Advertisement

ವಿದ್ಯಾರ್ಥಿಗಳೇ ಮಾಫಿಯಾಗಳ ಟಾರ್ಗೆಟ್‌

06:00 AM Jul 07, 2018 | |

ಜಿಲ್ಲೆಯ ವಿವಿಧ ಪ್ರೌಢ ಶಾಲೆ ಹಾಗೂ ಹೈಯರ್‌ ಸೆಕೆಂಡರಿ ಸ್ಕೂಲ್‌ ವಿದ್ಯಾರ್ಥಿಗಳಲ್ಲಿ  ಗಾಂಜಾ ವ್ಯಸನ ಹೆಚ್ಚಾಗಿದೆ. ಶಾಲಾ ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಗಾಂಜಾ ಮಾರಾಟ ನಡೆಸುತ್ತಿರುವ ಮಾಫಿಯಾಗಳು ಸಕ್ರಿಯವಾಗಿವೆ. ವಿದ್ಯಾರ್ಥಿಗಳಲ್ಲಿ  ಗಾಂಜಾ ಸಹಿತ ಮಾದಕ ವಸ್ತುಗಳ ಚಟ ಹೆಚ್ಚುತ್ತಿರುವುದು ಮತ್ತು ಈ ಮಕ್ಕಳು ಗಾಂಜಾ ಮಾಫಿಯಾಗಳ ಬಲವಾದ ಹಿಡಿತದಲ್ಲಿದ್ದಾರೆ. ಆದರೆ ಸಂಪೂರ್ಣವಾಗಿ ವಿದ್ಯಾರ್ಥಿಗಳಲ್ಲಿನ ಮಾದಕ ವಸ್ತುಗಳ ಚಟವನ್ನು ಬಿಡಿಸುವುದು ಹೇಗೆ ಎಂಬುದೇ ಅಧಿಕಾರಿಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ.

Advertisement

ಕಾಸರಗೋಡು: ಜಿಲ್ಲೆಯ ಶಾಲಾ ಕಾಲೇಜುಗಳ ಪರಿಸರದಲ್ಲಿ ಮಾದಕ ವಸ್ತುಗಳ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳೇ ಇದರ ಟಾರ್ಗೆಟ್‌. ಜಿಲ್ಲೆಯ ಪ್ರೌಢ ಶಾಲೆ, ಸರಕಾರಿ ಕಾಲೇಜುಗಳ ಸಹಿತ ಉನ್ನತ ಶಿಕ್ಷಣ ಕೇಂದ್ರಗಳ ಪರಿಸರದಲ್ಲಿ ಮಾದಕ ವಸ್ತುಗಳ ಮಾಫಿಯಾ ವ್ಯಾಪಕವಾಗಿ ಬೇರೂರಿದ್ದು, ತಮ್ಮ ದಂಧೆಯನ್ನು ವಿಸ್ತರಿಸಿದೆ.

ಪ್ಲಸ್‌ವನ್‌ ವಿದ್ಯಾರ್ಥಿಯೋರ್ವ ಮಾದಕ ವಸ್ತುವಿನ ಗುಲಾಮನಾಗಿರುವ ಬಗ್ಗೆ ಆತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಾಗೃತರಾದ ಪೊಲೀಸರು  ಜೂ.29 ರಂದು ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಗ್ಯಕ್ಕೆ ತೀವ್ರ ಮಾರಕವಾದ ಪ್ರತ್ಯೇಕ ವಿಧದ 27 ಪ್ಯಾಕೆಟ್‌ ಇ-ಸಿಗರೇಟ್‌ ಮತ್ತು  ಇಲೆಕ್ಟ್ರಾನಿಕ್‌ ಪೆನ್ನುಗಳಲ್ಲಾಗಿ ಬಳಸುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಈ ಸಂಬಂಧ ಚೆಟ್ಟಂಗುಳಿ ನಿವಾಸಿ ಸಿ.ಅಬ್ದುಲ್‌ ಖಾದರ್‌ (38)ನನ್ನು ಬಂಧಿಸಿದ್ದರು.

