ಹೊಸದಿಲ್ಲಿ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ(javelin thrower) ನೀರಜ್ ಚೋಪ್ರಾ (Neeraj Chopra) ಮತ್ತು ಅವರ ದೀರ್ಘಕಾಲದ ಕೋಚ್ ಜರ್ಮನಿಯ ಕ್ಲಾಸ್ ಬಾರ್ಟೋನಿಟ್ಜ್(Klaus Bartonietz ) ನಡುವಿನ ಅತ್ಯಂತ ಯಶಸ್ವಿ ಪಾಲುದಾರಿಕೆ ಐದು ವರ್ಷಗಳ ಜತೆಗಾರಿಕೆಯ ನಂತರ ಕೊನೆಗೊಳ್ಳಲಿದೆ.
75 ರ ಹರೆಯದ ಜರ್ಮನ್ ನ ಬಾರ್ಟೋನಿಟ್ಜ್ ಅವರು ಚೋಪ್ರಾ ಅವರೊಂದಿಗೆ ಬೇರೆಯಾಗಲು ಅವರ ವಯಸ್ಸು ಮತ್ತು ಕುಟುಂಬದ ಬದ್ಧತೆಗಳನ್ನು ಉಲ್ಲೇಖಿಸಿದ್ದಾರೆ.
“ಬಾರ್ಟೋನಿಟ್ಜ್ ಅವರಿಗೆ 75 ವರ್ಷ ಮತ್ತು ಅವರು ಈಗ ತಮ್ಮ ಕುಟುಂಬದೊಂದಿಗೆ ಇರಲು ಬಯಸುತ್ತಿದ್ದಾರೆ. ಹೆಚ್ಚಿನ ಪ್ರಯಾಣವನ್ನು ಬಯಸುವುದಿಲ್ಲ. ತರಬೇತುದಾರರಾಗಿ ಮುಂದುವರಿಯಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಯೋಮೆಕಾನಿಕ್ಸ್ ತಜ್ಞ ಬಾರ್ಟೋನಿಟ್ಜ್ ಅವರು 26 ವರ್ಷದ ಚೋಪ್ರಾ ಅವರೊಂದಿಗೆ 2019 ರಿಂದ ಅತ್ಯುತ್ತಮ ತರಬೇತಿ ನೀಡಿದ್ದಾರೆ.
ಬಾರ್ಟೋನಿಟ್ಜ್ ಅವರ ತರಬೇತಿ ಅಡಿಯಲ್ಲಿ, ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಚಿನ್ನ, ಪ್ಯಾರಿಸ್ ಗೇಮ್ಸ್ ಬೆಳ್ಳಿ, ವಿಶ್ವ ಚಾಂಪಿಯನ್ ಮತ್ತು ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದರು, ಜತೆಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದರು.