ಪ್ರತಿಭೆ ದೈವದತ್ತ ಕೊಡುಗೆ. ಅದಕ್ಕೆ ಸಾಣೆ ಹಿಡಿದಾಗ ಹರಿತಗೊಂಡು ಮಿಂಚುವುದು. ಪ್ರತಿಭೆಯ ಸಾಕ್ಷಾತ್ಕಾರಕ್ಕೆ ಮಕ್ಕಳೂ ಹೊರತಾಗಿಲ್ಲ. ಅದಕ್ಕೆ ಎಳೆತನ, ಹಿರಿಯರು ಎಂಬ ಅಂತರವಿಲ್ಲ. ಕಿರಿಯರಿಂದಲೂ ಸೃಜನಶೀಲ ಕಲಾಕೃತಿಗಳು ಮೂಡಿಬರಲು ಸಾಧ್ಯ. ಆದರೆ ಅದಕ್ಕೆ ತಕ್ಕ ಅವಕಾಶ ಮತ್ತು ಮಾರ್ಗದರ್ಶನ ಬೇಕು. ಅದು ಕ್ರಮಾನುಗತವಾಗಿ ಸಿಗುತ್ತಿರಬೇಕು. ಆಗ ಎಳೆಯ ಕುಂಚಗಳಲ್ಲಿ ಮಿಂಚಿದ ಪ್ರತಿಭೆಗಳು ಸಮಾಜದಲ್ಲಿ ಸ್ಥಾನಮಾನ ಪಡೆಯಬಲ್ಲವು. ಅಂತಹ ಅವಕಾಶವನ್ನು ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಶಾಲೆಯ ಕಲಾ ಶಿಕ್ಷಕಿ ಪಲ್ಲವಿ ಭಟ್ ತಮ್ಮ ಶಾಲಾ ಮಕ್ಕಳಿಗೆ ಕಲ್ಪಿಸಿಕೊಟ್ಟಿದ್ದಾರೆ. ಅವರು ಇತ್ತೀಚೆಗೆ ಶಾಲೆಯಲ್ಲಿ ನಡೆಸಿದ ಮಕ್ಕಳ ಚಿತ್ರಕಲಾ ಪ್ರದರ್ಶನ ವೀಕ್ಷಕರಿಗೆಲ್ಲ ಮುದನೀಡಿತು. ವಿದ್ಯಾರ್ಥಿ ಪ್ರತಿಭೆ ಹೊರಜಗತ್ತಿಗೆ ತಿಳಿಯಲು ಅವಕಾಶಮಾಡಿಕೊಟ್ಟಿತು. ಶಾಲಾ ಆಡಳಿತ ಮಂಡಳಿ, ಫಾ| ಸ್ಟೇನಿ ಬಿ. ಲೋಬೊ ಈ ಕಲಾಪ್ರದರ್ಶನಕ್ಕೆ ಪ್ರೋತ್ಸಾಹಕರಾಗಿ ನಿಂತು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಮಕ್ಕಳ ಚಿತ್ರಗಳೆಂದರೆ ಅದು ಸೃಜನಾತ್ಮಕ ಸೃಷ್ಟಿ. ಅಧ್ಯಾಪಕರು ಮಾರ್ಗದರ್ಶಿಸಬಹುದೇ ವಿನಾ ಅವರ ಚಿತ್ರಗಳಲ್ಲಿ ಕೈಯಾಡಿಸುವಂತಿಲ್ಲ. ಅದು ಅದರದ್ದೇ ಆದ ವೈಶಿಷ್ಟ ಹೊಂದಿರುತ್ತದೆ. ವಿಷಯದ ನೇರ ಪ್ರಸ್ತಾವನೆ, ರೇಖಾತ್ಮಕ ಗೀಚುವಿಕೆ, ಮುಗ್ಧ ಆಕಾರಗಳು, ನಿಯಮಿತ ಕಡು ಬಣ್ಣಗಳು ಅಲ್ಲಿ ಕಂಡುಬರುತ್ತವೆ. ಹಾಗಾಗಿ ಮಕ್ಕಳ ಚಿತ್ರಗಳನ್ನು ವೀಕ್ಷಕರು ಹಿರಿಯರ ದೃಷ್ಟಿಯಿಂದ ನೋಡಬಾರದು. ಮಕ್ಕಳ ಮನಸ್ಸಿನಿಂದಲೇ ನೋಡಬೇಕು. ಹಾಗಾದಾಗ ಮಾತ್ರ ನಮ್ಮಲ್ಲಿ ಉತ್ತಮ ರಸ ಗ್ರಹಣವಾದೀತು.
