Advertisement

ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್‌ ಪಾಸ್‌

11:54 AM Jun 13, 2018 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪಾಸು ಕೊಡುವುದಾಗಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಬಿಎಂಟಿಸಿಯಲ್ಲಿ ಪೂರ್ಣ ಹಣ ಪಾವತಿಸಿದರೂ ಸಕಾಲದಲ್ಲಿ ಪಾಸು ಸಿಗುತ್ತಿಲ್ಲ.

Advertisement

ಈ ವರ್ಷದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಮಹತ್ವಾಕಾಂಕ್ಷಿ ಸ್ಮಾರ್ಟ್‌ಕಾರ್ಡ್‌ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ನೂತನ ವ್ಯವಸ್ಥೆಯ ಪ್ರಕಾರ ಇನ್ಮುಂದೆ ಮಕ್ಕಳಿಗೆ ಆಯಾ ಶಾಲೆಗಳ ಮೂಲಕವೇ ಪಾಸುಗಳ ವಿತರಣೆ ಆಗುತ್ತದೆ. ಆದರೆ, ಈ ಬಗ್ಗೆ ಸ್ವತಃ ಶಾಲೆಗಳಿಗೇ ಮಾಹಿತಿ ಇಲ್ಲ!

ಸಾಮಾನ್ಯವಾಗಿ ಪ್ರತಿ ವರ್ಷ ಆಯಾ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಶುಲ್ಕದ ರಸೀದಿ ತೋರಿಸಿ, ನಗರದ ವಿವಿಧೆಡೆ ತೆರೆಯುತ್ತಿದ್ದ ಬಿಎಂಟಿಸಿ ಕೌಂಟರ್‌ಗಳಲ್ಲಿ ಅಥವಾ ಬೆಂಗಳೂರು-ಒನ್‌ಗಳಲ್ಲಿ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯುತ್ತಿದ್ದರು.

ಆದರೆ, ಈ ಸಲ ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳಲ್ಲೇ ಪಾಸಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿಚಿತ್ರವೆಂದರೆ, ಈ ಕುರಿತು ಶಾಲಾ ಮಂಡಳಿಗೆ ಗೊತ್ತೇ ಇಲ್ಲ. ಇದರಿಂದ ಹೊಸ ವ್ಯವಸ್ಥೆ ಈಗ ಗೊಂದಲದ ಗೂಡಾಗಿದ್ದು, ವಿದ್ಯಾರ್ಥಿಗಳು ಪಾಸಿಗಾಗಿ ಪರದಾಡುವಂತಾಗಿದೆ.

ಇದೇ ಮೊದಲ ಬಾರಿಗೆ ಪಾಸು ಪಡೆಯುವಂತಹ ವಿದ್ಯಾರ್ಥಿಗಳಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟಿದೆ. ನಿತ್ಯ ದುಡ್ಡು ಕೊಟ್ಟು ಬಸ್‌ಗಳಲ್ಲಿ ಓಡಾಡುವಂತಾಗಿದೆ. “ಈ ಹಿಂದೆ ಮನೆ ಹತ್ತಿರದಲ್ಲೇ ಇದ್ದ ಕೆ.ಆರ್‌. ಪುರದ ಅಮರಜ್ಯೋತಿ ಶಾಲೆ ಕಲಿಯುತ್ತಿದ್ದೆ. ಹಾಗಾಗಿ, ರಿಯಾಯ್ತಿ ಪಾಸು ಪಡೆದಿರಲಿಲ್ಲ.

Advertisement

ಆದರೆ, ಈಗ ಸುಮಾರು 15 ಕಿ.ಮೀ. ದೂರದ ಮೌಂಟ್‌ಕಾರ್ಮೆಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೇನೆ. ಕಾಲೇಜು ಆರಂಭಗೊಂಡು ಎರಡು ದಿನ ಆಯಿತು. ಪಾಸು ಲಭ್ಯವಾಗುತ್ತಿಲ್ಲ. ಮೆಜೆಸ್ಟಿಕ್‌ನ ಬಿಎಂಟಿಸಿ ಕೌಂಟರ್‌ನಲ್ಲಿ ಕೇಳಿದರೆ, ಕಾಲೇಜಿನಲ್ಲೇ ಪಡೆಯಿರಿ ಎಂದು ಹೇಳುತ್ತಾರೆ’ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರೇರಣಾ ಅಲವತ್ತುಕೊಂಡರು.  

ಸಮಸ್ಯೆ ಆಗದು; ಬಿಎಂಟಿಸಿ: “ಕಾಲೇಜು ರಸೀದಿ ತೋರಿಸಿಯೇ ಪಾಸುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೆಜೆಸ್ಟಿಕ್‌ನಲ್ಲಿ ಕೇಳಿ ಪಡೆಯಬಹುದು. ಅಲ್ಲದೆ, ಹಳೆಯ ಅಂದರೆ ಈ ಹಿಂದಿನ ವರ್ಷದ ಪಾಸುಗಳನ್ನು ತೋರಿಸಿ ಕೂಡ ಓಡಾಡಲು ಅವಕಾಶ ಕಲ್ಪಿಸಲಾಗಿದೆ.

