ಚಾಮರಾಜನಗರ: ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಅಮಾನವೀಯವಾಗಿ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಅಲ್ಲಿನ ಪೋಲಿಸರು ಎನ್‌ಕೌಂಟರ್ ಮಾಡಿರುವುದನ್ನು ಬೆಂಬಲಿಸಿ, ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ನಗರದ ವಿದ್ಯಾ ವಿಕಾಸ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜಯೋತ್ಸವ ಆಚರಣೆ ಮಾಡಿ, ಸಿಹಿ, ಹಂಚಿ ಸಂಭ್ರಮಿಸಿದರು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕಾಲೇಜಿನ ಅವರಣದಲ್ಲಿ ವಿದ್ಯಾರ್ಥಿಗಳು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಯುವಶಕ್ತಿ ಪರಿಷತ್‌ನ ಸಹಯೋಗದಲ್ಲಿ ಸಮಾವೇಶಗೊಂಡರು. ಆತ್ಯಾಚಾರ ಆರೋಪಿಗಳನ್ನು ಕೊಂದಿರುವ ಪೊಲೀಸರಿಗೆ ನಮ್ಮ ಬೆಂಬಲ, ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಜಯವಾಗಲಿ, ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ, ಕನ್ನಡಿಗ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನ ಅವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆ ಕೂಗಿದರು. ಬಳಿಕ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ದಾನೇಶ್ವರಿ, ಪಶುವೈದ್ಯೆಯನ್ನು ನಾಲ್ವರು ಯುವಕರು ಅಮಾನುಷವಾಗಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದರು. ಇವರು ಮಾಡಿದ ಕರ್ಮಕ್ಕೆ ಭಗವಂತನೇ ಶಿಕ್ಷೆ ವಿಧಿಸಿದ್ದಾನೆ. ಪೊಲೀಸ್ ಅಧಿಕಾರಿಗಳ ಮೂಲಕ ಅವರು ಪಾಪದ ಕೆಲಸಕ್ಕೆ ತಕ್ಕ ಶಿಕ್ಷೆಯನ್ನು ನೀಡುವಂತೆ ಪ್ರೇರಣೆ ನೀಡಿದ್ದಾನೆ. ಇಂಥ ಕೃತ್ಯಗಳು ನಿಲ್ಲಬೇಕು. ಮನುಷ್ಯ ಕುಲದಲ್ಲಿ ಹುಟ್ಟಿರುವ ನಾವೆಲ್ಲರು ಶಾಂತಿ ಸಹಬಾಳ್ವೆ ಹಾಗೂ ಪರಸ್ಪರ ಸಹೋದರತ್ವದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಮಹಿಳೆಯ ಮೇಲಿನ ಅತ್ಯಾಚಾರ ಸಮಾಜವೇ ತಲೆತಗ್ಗಿಸುವಂತಹ ವಿಚಾರವಾಗಿದೆ. ಕಳೆದ 8 ದಿನಗಳ ಹಿಂದೆ ಈ ಕೃತ್ಯವನ್ನು ನೋಡಿ, ಕೇಳಿ ಮನಸ್ಸಿಗೆ ಬಹಳ ಬೇಸರವಾಗಿತ್ತು. ಅದರೆ, ಇಂದು ಪೊಲೀಸರು ಮಾಡಿರುವ ಎನ್‌ಕೌಂಟರ್‌ನಲ್ಲಿ ನಾಲ್ವರು ಪಾಪಿಗಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸಮಾಧಾನ ತಂದಿದೆ. ಇಂಥ ಪ್ರಕರಣಗಳಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಯುವಶಕ್ತಿ ಪರಿಷತ್‌ನ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಕನ್ನಡಿಗ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಸಾಹಸದ ಕೆಲಸ ಮಾಡಿದ್ದಾರೆ. ನಾಲ್ವರು ಕ್ರೂರಿಗಳು ಪೊಲೀಸರಿಂದ ತಪ್ಪಿಸಿಕೊಂಡು ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸಲು ಹೊಂಚು ಹೋಗುತ್ತಿದ್ದರು. ಇವರು ತಪ್ಪಿಸಿಕೊಳ್ಳದಂತೆ ಎನ್‌ಕೌಂಟರ್ ಮಾಡಿ ಕೊಂದಿರುವ ಪೊಲೀಸರ ಸಾಹಸದ ಕೆಲಸವನ್ನು ಇಡೀ ಪ್ರಪಂಚವೇ ಪ್ರಶಂಸೆ ವ್ಯಕ್ತಪಡಿಸಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎನ್. ಗೌಡ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಕುಮಾರ್, ಉಪನ್ಯಾಸಕರಾದ ರಾಜೇಶ್ವರಿ, ಕುಸುಮಾ, ಕುಮಾರಿ, ಅನುರಾಜ್, ಓಂ ಶಾಂತಿ ಬಿ.ಕೆ. ಆರಾಧ್ಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.