ಕಲಬುರಗಿ: ಶೋಷಣೆ ತಡೆಯಲು ಮತ್ತು ಅದರ ವಿರುದ್ಧ ಧ್ವನಿ ಎತ್ತಲು ಹೋರಾಟವೊಂದೇ ಮಾರ್ಗವಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಸ್ಥಾಪಕ ಡಾ| ವಿಠಲ್ ದೊಡ್ಡಮನಿ ಹೇಳಿದರು. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಲಿತ ಜನಜಾಗೃತಿ ವೇದಿಕೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಣೆ ವಿರುದ್ಧ ಹೋರಾಟ ಮಾಡಲು ಬಾಬಾ ಸಾಹೇಬ ಅಂಬೇಡ್ಕರ್ ಅವರಂತೆ ನಾವು ಹೋರಾಟವನ್ನೇ ದಾರಿಯನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದರು. ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಅನ್ಯಾಯ ಹೆಚ್ಚುತ್ತಲೇ ಇದೆ. ಈ ಶೋಷಣೆ ಮುಕ್ತವಾಗುತ್ತಿಲ್ಲ.
ದೇಶದಲ್ಲಿ ದಲಿತರ ಮೇಲೆ ಶೋಷಣೆ ನಿಲ್ಲುವವರೆಗೂ ಹೋರಾಟ ರೂಪಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ದಲಿತರು ಇಂದು ಕೇವಲ ಮೀಸಲಾತಿಯನ್ನೇ ಆಧಾರವಾಗಿಟ್ಟುಕೊಂಡು ಹೋಗುವುದಕ್ಕಿಂತ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳಬೇಕು.
ಇದರಿಂದ ಇನ್ನಷ್ಟು ಸಂಘಟಿತವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಬಾಬಾ ಸಾಹೇಬರು ಒಂದು ಅಸ್ತ್ರ ನೀಡಿರುವುದರಿಂದ ಇವತ್ತು ಸ್ವಲ್ಪ ಬೆಳೆಯಲು ಸಾಧ್ಯವಾಗಿದೆ. ಅದನ್ನು ಇನ್ನಷ್ಟು ಸಮಗ್ರವಾಗಿ ಬಳಕೆ ಮಾಡಿ ಸಮುದಾಯದ ಒಟ್ಟು ಬೆಳವಣಿಗೆಗೆ ಕಾರಣವಾಗುವಂತೆ ಮಾಡಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೂರ್ಯಕಾಂತ ನಿಂಬಾಳಕರ್, ಮುಖಂಡರಾದ ರಾಜಕುಮಾರ ಕಟ್ಟಿಮನಿ, ವೇದಿಕೆಯ ಅಧ್ಯಕ್ಷ ರಾಜಕುಮಾರ ಹುಗ್ಗಿ ಹಾಜರಿದ್ದರು.