Advertisement

ಸರಕಾರಿ-ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಳ

03:20 AM Jul 04, 2018 | Karthik A |

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಅಂತಿಮ ಅಂಕಿಅಂಶ ಪ್ರಕಾರ 5805 ಮಂದಿ ವಿದ್ಯಾರ್ಥಿಗಳು ಕಳೆದ ವರ್ಷಕ್ಕಿಂತ ಅಧಿಕವಾಗಿ ಸೇರ್ಪಡೆಗೊಂಡಿದ್ದಾರೆ. ಒಂದನೇ ತರಗತಿ ಮಾತ್ರವಲ್ಲ. ಇತರ ತರಗತಿಗಳಿಗೂ ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಒಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಒಂದನೇ ತರಗತಿಯಲ್ಲಿ 13,864 ಮಂದಿ ವಿದ್ಯಾರ್ಥಿಗಳಿದ್ದರು. ಈ ಬಾರಿ ಇವರು ಎರಡನೇ ತರಗತಿಗೆ ತೆರಳಿದಾಗ ಈ ಸಂಖ್ಯೆ 14,534ಕ್ಕೇರಿತು. ಅಂದರೆ ಎರಡನೇ ತರಗತಿಗೆ 670 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಒಂದನೇ ತರಗತಿಯಲ್ಲಿ ಅನುದಾನರಹಿತ ಶಾಲೆಗಳಲ್ಲಿ ಕಲಿತಿದ್ದ ವಿದ್ಯಾರ್ಥಿಗಳು ಎರಡನೇ ತರಗತಿಗೆ ಈ ಶಾಲೆಯನ್ನು ಬಿಟ್ಟು ಸರಕಾರಿ-ಅನುದಾನಿತ ಶಾಲೆಗೆ ಸೇರ್ಪಡೆಯಾದದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇತರ ಜಿಲ್ಲೆಗಳಿಂದ ಬಂದ ಕೆಲವು ವಿದ್ಯಾರ್ಥಿಗಳೂ ಇದರಲ್ಲಿ ಒಳಗೊಂಡಿದ್ದಾರೆ.

Advertisement

ತರಗತಿ ಆಧಾರದಲ್ಲಿ ನೋಡಿದರೆ ಎಂಟನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಎಂಟನೇ ತರಗತಿಯಲ್ಲಿ 1366 ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷಕ್ಕಿಂತ ಅಧಿಕವಾಗಿದ್ದಾರೆ. ಕಳೆದ ವರ್ಷ ಸರಕಾರಿ ಮತ್ತು ಅನು ದಾನಿತ ಶಾಲೆಗಳಲ್ಲಿ 15,324 ಮಂದಿ ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಹೋದಾಗ 16,690 ವಿದ್ಯಾರ್ಥಿಗಳಾದರು. ಮೂರನೇ ತರಗತಿಯಲ್ಲಿ 502, ನಾಲ್ಕನೇ ತರಗತಿಯಲ್ಲಿ 471, ಐದನೇ ತರಗತಿಯಲ್ಲಿ 862, ಆರನೇ ತರಗತಿಯಲ್ಲಿ 605, ಏಳನೇ ತರಗತಿಯಲ್ಲಿ 400, ಎಂಟನೇ ತರಗತಿಯಲ್ಲಿ 1366, ಒಂಭತ್ತನೇ ತರಗತಿಯಲ್ಲಿ 687 ವಿದ್ಯಾರ್ಥಿಗಳು ಅಧಿಕವಾಗಿದ್ದಾರೆ. ಪ್ರಸ್ತುತ ವರ್ಷ ಒಂದನೇ ತರಗತಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೆಚ್ಚಳ ವಿದ್ಯಾರ್ಥಿಗಳು 321. ಕಳೆದ ವರ್ಷ 13,864 ವಿದ್ಯಾರ್ಥಿಗಳಿದ್ದರೆ, ಈ ಬಾರಿ 14,185 ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಅದೇ ವೇಳೆ ಹತ್ತನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ಒಂಭತ್ತನೇ ತರಗತಿಯಲ್ಲಿ 17,430 ವಿದ್ಯಾರ್ಥಿಗಳಿದ್ದರು. ಅವರು ಹತ್ತನೇ ತರಗತಿಗೆ ಭಡ್ತಿ ಪಡೆದಾಗ ವಿದ್ಯಾರ್ಥಿಗಳ ಸಂಖ್ಯೆ 17,351ಕ್ಕಿಳಿಯಿತು. ಅಂದರೆ 79 ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಕಳೆದ ವರ್ಷ ಹತ್ತನೇ ತರಗತಿಯಲ್ಲಿ 17,746 ವಿದ್ಯಾರ್ಥಿಗಳಿದ್ದರೆ ಈ ಬಾರಿ ಈ ಸಂಖ್ಯೆ 17,351 ಕ್ಕಿಳಿದಿದೆ.


ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರನೇ ಶಾಲಾ ದಿನದ ಅಂಕಿಅಂಶದಂತೆ ಜಿಲ್ಲೆಯಲ್ಲಿ 1,79,723 ವಿದ್ಯಾರ್ಥಿಗಳು ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಸರಕಾರಿ-ಅನುದಾನಿತ ಅಲ್ಲದೆ ಸರಕಾರಿ ಸಿಲಬೆಸ್‌ ಕಲಿಸುವ ಸರಕಾರಿ ಅಂಗೀಕೃತ ಅನನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಸೇರ್ಪಡಿಸಿ ಈ ಅಂಕಿಅಂಶವಿದೆ. ಕಳೆದ ವರ್ಷಕ್ಕಿಂತ 2,011 ವಿದ್ಯಾರ್ಥಿಗಳು ಹೆಚ್ಚಳ ವಾಗಿದ್ದಾರೆ. ಕಳೆದ ವರ್ಷ 1,77,712 ವಿದ್ಯಾರ್ಥಿಗಳು ಆರನೇ ಶಾಲಾ ದಿನದಲ್ಲಿ ತಲುಪಿದ್ದರು. 2016 ರಲ್ಲಿ 1,73,801 ವಿದ್ಯಾರ್ಥಿಗಳೂ, 2015 ರಲ್ಲಿ 1,75,031 ವಿದ್ಯಾರ್ಥಿಗಳ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿದ್ದರು.

ಸರಕಾರಿ ಶಾಲೆಗಳಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 87,056 ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ, ಅನುದಾನಿತ ಶಾಲೆಗಳಲ್ಲಿ 67242, ಅನುದಾನರಹಿತ  ಶಾಲೆಗಳಲ್ಲಿ  25,424 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ  85766 ವಿದ್ಯಾರ್ಥಿಗಳೂ, ಅನುದಾನಿತ ಶಾಲೆಗಳಲ್ಲಿ 66,610 ವಿದ್ಯಾರ್ಥಿಗಳೂ ಅನುದಾನರಹಿತ ಶಾಲೆಗಳಲ್ಲಿ 25336 ವಿದ್ಯಾರ್ಥಿಗಳು ಕಲಿತ್ತಿದ್ದರು. ಪ್ರಸ್ತುತ ವರ್ಷವೂ ರಾಜ್ಯ ಸಿಲಬೆಸ್‌ ಕಲಿಸುವ ಸರಕಾರಿ ಅಂಗೀಕೃತ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಗಮನಾರ್ಹ. ಸಿ.ಬಿ.ಎಸ್‌.ಇ. ಶಾಲೆಗಳಿಂದ ವಿದ್ಯಾರ್ಥಿಗಳು ಉಪೇಕ್ಷಿಸಿ ಸರಕಾರಿ, ಅನುದಾನಿತ ಶಾಲೆಗಳಿಗೆ ಬಂದಿರುವುದನ್ನು ಇದು ಸೂಚಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next