ಟಗಿ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕ.
ವಿದ್ಯಾರ್ಥಿಗಳೇ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡುವುದು ತಪ್ಪು ಕಾನೂನು ಕೈಗೆತ್ತಿಕೊಳ್ಳಬೇಡಿ. ಮುಂದೊಂದು ದಿನ ನಿಮ್ಮ ಭವಿಷ್ಯಕ್ಕೆ ಇಂಥ ಘಟನೆಗಳು ಮುಳ್ಳಾಗುವ ಸಾಧ್ಯತೆ ಇದೆ. ಕಾನೂನು ತೊಡಕು ಇಲ್ಲದ ರೀತಿಯಲ್ಲಿ ಪ್ರತಿಭಟನೆ ಮಾಡಿ ನಿಮ್ಮ ಬೇಡಿಕೆಯನ್ನು ಪಡೆದುಕೊಳ್ಳಿ.
– ಮೌನೇಶ ರಾಠೋಡ, ಪಿಎಸ್ಐ ಕುಷ್ಟಗಿ.