Advertisement

ಭತ್ತದ ಗದ್ದೆಯಲ್ಲಿ ಕಲರವ, ಮಕ್ಕಳಿಗೆ ಜೀವನಾನುಭವ

02:35 AM Jul 11, 2018 | Team Udayavani |

ಬೆಳಂದೂರು: ಭತ್ತ ಪ್ರಮುಖ ಆಹಾರ ಬೆಳೆ. ಅಕ್ಕಿ ಯಾವ ರೀತಿ ಬೆಳೆಯುತ್ತದೆ ಎಂಬ ಮಾಹಿತಿಯೂ ಹೆಚ್ಚಿನ ಮಕ್ಕಳಿಗೆ ಇರುವುದಿಲ್ಲ. ಗದ್ದೆಯನ್ನು ಕಾಣುವುದೇ ವಿರಳವಾಗಿರುವ ಈ ದಿನಗಳಲ್ಲಿ ಭತ್ತದ ಬೇಸಾಯದ ಬಗ್ಗೆ ಆಸಕ್ತಿ, ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕುದ್ಮಾರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಮಕ್ಕಳಿಗೆ ಸೀತಾರಾಮ ಖಂಡಿಗ ಅವರ ಡೆಬ್ಬೆಲಿಯ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯಲ್ಲಿ ಪರಿಣತರಿಂದ ಮಾಹಿತಿ ನೀಡಲಾಯಿತು.

Advertisement

ಉತ್ಸಾಹ
ಮಕ್ಕಳು ಆಸಕ್ತಿಯಿಂದ ಗದ್ದೆಗೆ ಇಳಿದರು. ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಹಾಡುತ್ತಿದ್ದ “ಓ ಬೇಲೇ… ಓ ಬೇಲೆ…’ ಮಕ್ಕಳ ಬಾಯಲ್ಲೂ ಸರಾಗವಾಗಿ ಕೇಳಿ ಬಂತು. ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಲು ಜಾನಪದ ಹಾಡು – ಪಾಡ್ದನಗಳನ್ನು ಮಹಿಳೆಯರು ಹಾಡುತ್ತಿದ್ದರು. ಇವುಗಳನ್ನು ಮಕ್ಕಳೂ ಹಾಡಿ ಸಂಭ್ರಮಿಸಿದರು. ಮಕ್ಕಳು ಸ್ವತಃ ಗದ್ದೆಗಿಳಿದರೆ ಮಾತ್ರ ಕೃಷಿಯ ಕಷ್ಟ- ಖುಷಿಯ ನೈಜ ತಿಳಿವಳಿಕೆ ಬರಲು ಸಾಧ್ಯ ಎಂದು ಅರಿತ ಶಿಕ್ಷಕರು ತಾವೂ ಮಕ್ಕಳೊಂದಿಗೆ ಗದ್ದೆಗಿಳಿದು, ಬೆರೆತು ಹುರಿದುಂಬಿಸಿದರು. ಜಿನುಗುವ ಮಳೆ, ಬೀಸುವ ಗಾಳಿಯನ್ನು ಲೆಕ್ಕಿಸದೆ ಮಕ್ಕಳು ನೇಜಿ ನೆಡುವ ಕಾರ್ಯದಲ್ಲಿ ಪಾಲ್ಗೊಂಡು ಅನುಭವ ಪಡೆದರು. ಇಲ್ಲಿನ ಮಕ್ಕಳು ಹಿರಿಯರ ಜತೆ ನೇಜಿ ನಾಟಿ ಮಾಡಲು ಗದ್ದೆಗೆ ಇಳಿದ ಬಗೆ ಅನನ್ಯವಾಗಿತ್ತು.

ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು, ಬೆಳಂದೂರು ಗ್ರಾ.ಪಂ. ಉಪಾಧ್ಯಕ್ಷ ಹರೀಶ್‌ ಕೆರೆನಾರು, ಶೇಷಪ್ಪ ಗೌಡ, ಸೀತಾರಾಮ ಗೌಡ, ಸುಂದರ ಗೌಡ, ವಿಶ್ವನಾಥ ಗೌಡ, ಚೆನ್ನಪ್ಪ ಗೌಡ, ತುಳಸಿ, ಲಕ್ಷ್ಮೀ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಲತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಅಶ್ವಿ‌ನಿ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಜೀವನದ ಪಾಠ
ಜೀವನಾಧಾರವಾಗಿರುವ ಭತ್ತದ ಕೃಷಿಯ ಕುರಿತು ಮಕ್ಕಳ ಅನುಭವ ಅವರ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಉತ್ತಮ ಬೆಳವಣಿಗೆ. ಮಕ್ಕಳಿಗೆ ಶೈಕ್ಷಣಿಕ ವಿಚಾರಗಳ ಜತೆಗೆ ಜೀವನಾನುಭವದ ಪಾಠವೂ ಅತ್ಯಗತ್ಯ. ಇಂತಹ ಕಾರ್ಯ ಎಲ್ಲೆಡೆ ನಡೆಯಬೇಕು.
– ಹರೀಶ್‌ ಕೆರೆನಾರು, ಉಪಾಧ್ಯಕ್ಷರು, ಬೆಳಂದೂರು ಗ್ರಾ.ಪಂ.

ಒಳ್ಳೆಯ ಅನುಭವ
ನಮಗೆ ಊಟ ಮಾಡುವ ಅಕ್ಕಿಯನ್ನು ಬೆಳೆಯಲು ಎಷ್ಟು ಕಷ್ಟ ಇದೆ, ಯಾವ ರೀತಿ ಅದನ್ನು ಬೆಳೆಸಬೇಕು, ಭತ್ತದ ಕೃಷಿಯ ಪ್ರಾಮುಖ್ಯದ ಕುರಿತು ಇಂತಹ ಕಾರ್ಯಕ್ರಮದಿಂದ ತಿಳಿಯುವಂತಾಗಿದೆ. ಇದು ಒಳ್ಳೆಯ ಅನುಭವ.
– ಸುಕನ್ಯಾ ಅನ್ಯಾಡಿ, ವಿದ್ಯಾರ್ಥಿನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next