Advertisement

ವಿದ್ಯಾರ್ಥಿಗಳೇ, ಇತಿಹಾಸ ಅರಿತು ನಿಸ್ವಾರ್ಥ ಬದುಕು ನಡೆಸಿ

06:54 AM Jun 26, 2019 | Lakshmi GovindaRaj |

ತಿ.ನರಸೀಪುರ: ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ಯುವ ಕರ್ನಾಟಕ ಸಾಂಸ್ಕೃತಿಕ ಪರಂಪರೆಯಲ್ಲಿನ ಆಚರಣೆಗಳನ್ನು ಕಾಪಾಡುವ ಜವಾಬ್ದಾರಿ ಇದೆ. ಕರ್ನಾಟಕ ಸಾಂಸ್ಕೃತಿಕ ಪರಂಪರೆಯಲ್ಲಿನ ವೀರ, ತ್ಯಾಗ, ದಾನ ಮತ್ತು ಧರ್ಮ ಸಮನ್ವಯತೆ ವಿಶ್ವ ಖ್ಯಾತಿ ತಂದುಕೊಟ್ಟಿವೆ ಎಂದು ಪುರಾತತ್ವ ಇಲಾಖೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.

Advertisement

ಪಟ್ಟಣದ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ “ಕರ್ನಾಟಕದ ಅಮೂರ್ತ ಪರಂಪರೆಯ ಆಚರಣೆಗಳ’ ಕುರಿತ ರಾಜ್ಯ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಇತಿಹಾಸ ಅವಲೋಕನ ಮಾಡಿದರೆ ಇಲ್ಲಿ ಆಳಿದ ರಾಜರು, ಪ್ರೀತಿ ಪಾತ್ರರಿಗೆ, ದ್ವಿಗಿಜಯ ಸಾಧನೆ ಅನೇಕ ಹೊಸ ಪರಂಪರೆಗಳನ್ನು ಹುಟ್ಟು ಹಾಕಿದರು. ಅನೇಕ ಆಚರಣೆಗಳನ್ನು ಜಾರಿಗೊಳಿಸಿದರು. ವಿದ್ಯಾರ್ಥಿಗಳು ಇತಿಹಾಸವನ್ನು ಅವಲೋಕಿಸಿ ತಿಳಿದು ನಿಸ್ವಾರ್ಥ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಲೆಗಳಿಗೆ ಪ್ರೋತ್ಸಾಹ: ಸಂಗೀತ, ಸಾಹಿತ್ಯ, ಹಬ್ಬ ಉತ್ಸವ ಜಾತ್ರೆಗಳಿಗೆ ವಿಶೇಷ ಮೆರಗು ನೀಡಿದರು. ಕರಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಿದರು. ಈ ಎಲ್ಲಾ ವಿಶೇಷತೆಗಳು ನಾಡಿನ ಪರಂಪರೆಯನ್ನು ಸಂಸ್ಕೃತಿಗಳು ಇಂದಿಗೂ ಜೀವಂತಗೊಳಿಸಿವೆ ಎಂದರು.

ಧರ್ಮ ಸಮನ್ವಯತೆ: ಜೈನ ಧರ್ಮ, ವೀರಶೈವ ಧರ್ಮ, ನೆರೆಯ ತಮಿಳುನಾಡಿನ ರಾಮಾನುಜಚಾರ್ಯರು, ಶಂಕರಚಾರ್ಯರು ಸ್ಥಾಪಿಸಿದ ಸಿದ್ಧಾಂತಗಳಿಗೆ ನೆಲೆ ನೀಡಿದ ಕರ್ನಾಟಕ ಧರ್ಮ ಸಮನ್ವಯತೆಯನ್ನು ಇಂದಿಗೂ ಕಾಪಾಡಿಕೊಂಡಿದೆ. ಇವು ನಮ್ಮ ಹೃದಯ, ಮನಸ್ಸನ್ನು ಪರಿಪಕ್ವಗೊಳಿಸುತ್ತವೆ.

Advertisement

ಈ ಪೀಳಿಗೆಯ ಮೈಸೂರು ಪ್ರಾಚೀನ ಇತಿಹಾಸ ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಕೃಷ್ಣಪ್ಪ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಗಳಲ್ಲಿರುವ ಆಚರಣೆಗಳಲ್ಲಿ ವೈವಿಧ್ಯತೆ ಜತೆಗೆ ಉತ್ಕೃಷ್ಟತೆ ಇದೆ.

ಜೈನ ಶಾಸನ, ಚಾಲುಕ್ಯರ ಶಾಸನ, ಬೆಳತೂರು ಶಾಸನ ವಿವಿಧ ಶಾಸನಗಳಲ್ಲಿ ಅಮೂರ್ತ ಆಚರಣೆಗಳಿವೆ. ಸತಿ ಸಹಗಮನ ಪದ್ಧತಿ, ವೀರಗಲ್ಲು, ಸಿಡಿತಲೆ ಅನೇಕ ಆಚರಣೆಗಳಿವೆ. ಆಚಾರ್ಯರ ದಾಸ ಸಾಹಿತ್ಯ, ಪರಂಪರೆ ಉತ್ಕೃಷ್ಟವಾಗಿ ಉಳಿದಿವೆ. ಆದರೆ, ಕೆಲವು ಪರಂಪರೆಗಳು ಅಳಿಸಿಹೋಗುತ್ತಿವೆ ಎಂದರು.

ಬೆಂಗಳೂರಿನ ಬಿಎಚ್‌ಎಸ್‌ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಆರ್‌. ಪ್ರಭಾಕರ್‌ ಮಾತನಾಡಿ, ವಿಚಾರ ಸಂಕಿರಣಗಳು ಪುಸ್ತಕಗಳಲ್ಲಿರದ ಅನೇಕ ವಿಚಾರಗಳನ್ನು ತಿಳಿಯಲು ವೇದಿಕೆಯಾಗಿವೆ. ವಿದ್ವಾಂಸರ ಅನುಭವ ಕಥನಗಳು ಬದುಕಿಗೆ ಮತ್ತಷ್ಟು ಮಾರ್ಗದರ್ಶನ ನೀಡುತ್ತವೆ ಎಂದರು.

ಮೊದಲ ದಿನದ ಗೋಷ್ಠಿಯಲ್ಲಿ ಕರ್ನಾಟಕದ ಗ್ರಾಮೀಣ ದಸರಾ ಪರಂಪರೆ ಕುರಿತು ಡಾ. ರಂಗನಾಥ್‌, ಹಬ್ಬಗಳ ಆಚರಣೆ ಮತ್ತು ಧರ್ಮ ಸಮನ್ವಯ ಕುರಿತು ಪ್ರೊ. ಪದ್ಮನಾಭ್‌, ನಾಗರಾಧನೆ ಮತ್ತು ನಾಗರ ಪಂಚಮಿ ಕುರಿತು ಕಾರ್ಕಳದ ಡಾ. ಅರುಣ್‌ ಕುಮಾರ್‌ ಮತ್ತು ಕರ್ನಾಟಕದ ಭಕ್ತಿಪಂಥಕ್ಕೆ ಮಾಧ್ವ ಪರಂಪರೆಯ ದಾಸ ಪಂಥದ ಕೊಡುಗೆ ಯ ಕುರಿತು ಡಾ. ಅನಿಲ್‌ ಕುಮಾರ್‌ ಉಪನ್ಯಾಸ ನೀಡಿದರು.

ಪ್ರಾಂಶುಪಾಲ ಪ್ರೊ.ಎ. ಪದ್ಮನಾಭ, ಉಪಪ್ರಾಂಶುಪಾಲ ಸಿ. ಚಂದ್ರಮೋಹನ್‌, ಇತಿಹಾಸ ಪ್ರಾಧ್ಯಾಪಕ ಡಾ.ಲ.ನಾ. ಸ್ವಾಮಿ ಹಾಗೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next