ರಾಮನಗರ: ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿದ್ಯಾರ್ಥಿಯೊಬ್ಬ ಮತ್ತೂಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಪ್ರಕರಣ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರು ಶ್ರೀರಾಮಪುರಂ ಮೂಲದ ವಿದ್ಯಾರ್ಥಿ ವಿಘ್ನೇಶ್ ಚಾಕು ಇರಿತಕ್ಕೆ ಒಳಗಾಗಿರುವ ವಿದ್ಯಾರ್ಥಿ. ಈತನ ಬೆನ್ನು, ಹೊಟ್ಟ, ಹಣೆ ಮತ್ತು ಕೈಗಳಿಗೆ ಚಾಕುವಿನಿಂದ ಗಾಯಗಳಾಗಿವೆ. ಬೆಂಗಳೂರು ಕಾಮಾಕ್ಷಿ ಪಾಳ್ಯದ ವಿದ್ಯಾರ್ಥಿ ಸಿದ್ದರಾಜು ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿ.
ಕಾರಣ ಏನು?: ಗಾಯಗೊಂಡಿರುವ ವಿಘ್ನೇಶ್ ಮತ್ತು ಗಾಯಗೊಳಿಸಿದ ಸಿದ್ದರಾಜು ಇಬ್ಬರು ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು. ವಿಘ್ನೇ ಶ್ ಆಪ್ತಾಲ್ಮಜಿ ವಿಭಾಗದಲ್ಲಿ ಮತ್ತು ಸಿದ್ದರಾಜು ಎಕ್ಸ್‌ರೇ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಬ್ಬರು ಕೆಂಪೇಗೌಡನದೊಡ್ಡಿಯಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದಾರೆ.
ಸೋಮವಾರ ರಾತ್ರಿ ಹಾಸ್ಟೇಲ್‌ನ ಹೊರಗಡೆಯ ಬಯಲಿನಲ್ಲಿ ಸಿದ್ದರಾಜು ಮತ್ತು ವಿಘ್ನೇಶ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಇಬ್ಬರು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾರೆ. ಇಲ್ಲಿಗೆ ಬರುವ ಮೊದಲು ಸಿದ್ದರಾಜು ಅಂಗಡಿಯೊಂದರಿಂದ ಚಾಕು ಖರೀದಿಸಿ ತಂದಿದ್ದಾನೆ. ಕೊಠಡಿ ಸಂಖ್ಯೆ 14ಕ್ಕೆ ವಿಘ್ನೇಶ್‌ನನ್ನು ಬರಲು ಹೇಳಿದ ಸಿದ್ದರಾಜು ಮತ್ತೆ ಅವನನ್ನು ಕೆಣಕಿದ್ದಾನೆ. ಇಬ್ಬರು ವಾಗ್ವಾದಕ್ಕಿಳಿದಿದ್ದಾರೆ.
ರೊಚ್ಚಿಗೆದ್ದ ಸಿದ್ದರಾಜು ತನ್ನ ಬಳಿ ಇದ್ದ ಚಾಕುವಿನಿಂದ ವಿಘ್ನೇಶನ ಮೇಲೆ ಹಲ್ಲೆ ನಡೆಸಿದ್ದಾರೆ. ಈತನ ಚೀರಾಟ ಕೇಳಿಸಿಕೊಂಡು ಆಸ್ಪತ್ರೆಯಲ್ಲಿದ್ದವರು ವಿಘ್ನೇಶನನ್ನು ರಕ್ಷಿಸಿದ್ದಾರೆ. ಆದರೆ ಸಿದ್ದರಾಜು ಪರಾರಿಯಾಗಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ದೊರೆಯುತ್ತಿದೆ.
ಈ ಮಧ್ಯೆ ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿರುವ ದೃಶ್ಯಾವಳಿಗಳನ್ನು ಪೊಲೀಸರಿಗೆ ವಶಕ್ಕೆ ಒಪ್ಪಿಸಿದ್ದು, ನಗರ ಠಾಣೆಗೆ ದೂರು ನೀಡಿರುವುದಾಗಿ ಜಿಲ್ಲಾ ಶಸ್ತ್ರಚಕಿತ್ಸಕ ವಿವೇಕ್ ದೊರೈ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ಮಧ್ಯೆ ನೂರಾರು ಜನ ರೋಗಿಗಳು ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯಲು ಆಗಮಿಸಿದ್ದು, ಆಸ್ಪತ್ರೆಯಲ್ಲಿ ನೆತ್ತರು ಸುರಿದಿದ್ದ ಹಿನ್ನೆಲೆಯಲ್ಲಿ ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.