ದಾವಣಗೆರೆ: ಭಾರತೀಯ ಬ್ಯಾಂಕುಗಳ ಸಂಘದ ಶೇ. 2 ವೇತನ ಪರಿಷ್ಕರಣೆ ಪ್ರಸ್ತಾವನೆ ವಿರೋಧಿಸಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶ ಹಾಗೂ ಇತರೆ ಬೇಡಿಕೆಗಳ ತ್ವರಿತ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ವಿವಿಧ ಬ್ಯಾಂಕ್ ಉದ್ಯೋಗಿಗಳು ಬುಧವಾರ ಮಂಡಿಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟಿಸಿದ್ದಾರೆ.
ಎರಡು ದಿನಗಳ ಬ್ಯಾಂಕ್ ಮುಷ್ಕರದ ಪ್ರಥಮ ದಿನ 9 ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ ನೌಕರ ವಿರೋಧಿ ಧೋರಣೆ ಖಂಡಿಸಿದರು.
ವಾಸ್ತವವಾಗಿ 11ನೇ ದ್ವಿಪಕ್ಷೀಯ ವೇತನ ಪರಿಷ್ಕರಣೆ 2017ರ ನ. 1 ರಿಂದಲೇ ಜಾರಿಗೆ ಬರಬೇಕಿತ್ತು. ಒಂದು ವರ್ಷದ ಮೊದಲೇ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದರೂ 2017ರ ಮೇ ತಿಂಗಳಿನಿಂದ 15 ಸುತ್ತಿನ ಮಾತುಕತೆ ನಡೆದಿದ್ದರೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಫಲ ಪ್ರದವಾಗುವಂತಹ ನಿಟ್ಟಿನಲ್ಲಿ ಪ್ರಸ್ತಾವ ಬಂದಿಲ್ಲ ಎಂದು ಪ್ರತಿಭಟನಾ ನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೇತನ ಪರಿಷ್ಕರಣೆಗೆ ಸಂಬಂಧವಾಗಿ ಈಚೆಗೆ ನಡೆದ ಸಭೆಯಲ್ಲಿ ಶೇ. 2ರಷ್ಟು ವೇತನ ಪರಿಷ್ಕರಣೆ ಮಾಡುವ ಹಾಗೂ ವೇತನ ಶ್ರೇಣಿ-3ರ ವರೆಗೆ ಬರುವ ಅಧಿಕಾರಿಗಳಿಗೆ ಮಾತ್ರವೇ ವೇತನ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಮುಂದಿಡಲಾಗಿತ್ತು. ಆದರೆ, ಈ ಪ್ರಸ್ತಾವನೆಗೆ ನೌಕರ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ ಎಂದು ತಿಳಿಸಿದರು.
ವೇತನ ಪರಿಷ್ಕರಣೆ ಮಾಡದೇ ಇರುವುದಕ್ಕೆ ಕಾರಣ ಬ್ಯಾಂಕುಗಳು ಲಾಭದಾಯಕವಾಗಿ ನಿರ್ವಹಿಸುತ್ತಿಲ್ಲ ಎಂಬುದು ಸರ್ಕಾರದ ನಿಲುವು. ಆದರೆ, ಪ್ರತಿ ವರ್ಷ ಬ್ಯಾಂಕುಗಳ ಒಟ್ಟಾರೆ ಲಾಭಾಂಶ ಹೆಚ್ಚುತ್ತಲೇ ಇದೆ. ಕಳೆದ 10 ವರ್ಷಗಳಲ್ಲಿ ಬ್ಯಾಂಕುಗಳ ಲಾಭದ ಶೇ. 70 ರಷ್ಟನ್ನು ವಸೂಲಾಗದ ಸಾಲಗಳಿಗೆ ಮೀಸಲಿಡಲಾಗಿದೆ.
ಇದರಿಂದಲೇ ನಷ್ಟ ಕಂಡುಬರುತ್ತಿದೆಯೇ ಹೊರತು ಬ್ಯಾಂಕುಗಳ ಕಳಪೆ ನಿರ್ವಹಣೆಯಿಂದ ಅಲ್ಲ. ನಿವ್ವಳ ಲಾಭದ ಗಣನೀಯವಾದ ಕುಸಿತದ ಹೊಣೆಗಾರಿಕೆ ಉದ್ಯೋಗಿಗಳ ಮೇಲೆ ಹೇರುವುದು ಮತ್ತ ವೇತನ ಪರಿಷ್ಕರಣೆ ಮಾಡದೇ ಇರುವುದಕ್ಕೆ ಆ ಕಾರಣ ಹೇಳುವುದು ಸರಿಯಲ್ಲ. ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿ ಸಂಬಂಧಿತರಿಗೆ ಸೂಕ್ತ ನಿರ್ದೇಶನ ನೀಡಿ ಬ್ಯಾಂಕ್ ಉದ್ಯೋಗಿಗಳಿಗೆ ಗೌರವಯುತವಾದ ವೇತನ ಹೆಚ್ಚಳವಾಗುವ ಹಾಗೇ ನೋಡಿಕೊಳ್ಳಬೇಕಾಗಿದೆ.
ಇಲ್ಲವಾದರೆ ಬ್ಯಾಂಕ್ ನೌಕರರ ಸಂಘಟನೆಗಳು ಅನಿವಾರ್ಯವಾಗಿ ಅನಿರ್ದಿಷ್ಟವಾಗಿ ಮುಷ್ಕರದಂತಹ ತೀವ್ರ ಹೋರಾಟವನ್ನು ನಡೆಸುವ ಪರಿಸ್ಥಿತಿ ತಲೆದೋರಬಹುದು ಎಂದು ಎಚ್ಚರಿಸಿದರು. ಮುಖಂಡರಾದ ಕೆ. ರಾಘವೇಂದ್ರ ನಾಯರಿ, ಕೆ.ಎನ್. ಗಿರಿರಾಜ್, ಹರೀಶ್ ಪೂಜಾರಿ, ಜಿ. ರಂಗಸ್ವಾಮಿ, ಅಜಿತ್‌ಕುಮಾರ್ ನ್ಯಾಮತಿ, ಎಸ್. ಪ್ರಶಾಂತ್, ಕೆ. ವಿಶ್ವನಾಥ್ ಬಿಲ್ಲವ, ತಿಪ್ಪೇಸ್ವಾಮಿ, ವಾಗೀಶ್, ಪುರುಷೋತ್ತಮ್, ಜಮೀರ್ ಅಹಮದ್, ದತ್ತಾತ್ರೇಯ ಮೇಲಗಿರಿ, ಶಿವಕುಮಾರ್, ನಾಗವೇಣಿ ನರೇಂದ್ರಕುಮಾರ್, ಸುಜಯಾ ನಾಯಕ್, ಜಯಲಕ್ಷ್ಮಿ, ಕವಿತಾಬಾಯಿ, ಭಾರತಿ ಇತರರು ಇದ್ದರು.