ಕಲಾಪ್ರದರ್ಶನ ಅರ್ಥಪೂರ್ಣವಾಗಿ ನಡೆಯಿತು. ಒಂದನೇ ತರಗತಿಯಿಂದ ಹತ್ತನೆ ತರಗತಿವರೆಗಿನ ವಿದ್ಯಾರ್ಥಿಗಳ ಆಯ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಅವರವರ ಪ್ರಾಯಕ್ಕೆ ತಕ್ಕಂತೆ ಚಿತ್ರಗಳು ಪ್ರಬುದ್ಧವಾಗಿ ಮೂಡಿಬಂದಿದ್ದವು. ಕರಕುಶಲ ವಸ್ತುಗಳು, ಕಸದಿಂದ ರಸ ಕಲಾಕೃತಿಗಳು, ಎಂಬ್ರಾಯxರಿ ಕಸೂತಿಗಳೂ ಇದ್ದವು. ಚಿತ್ರಗಳು ಪೆನ್ಸಿಲ್ ಶೇಡ್, ಕ್ರೆಯಾನ್ಸ್ ಬಣ್ಣದ ಪೆನ್ಸಿಲ್‌ಗಳು, ವಾಟರ್ ಕಲರ್ ಹಾಗೂ ಆಕ್ರಿಲಿಕ್ ಮಾಧ್ಯಮದಲ್ಲಿ ರಚನೆಯಾಗಿದ್ದು ವಿಷಯ ವೈವಿಧ್ಯದಿಂದ ಕೂಡಿದ್ದವು. ಮಕ್ಕಳಿಗೆ ಇಷ್ಟವಾದ ನಿಸರ್ಗ ದೃಶ್ಯಗಳು ಸಾಕಷ್ಟಿದ್ದವು. ಅಂತೆಯೇ ಹಣ್ಣು ತರಕಾರಿಗಳ ಸ್ಥಿರಚಿತ್ರಣ (ಸ್ಟಿಲ್ ಲೈಫ್), ಶಿಥಿಲ ಕಟ್ಟಡದ ದೃಶ್ಯಗಳು, ಬೀದಿಯ ದೃಶ್ಯಗಳು, ಮೀನು ಗಾರರು ಬಲೆ ಬೀಸುತ್ತಿರುವ ದೃಶ್ಯ, ಬೋಳು ಮರಗಳ ಪ್ರಕೃತಿ, ಮಹಾಪುರುಷರ -ವಿಜ್ಞಾನಿಗಳ ಚಿತ್ರಗಳು, ದೇವರುಗಳ ಚಿತ್ರ, ಕಂಬಳ, ಕೋಲ, ಯಕ್ಷಗಾನ ಭಂಗಿಗಳು, ಹಳ್ಳಿಯ ಕಸುಬುಗಳು, ವಿವಿಧ ಆಟಗಳು, ಪರಿಸರ ಹಾನಿಯ ಬಗ್ಗೆ ಎಚ್ಚರಿಕೆಯ ಚಿತ್ರಗಳು, ನೆರೆ ಹಾವಳಿ, ಬರಗಾಲದ ದೃಶ್ಯಗಳು, ಪ್ರಾಣಿಗಳು, ಪಕ್ಷಿಗಳು, ಕಾಟೂìನ್ ಇತ್ಯಾದಿ ಎಲ್ಲ ತರಹದ ಚಿತ್ರಗಳು ಇದ್ದವು.
ಕೆಲವು ವಿದ್ಯಾರ್ಥಿಗಳ ಚಿತ್ರಗಳು ವಿದ್ಯಾರ್ಥಿದೆಸೆಯನ್ನು ದಾಟಿ ಯುವ ಕಲಾವಿದರ ಚಿತ್ರಗಳಿಗೆ ಸರಿಸಾಟಿಯಾಗಿದ್ದವು. ಚಿತ್ರಗಳು ಸಾಕಷ್ಟಿದ್ದರೂ ಚಿತ್ರಗಳನ್ನು ಒತ್ತಟ್ಟಿಗೆ ಇಟ್ಟ ಕಾರಣ ವೀಕ್ಷಣೆಗೆ ತೊಡಕಾಗಿತ್ತು. ಚಿತ್ರಗಳಿಗೆ ಮೌಂಟ್ ಅಥವಾ ಫ್ರೆàಂನ ಆವಶ್ಯಕತೆ ಕಾಣುತ್ತದೆ. ಚೊಚ್ಚಲ ಪ್ರಯತ್ನದಲ್ಲಿ ಎಲ್ಲವನ್ನೂ ನಿರೀಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಿ ಸಾಕಷ್ಟು ಅಂತರದೊಂದಿಗೆ ಅಚ್ಚುಕಟ್ಟಾಗಿ ಚಿತ್ರಗಳನ್ನು ಪ್ರದರ್ಶಿಸಿದಾಗ ಕಲಾಪ್ರದರ್ಶನದ ಅಂದ ಮತ್ತಷ್ಟು ಹೆಚ್ಚುತ್ತದೆ. ಅದೇನೇ ಆದರೂ ವಿದ್ಯಾರ್ಥಿ ಪ್ರತಿಭೆ ಹೊರಜಗತ್ತಿಗೆ ತಿಳಿಯಲು ಅವಕಾಶಮಾಡಿಕೊಟ್ಟ ಇವರ ಶ್ರಮ ಸಾರ್ಥಕ. ಪ್ರಯತ್ನ ಮುಂದುವರಿಯಲಿ. ಯುವ ಪ್ರತಿಭೆಗಳು ಬೆಳಗಲಿ.
ಉಪಾಧ್ಯಾಯ ಮೂಡುಬೆಳ್ಳೆ