ಕಾಸರಗೋಡು ನಗರ ವ್ಯಾಪ್ತಿಯ ಮತ್ತು  ಪರಿಸರದ ಹಲವಾರು ಮಂದಿ ವಿದ್ಯಾರ್ಥಿಗಳು ಈ ರೀತಿಯ ಮಾದಕ ವಸ್ತುಗಳನ್ನು  ಗಣನೀಯ ಪ್ರಮಾಣದಲ್ಲಿ  ಸೇವಿಸುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಾಸರಗೋಡು ಸಿ.ಐ. ಅಬ್ದುಲ್‌ ರಹೀಂ ಅವರ ನಿರ್ದೇಶನದ ಪ್ರಕಾರ ಎಸ್‌.ಐ. ಪಿ. ಅಜಿತ್‌ಕುಮಾರ್‌ ನೇತೃತ್ವದ ಪೊಲೀಸರ ತಂಡವು ಈ ಕಾರ್ಯಾಚರಣೆ ನಡೆಸಿತ್ತು. ತಂಡದಲ್ಲಿ  ಎ.ಎಸ್‌.ಐ. ವೇಣುಗೋಪಾಲನ್‌, ಸಿವಿಲ್‌ ಪೊಲೀಸ್‌ ಆಫೀಸರ್‌ ಥೋಮಸ್‌ ಮುಂತಾದವರಿದ್ದರು. ಪ್ರಕರಣದ ಕುರಿತು ಇನ್ನಷ್ಟು  ತನಿಖೆ ಮುಂದುವರಿಸುತ್ತಿರುವಂತೆ ಜು. 4ರಂದು ಚೆಮ್ನಾಡ್‌ ಶಾಲಾ ಪರಿಸರದ ಅಂಗಡಿಯೊಂದರಿಂದ ಗಾಂಜಾ, ಹುಕ್ಕ, ಇ-ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ಚೆಮ್ನಾಡ್‌ ನಿವಾಸಿ ಝಹೀರ್‌ ಅಬ್ಟಾಸ್‌(33)ನನ್ನು ಬಂಧಿಸಿದ್ದಾರೆ. ಈತನಿಂದ 15 ಗ್ರಾಂ ಗಾಂಜಾ ಪ್ಯಾಕೆಟ್‌, ಗಾಂಜಾ ಸೇದಲು ಬಳಸುವ ಒಸಿಬಿ ಪೇಪರ್‌ಗಳು, 8ರಷ್ಟು ಹುಕ್ಕಾಗಳು, ಇ-ಸಿಗರೇಟ್‌, ಇದರ ಚಾರ್ಜರ್‌ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಾಮಗ್ರಿಗಳು ಮುಂಬಯಿಯಿಂದ ಬರುತ್ತಿವೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಮಾದಕ ವಸ್ತುಗಳು ಜಿಲ್ಲೆಗೆ ಬರುವ ಮೂಲ ಮತ್ತು ಇದರ ಹಿಂದಿನ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
 
