ಮೈಸೂರು: ನಮ್ಮಲ್ಲಿ ಎಷ್ಟೇ ಹಣ, ಸಂಪತ್ತು ಇದ್ದರೂ, ಸರಳ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಮೈಸೂರು ವಿಜಯನಗರ ನಾಲ್ಕನೇ ಹಂತದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮರ್ಥ್ಯ: ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ. ಉನ್ನತ ಹುದ್ದೆ ಅಲಂಕರಿಸಲು ಹಾಗೂ ಸಾಧನೆ ಮಾಡಲು ಹೆಣ್ಣು-ಗಂಡು ಎಂಬ ಭೇದವಿಲ್ಲ. ನಮ್ಮಲ್ಲಿ ಸಾಮರ್ಥ್ಯವಿರಬೇಕಷ್ಟೇ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಬಾಹ್ಯ ಆಕರ್ಷಣೆಗಳಿಗೆ ಮಾರುಹೋಗದೇ ತಮ್ಮ ಜವಾಬ್ದಾರಿಯನ್ನು ಅರಿತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಗಾತಿ ಆಯ್ಕೆ: ಒಂದು ವೇಳೆ ನಿಮಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದರೆ, ಒಳ್ಳೆಯ ಹಾಗೂ ಸಂಸ್ಕಾರವಂತ ಹುಡುಗನನ್ನು ಆರಿಸಿಕೊಳ್ಳಿ. ಆದರೆ, ನಿಮ್ಮ ಆಯ್ಕೆಯನ್ನು ಪೋಷಕರು ಮೆಚ್ಚುವಂತೆ ಇರಬೇಕು ಎಂದು ಕಿವಿಮಾತು ಹೇಳಿದರು. ನಮ್ಮಲ್ಲಿ ಎಷ್ಟೇ ಹಣ, ಸಂಪತ್ತು, ಐಶ್ವರ್ಯ ಇದ್ದರೂ, ಸರಳವಾಗಿ ಜೀವನ ನಡೆಸಬೇಕು. ಆಡಂಬರ ಜೀವನದಿಂದ ಏನು ಸಿಗುವುದಿಲ್ಲ. ಇರುವುದರಲ್ಲಿಯೇ ತೃಪ್ತಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಇನ್ಫೋಸಿಸ್‌ನ ಸುಧಾಮೂರ್ತಿ ನಿಮಗೆ ಮಾದರಿ ಆಗಬೇಕು ಎಂದರು.
ಜೀವನ ರೂಪಿಸಿಕೊಳ್ಳಿ: ವಿದ್ಯಾರ್ಥಿನಿಯರು ಪಠ್ಯ ಚಟುವಟಿಕೆಗಳಿಗೆ ಎಷ್ಟು ಮಹತ್ವ ನೀಡುತ್ತೀರೋ, ಅಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮಾನಸಿಕ ಹಾಗೂ ಬೌದ್ಧಿಕವಾಗಿ ವಿಕಾಸವಾಗಬಹುದು. ಸರ್ಕಾರವು ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕೆ. ಸತೀಶ್ ಬಾಬು ಇತರರಿದ್ದರು.
300 ಪದವಿ ಕಾಲೇಜು ಪ್ರಾಂಶುಪಾಲ ಹುದ್ದೆ ಭರ್ತಿ: ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ವೇಳೆ 300ಕ್ಕೂ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇರಲಿಲ್ಲ. ಉಪನ್ಯಾಸಕರೇ ಎರಡೂ ಹುದ್ದೆಯನ್ನು ನಿಭಾಯಿಸುವ ಪರಿಸ್ಥಿತಿ ಇತ್ತು. ಇದರಿಂದ ಪಠ್ಯಚಟುವಟಿಕೆ ತೀರಾ ಹಿಂದುಳಿದಿತ್ತು. ಕೂಡಲೇ ಖಾಲಿ ಇರುವ ಪಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಿ, ಎಲ್ಲಾ ಕಾಲೇಜುಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಜೊತೆಗೆ ಈ ಕಾಲೇಜು ಕಟ್ಟಡ, ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 6 ಕೋಟಿ ರೂ. ಮಂಜೂರು ಮಾಡಿ, ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.