ಹೊಸದಿಲ್ಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಗೆಲುವಿನ ಬೆನ್ನಲ್ಲೇ ಬಿಜೆಪಿ(BJP) ಹೊಸ ಸರಕಾರ ರಚನೆಗೆ ಸಜ್ಜಾಗಿದೆ. ಚಂಡೀಗಢದಿಂದ ದೆಹಲಿಯವರೆಗೆ ಸಿದ್ಧತೆಗಳು ನಡೆಯುತ್ತಿದ್ದು ಬಿಜೆಪಿ ಉಸ್ತುವಾರಿ ಧಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿ ಬಿಪ್ಲಬ್ ಕುಮಾರ್ ದೇಬ್ ಅವರು ಮಾಜಿ ಸಿಎಂ, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸಿಎಂ ಸೈನಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ನಯಾಬ್ ಸಿಂಗ್ ಸೈನಿ ಅವರು ಅಕ್ಟೋಬರ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಕೇಂದ್ರ ಸಚಿವ ರಾವ್ ಇಂದ್ರಜಿತ್ ಮತ್ತು ಮಾಜಿ ಗೃಹ ಸಚಿವ ಅನಿಲ್ ವಿಜ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಲು ಅಸೆ ವ್ಯಕ್ತಪಡಿಸಿದ್ದರೂ, ಬಿಜೆಪಿ ಹೈಕಮಾಂಡ್ ಈಗಾಗಲೇ ಸೈನಿ ನೇಮಕವನ್ನು ಖಚಿತಪಡಿಸಿದೆ.
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಸರಕಾರ ರಚಿಸುವುದರೊಂದಿಗೆ, ಸಂಭಾವ್ಯ ಕ್ಯಾಬಿನೆಟ್ ಸದಸ್ಯರತ್ತ ಗಮನ ಹರಿಸಲಾಗಿದೆ. ಹಿಂದಿನ ಸೈನಿ ಆಡಳಿತದ ಎಂಟು ಮಂತ್ರಿಗಳ ಸೋಲು ಗಮನಾರ್ಹ ಪುನರ್ ರಚನೆಯನ್ನು ಸೂಚಿಸುತ್ತದೆ. ಹೊಸ ಮುಖಗಳು ಕ್ಯಾಬಿನೆಟ್‌ನಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ, ಅನಿಲ್ ವಿಜ್, ಮೂಲ್ ಚಂದ್ ಶರ್ಮ ಮತ್ತು ಮಹಿಪಾಲ್ ಧಂಡಾ ಅವರು ಪ್ರಮುಖ ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಹೈಕಮಾಂಡ್ ಮತ್ತು ಗೃಹ ಸಚಿವರು ನಾಯಬ್ ಸಿಂಗ್ ಸೈನಿ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಒತ್ತಿ ಹೇಳಿದ್ದಾರೆ. ಈ ಘೋಷಣೆಯು ಹರಿಯಾಣದಲ್ಲಿ ಪಕ್ಷದ ಯಶಸ್ವಿ ಪ್ರದರ್ಶನದ ನಂತರ ಸೈನಿ ಅವರ ನಾಯಕತ್ವದ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಜಾಟ್ ಪ್ರಾಬಲ್ಯದ ಹರಿಯಾಣದಲ್ಲಿ 54 ರ ಹರೆಯದ ನಯಾಬ್ ಸಿಂಗ್ ಸೈನಿ ಹಿಂದುಳಿದ ವರ್ಗಕ್ಕೆ (OBCs) ಸೇರಿದ ರಾಜಕಾರಣಿ. ಇದೆ ವರ್ಷ ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಸೈನಿ ಪಕ್ಷವನ್ನು ಐತಿಹಾಸಿಕ ಮೂರನೇ ಸತತ ಗೆಲುವಿನತ್ತ ಮುನ್ನಡೆಸುವ ಮೂಲಕ ಕೇಸರಿ ಪಕ್ಷಕ್ಕೆ ಹೊಸ ಉತ್ಸಾಹ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.