ಎಸ್‌.ಪಿ.ಯಿಂದ ಜಾಗೃತಿ
ಕಾಸರಗೋಡು ಎಸ್‌.ಪಿ. ಡಾ| ಶ್ರೀನಿವಾಸ್‌ ಚೆರ್ವತ್ತೂರಿನಿಂದ ಮಂಜೇ ಶ್ವರದ ವರೆಗೆ  ಸೈಕಲ್‌ನಲ್ಲಿ  ಮಾದಕ ವಸ್ತುಗಳ ಬಗ್ಗೆ ಜಾಗೃತಿ ರ್ಯಾಲಿ ನಡೆಸಿದ್ದರು. ಜಿಲ್ಲೆಯ ಶಾಲಾ – ಕಾಲೇಜು ಪರಿಸರಗಳನ್ನು ಕೇಂದ್ರೀಕರಿಸಿ ನಡೆಯುವ ಗಾಂಜಾ- ಮಾದಕ ವಸ್ತುಗಳ ಮಾಫಿಯಾವನ್ನು ಹತ್ತಿಕ್ಕಲು ಸಾರ್ವ ಜನಿಕರ ಸಹಕಾರ ಅಗತ್ಯ ಎಂದು ಅವರು ಹೇಳಿದ್ದಾರೆ. ಈಗಾಗಲೇ ಗಾಂಜಾ ಮಾಫಿಯಾದ ವಿರುದ್ಧ ಜಿಲ್ಲೆ ಯಲ್ಲಿ ಪೊಲೀಸ್‌ ಕಾರ್ಯಾಚರಣೆ ಆರಂಭಗೊಂಡಿದೆ. ಮಾದಕ ವಸ್ತುಗಳ ಮಾಫಿಯಾ ಹತ್ತಿಕ್ಕುವ ಸಲುವಾಗಿ ಜಿಲ್ಲೆಯ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲ ಕ್ಲಬ್‌ಗಳ, ರೆಸಿಡೆನ್ಸಿಯಲ್‌ ಅಸೋಸಿಯೇಶನ್‌, ಜನಮೈತ್ರಿ ಪೊಲೀಸ್‌ ಸಮಿತಿ ಸದಸ್ಯರನ್ನು ಸೇರಿಸಿಕೊಂಡು ಕಾರ್ಯಾಚರಣೆಗಿಳಿಯಲು ಪೊಲೀಸರು ನಿರ್ಧರಿಸಿದ್ದಾರೆ.

Advertisement

ಏನಿದು ಇ-ಸಿಗರೇಟ್‌, ಹುಕ್ಕಾ
ವಿದೇಶದಲ್ಲಿ  ನಿರ್ಮಿತ ಪೆನ್ನಿನ ಹಾಗೆ ತೋರುತ್ತಿರುವ ವಸ್ತುವಾಗಿದೆ ಇ-ಸಿಗರೇಟ್‌. ಆದರೆ ಅತೀ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಬರೆಯಲು ಬಳಸುವ ಪೆನ್‌ ಅಲ್ಲ. ಬದಲಾಗಿ ಜಾರ್ಜ್‌ ಮಾಡುವ ಯುಎಸ್‌ಬಿ ಫೋರ್ಟ್‌ ಅದರೊಳಗೆ ಒಳಗೊಂಡಿರುವುದನ್ನು ಗಮನಿಸಬಹುದಾಗಿದೆ. ಆ  ಪೆನ್ನಿನ ನಡುಭಾಗದಲ್ಲಿ ಅಳವಡಿಸಲಾಗಿರುವ ಗುಂಡಿ(ಬಟನ್‌) ಯನ್ನು ಒತ್ತಿದಲ್ಲಿ ಆ ಪೆನ್‌ ಕಾರ್ಯಾಚರಿಸುತ್ತದೆ. ಇದರ ಬೆಲೆ 1,200 ರೂ. ತನಕವಿದೆ. ಅದರಲ್ಲಿ ಬಳಸುವ ಬ್ರೈನ್‌ ಫ್ರೀಜರ್‌ ಎಂಬ ಅಮಲು ಪದಾರ್ಥವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪೆನ್‌ನಲ್ಲಿ 15 ಮಿಲಿ ಗ್ರಾಂ ಫ್ರೀಜರ್‌ ಎಂಬ ಅಮಲು ಪದಾರ್ಥ ಸುರಿದಲ್ಲಿ 3,000 ಬಾರಿ ಅದರ ಹೊಗೆಯನ್ನು ಸೇದಿ ಅಮಲು ಬರಿಸಬಹುದು.

