Advertisement

ಪಂಚನಬೆಟ್ಟು ಶಾಲೆ ಉಳಿಸುವಂತೆ ಪ್ರಧಾನಿಗೆ ಓಲೆ ಬರೆದ ಬಾಲೆ!

03:37 PM Oct 12, 2020 | sudhir |

ಕುಂದಾಪುರ: ಊರಿಗಿರುವ ಏಕೈಕ ಪ್ರೌಢಶಾಲೆ ಯನ್ನು ಮುಚ್ಚದೆ ಉಳಿಸಿಕೊಡುವಂತೆ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ.

Advertisement

ಹಿರಿಯಡ್ಕ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢಶಾಲೆಯನ್ನು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣ ನೀಡಿ ಇನ್ನೊಂದು ಶಾಲೆ ಜತೆ ವಿಲೀನ ಮಾಡಲು ಶಿಕ್ಷಣ ಇಲಾಖೆ ಕಳೆದ ವರ್ಷ ಸೂಚಿಸಿತ್ತು. ಬಳಿಕ ಶಾಲಾಡಳಿತದ ಮನವಿಯ ಮೇರೆಗೆ ಒಂದು ವರ್ಷ ವಿನಾಯಿತಿ ನೀಡಿತ್ತು. ಈ ವರ್ಷವೂ ಅದೇ ಪರಿಸ್ಥಿತಿ ಇದೆ ಎಂದು ಇಲಾಖೆ ಅಲ್ಲಿದ್ದ ಶಿಕ್ಷಕರನ್ನು ಬೇರೆ ಶಾಲೆಗೆ ಕಳುಹಿಸಲು ಸೂಚಿಸಿತು. ಅದರಂತೆ 6 ಶಿಕ್ಷಕರ ಪೈಕಿ ಮೂವರು ಬೇರೆಡೆ ತೆರಳಿದ್ದಾರೆ. ಇದೀಗ ಶಾಲಾಡಳಿತದ ಮನವಿ ಮೇರೆಗೆ ಶಿಕ್ಷಣ ಇಲಾಖೆ ವಿಶೇಷ ಪ್ರಕರಣ ಎಂದು ಈ ವರ್ಷ ಕಲಿಕೆಗೆ ಅನುಮತಿ ನೀಡಿದೆ. ಈ ಮಧ್ಯೆ ಶಾಲಾ ವಿದ್ಯಾರ್ಥಿನಿ ವರ್ಷಿತಾ ಆರ್‌. ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಊರಿಗಿರುವ ಶಾಲೆಯನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾಳೆ.

ಸುತ್ತಲಿನ 15 ಕಿ.ಮೀ. ಜನರಿಗೆ ಈ ಪ್ರೌಢ ಶಾಲೆಯ ಅಗತ್ಯ ಇರುತ್ತದೆ. ಇಲ್ಲಿ ಹೈಸ್ಕೂಲು ಮುಚ್ಚಿದರೆ 8 ಕಿ.ಮೀ. ದೂರದ
ಹಿರಿಯಡ್ಕ, ಅಷ್ಟೇ ದೂರದ ಬೈಲೂರಿಗೆ ಹೋಗಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಕಲಿಯುವ ಆಸೆಗೆ ನೀರೆರೆದು ಪೋಷಿಸಿ ಎಂದು ಮನವಿ ಮಾಡಿದ್ದಳು.

ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪರಾಮರ್ಶಿಸಿ ಉತ್ತರಿಸುವಂತೆ ಸೂಚಿಸಿದೆ.

Advertisement

30 ವರ್ಷಗಳ ಹಿಂದೆ ಆರಂಭವಾದ ಈ ಶಾಲೆಯಲ್ಲಿ 42 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದು 10 ಮಂದಿ ಹೊರಹೋಗಿದ್ದಾರೆ. ಕೊರೊನಾ ಅಲ್ಲದೇ ಇದ್ದರೆ 30 ಮಕ್ಕಳ ಸೇರ್ಪಡೆಗೆ ವ್ಯವಸ್ಥೆ ಆಗಿತ್ತು. ಹಾಸ್ಟೆಲ್‌ ಸೌಲಭ್ಯವೂ ಇದೆ. ಡೊನೇಶನ್‌ ತೆಗೆದುಕೊಳ್ಳದ, ಕಾಡಂಚಿನ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಯ ಮೇಲೆ ಅಧಿಕಾರಿಗಳು ದರ್ಪ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುತ್ತಾರೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ. ನರಸಿಂಹ ಅವರು.

ಶಾಲೆ ಉಳಿಯಲಿ
ನಾನು ಮೊನ್ನೆಯಷ್ಟೇ ಎಸೆಸೆಲ್ಸಿ ಮುಗಿಸಿದ್ದು ತಂಗಿ ಅದೇ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾಳೆ. ಊರ ಮಕ್ಕಳಿಗೆ ಶಾಲೆ ಬೇಕೆಂಬ ನೆಲೆಯಲ್ಲಿ ಪತ್ರ ಬರೆದೆ. ಸ್ಪಂದನ ದೊರೆತದ್ದು ಸಂತಸ ತಂದಿದೆ. ಶಾಲೆ ಉಳಿಯಲಿ ಎನ್ನುವುದೇ ಬೇಡಿಕೆ.
– ವರ್ಷಿತಾ ಆರ್‌. ಪಂಚನಬೆಟ್ಟು, ಪ್ರಧಾನಿಗೆ ಪತ್ರ ಬರೆದ ವಿದ್ಯಾರ್ಥಿನಿ

ಮಾಹಿತಿ ಇಲ್ಲ
ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದ ಕುರಿತು ಮಾಹಿತಿ ಇಲ್ಲ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಇಲಾಖಾ ನಿಯಮದಷ್ಟು ಮಕ್ಕಳ ಸಂಖ್ಯೆ ಇಲ್ಲ. ಈ ವರ್ಷ ಅಲ್ಲಿರುವ ಶಿಕ್ಷಕರಿಗೆ ವೇತನ ಬಿಡುಗಡೆಗೆ ಸೂಚನೆ ಬಂದಿದ್ದು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗುವುದು.
– ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next