ಹಾಗಾಗಿ, ಸಮಸ್ಯೆ ಇಲ್ಲ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಆದರೆ, ಮೆಜೆಸ್ಟಿಕ್‌ನಲ್ಲಿಯ ಸಿಬ್ಬಂದಿ ಇದನ್ನು ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಶಾಲಾ-ಕಾಲೇಜುಗಳಿಗೂ ಇದರ ಅರಿವಿಲ್ಲ. ಒಟ್ಟಾರೆಯಾಗಿ ಸಮನ್ವಯದ ಕೊರತೆಯಿದೆ ಎಂದು ವಿಜಯನಗರದ ಪೋಷಕ ಮಹೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಗೊಂದಲದ ಮಧ್ಯೆ ಮತ್ತೂಂದು ಹೊರೆ: ಅಷ್ಟಕ್ಕೂ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಪ್ರವೇಶಾತಿ ಸೇರಿ ಪಾಸುಗಳ ಅರ್ಜಿ ಸ್ವೀಕಾರ ಹೊಣೆ ಕೂಡ ಸೇರ್ಪಡೆಯಾಗಿದ್ದು, ಸಮರ್ಪಕವಾಗಿ ನಿರ್ವಹಿಸುವುದು ಅನುಮಾನ ಎಂಬ ಮಾತುಗಳು ಪೋಷಕರ ವಲಯದಿಂದ ಕೇಳಿಬರುತ್ತಿವೆ.  

ಇಂದು ಸಭೆ: ಸಮನ್ವಯದ ಕೊರತೆ ಹಿನ್ನೆಲೆಯಲ್ಲಿ ಬಿಎಂಟಿಸಿಯು ಬುಧವಾರ ನಗರದ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿದೆ. ಸಭೆಯಲ್ಲಿ ನೂತನ ವ್ಯವಸ್ಥೆ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.

ನಾಲ್ಕು ಲಕ್ಷ ಸ್ಮಾರ್ಟ್‌ ಕಾರ್ಡ್‌: ಬಿಎಂಟಿಸಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ರಿಯಾಯ್ತಿ ಪಾಸುಗಳನ್ನು ಹೊಂದುವ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು ನಾಲ್ಕು ಲಕ್ಷ. ಈ ಹಿನ್ನೆಲೆಯಲ್ಲಿ ನಾಲ್ಕು ಲಕ್ಷ ಸ್ಮಾರ್ಟ್‌ಕಾರ್ಡ್‌ಗಳ ಮುದ್ರಣಕ್ಕೆ ಸೂಚಿಸಲಾಗಿದ್ದು, ಇನ್ನೂ ಮುದ್ರಣಗೊಂಡು ಕೈಗೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಕಾರ್ಯವೈಖರಿ ಹೀಗೆ: ವಿದ್ಯಾರ್ಥಿಗಳು ಸ್ಮಾರ್ಟ್‌ಕಾರ್ಡ್‌ ಪಡೆಯಲು “ಇ-ಫಾರಂ’ ರೂಪಿಸಲಾಗಿದೆ. ಇದು ಬಿಎಂಟಿಸಿ, ಶಿಕ್ಷಣ ಇಲಾಖೆ ಮತ್ತು ಆಯಾ ಶಾಲಾ-ಕಾಲೇಜುಗಳ ನಡುವೆ ಸಂಪರ್ಕ ಹೊಂದಿರುವ ವಿಶೇಷ ಸಾಫ್ಟ್ವೇರ್‌ ಆಗಿದೆ. ಶಾಲಾ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ಪಾಸಿಗಾಗಿ “ಇ-ಫಾರಂ’ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಅರ್ಜಿ ಸಲ್ಲಿಸಬೇಕು.

ಅದು ಶಿಕ್ಷಣ ಇಲಾಖೆಯಿಂದ ದೃಢೀಕರಣಗೊಂಡು ಬಿಎಂಟಿಸಿಗೆ ಬರುತ್ತದೆ. ಅಲ್ಲಿ ಅದನ್ನು ಅನುಮೋದನೆ ಮಾಡಿ, ಶಾಲೆಗೆ ಕಳುಹಿಸಲಾಗುವುದು. ನಂತರದಲ್ಲಿ ವಿದ್ಯಾರ್ಥಿಯ ಮನೆಗೆ ಅಂಚೆ ಮೂಲಕ ಸ್ಮಾರ್ಟ್‌ಕಾರ್ಡ್‌ ಬರಲಿದೆ ಎಂದು ಬಿಎಂಟಿಸಿ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next