ಹುಕ್ಕಾ ಅರೇಬಿಯನ್‌ ರಾಷ್ಟ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಕಂಡು ಬರುವ ಉಪಕರಣ ವಾಗಿದೆ. ಆಡಂಬರ ಹೊಟೇಲ್‌ಗ‌ಳಲ್ಲಿ ಕಾಣಸಿಗುವ ಈ ಉಪಕರಣ ಕೇರಳದಲ್ಲೂÉ ಸುಲಭವಾಗಿ ಲಭಿಸುತ್ತದೆ. ಇದನ್ನು ಮಕ್ಕಳು ತಂಡವಾಗಿ ಬಂದು ಖರೀದಿಸುತ್ತಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಾತ್ರಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಹಸ್ಯ ಕೇಂದ್ರಗಳಲ್ಲಿ ಗುಂಪಾಗಿ ಸೇರಿ ಸೇದುತ್ತಿರುವುದಾಗಿಯೂ ಶಂಕಿಸಲಾಗಿದೆ. ಈ ಉಪಕರಣವನ್ನು 1,600 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯಿಂದ ಹುಕ್ಕಾ ವಶಕ್ಕೆ  
ಮಾದಕ ವಸ್ತುಗಳ ಬೇಟೆ ತೀವ್ರಗೊಳಿಸಿರುವಂತೆ ಒಂಬತ್ತನೇ ತರಗತಿ ವಿದ್ಯಾರ್ಥಿಯೋರ್ವನ ಶಾಲಾ ಬ್ಯಾಗ್‌ನಿಂದ ಹೆತ್ತವರ ಸಹಕಾರದೊಂದಿಗೆ ಬೇಕಲ ಪೊಲೀಸರು ಹುಕ್ಕಾವನ್ನು ವಶಪಡಿಸಿಕೊಂಡಿದ್ದಾರೆ. 

ಈ ಸಂಬಂಧ ಪಳ್ಳಿಕೆರೆ ಪಂಚಾಯತ್‌ನ ಶಾಲೆಯೊಂದರ ವಿದ್ಯಾರ್ಥಿಯ ವಿರುದ್ಧ ಜುವೈನಲ್‌ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಬೇಕಲ ಪೊಲೀಸರು ತಿಳಿಸಿದ್ದಾರೆ.

ಶಾಲೆಗಳ ಬಳಿ ರಾಜಾರೋಷ  ಮಾರಾಟ
ಶಾಲಾ ಪರಿಸರದಲ್ಲಿರುವ ಗೂಡಂಗಡಿಗಳಲ್ಲಿ ಸಿಗರೇಟ್‌, ತಂಬಾಕು ಉತ್ಪನ್ನಗಳು, ಬೀಡಿ, ಸಿಗರೇಟ್‌ ಮೊದಲಾದವುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆದರೂ ಇಂತಹ ಉತ್ಪನ್ನಗಳನ್ನು ರಾಜಾರೋಷವಾಗಿ ಗೂಡಂಗಡಿಗಳಲ್ಲಿ ಮಾರಾಟ ಮಾಡ ಲಾಗುತ್ತಿದೆ. ವಿದ್ಯಾರ್ಥಿಗಳೇ ಗಾಂಜಾ ಸಹಿತ ಮಾದಕ ವಸ್ತುಗಳ ಮಾಫಿಯಾದ ಪ್ರಧಾನ ಕೊಂಡಿಯಾಗಿದ್ದಾರೆ. 

ವಿದ್ಯಾರ್ಥಿಗಳಿಗೆ ಮೊದಲು ಉಚಿತವಾಗಿ ಗಾಂಜಾ ನೀಡಲಾಗುತ್ತದೆ. ಬಳಿಕ ಸಣ್ಣ ಪ್ರಮಾಣದಲ್ಲಿ ಹಣ ನೀಡಿ ಗ್ರಾಹಕರಾಗುತ್ತಾರೆ. ಬಳಿಕ ಈ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ನೀಡುವ ಮಾದಕ ವಸ್ತುಗಳನ್ನು ವ್ಯಾಪಕ ವಾಗಿ ಉಪಯೋಗಿಸಲು ತೊಡಗಿಸಿಕೊಳ್ಳುತ್ತಾರೆ. ಪ್ರಸ್ತುತ ವರ್ಷ ಸುಮಾರು 75ರಷ್ಟು  ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 173, 2016ರಲ್ಲಿ 193, 2015ರಲ್ಲಿ 236 ಪ್ರಕರಣಗಳು ದಾಖಲಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next